ರಾಜ್ಯದಲ್ಲಿ ವಾರಾಂತ್ಯದಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ರಾಜ್ಯದ ಕೆಲವೆಡೆ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ವಾರಾಂತ್ಯದಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಮಳೆಯಾಗಲಿದೆ. ಆ ನಂತರವೂ ಒಂದು ವಾರ ಮಳೆ ಮುಂದುವರೆಯಲಿದೆ.ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಏರಿಕೆಯಾಗಿರುವುದರಿಂದ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿ ಜನರು ಬಸವಳಿದ್ದಾರೆ. ತಾಪಮಾನ ಏರಿಕೆಯಿಂದಾಗಿ ಬಹಳಷ್ಟು ಕಡೆಗಳಲ್ಲಿ ಚದುರಿದಂತೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುತ್ತಿದೆ. ಇದೇ ರೀತಿ ಅಲ್ಲಲ್ಲಿ ಮಳೆ ಮುಂದುವರೆಯಲಿದೆ.

ಆದರೆ, ಏ.28, 29ರ ನಂತರ ಮಳೆ ಚೇತರಿಕೆ ಕಾಣಲ್ಲಿದೆ. ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು, ಪೂರ್ವ ಭಾಗದ ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು,ಕೋಲಾರ, ಹಾಸನ, ರಾಮನಗರ ಜಿಲ್ಲೆಗಳಲ್ಲಿ 50 ಮಿ.ಮೀ.ವರೆಗೂ ವ್ಯಾಪಕ ಮಳೆಯಾಗಲಿದೆ. ಕೆಲವೆಡೆ 80 ಮಿ.ಮೀ.ವರೆಗೂ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅವರು ತಿಳಿಸಿದರು.

ಪೂರ್ವ ಭಾಗದ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದ ಮಳೆಯಾಗಲಿದೆ. ಒಟ್ಟಾರೆ ಮೇ 5ರವರೆಗೂ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಸಾಧಾರಣ ಮಳೆ ಅಂದರೆ, 20 ಮಿ.ಮೀ.ವರೆಗೂ ಆಗಬಹುದು. ಆದರೆ, ಕರಾವಳಿ ಹಾಗೂ ಮಲೆ ನಾಡು ಭಾಗದಲ್ಲೂ ವ್ಯಾಪಕವಾದ ಹೆಚ್ಚಿನ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ.

ಇದನ್ನೂ ಓದಿ : ಜೂನ್.5ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ – ಹವಾಮಾನ ಇಲಾಖೆ

ಸದ್ಯಕ್ಕೆ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಕೆಲವೆಡೆ ಗಾಳಿ, ಮಿಂಚು, ಗುಡಿಗಿನಿಂದ ಕೂಡಿದ ಮಳೆಯಾಗಬಹುದು. ಸಂಜೆ ಹಾಗೂ ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ .

Donate Janashakthi Media

Leave a Reply

Your email address will not be published. Required fields are marked *