ಬೆಂಗಳೂರು: ಶುಕ್ರವಾರದಿಂದ ರಾಜ್ಯವನ್ನು ಪ್ರವೇಶಿಸಿದ ನೈಋತ್ಯ ಮುಂಗಾರು ಮಾರುತಗಳು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಆರಂಭಿಕವಾಗಿಯೇ ಭಾರೀ ಮಳೆಯ ಸುರಿಸಿದೆ. ಇಂದು ಉತ್ತರ ಒಳನಾಡು ಪ್ರವೇಶಿಸಲಿರುವ ಮಾರುತಗಳು ಇಡೀ ರಾಜ್ಯಕ್ಕೆ ಮುಂಗಾರು ಮಾರುತಗಳು ಆರಂಭವಾಗಿದೆ. ಮುಂದಿನ 4 ತಿಂಗಳು ಮಳೆಗಾಲ ಮುಂದುವರೆಯಲಿದೆ.
ವಾಡಿಕೆಯಂತೆ ಜೂನ್.1ರಂದು ಪ್ರವೇಶವಾಗಬೇಕಿದ್ದ ಮುಂಗಾರು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದ ಮೂಲಕ ರಾಜ್ಯವನ್ನು ಪ್ರವೇಶ ಪಡೆದಿದೆ.
‘ಕರ್ನಾಟಕ ರಾಜ್ಯಕ್ಕೆ ಮುಂಗಾರು ಜೂ.5ರ ನಂತರ ಪ್ರವೇಶಿಸುವುದೆಂದು ನಿರೀಕ್ಷಿಸಲಾಗಿತ್ತು. ಮುಂಗಾರು ಮಾರುತಗಳು ಒಂದು ದಿನ ಮುನ್ನವೇ ರಾಜ್ಯವನ್ನು ಪ್ರವೇಶಿಸಿವೆ. ಇದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶುಕ್ರವಾರ (ಜೂ.4) ಧಾರಾಕಾರ ಮಳೆಯಾಗಿದೆ. ’ ಎಂದು ಹವಾಮಾನ ಇಲಾಖೆಐ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದ್ದಾರೆ.
ಮೊದಲ ದಿನವೇ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಇದೇ ರೀತಿ ಜೂನ್ 6ರವರೆಗೂ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಗುಡುಗು ಸಹಿ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ.
ಇಂದು ಅತ್ಯಧಿಕ ಮಳೆ ಬೀಳುವುದರಿಂದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಇಂದಿನಿಂದ (ಜೂನ್ 5) ಎರಡು ದಿನಗಳು ಭಾರೀ ಮಳೆಯಾಗುವ ಕಾರಣದಿಂದ ಯೆಲ್ಲೋ ಅಲರ್ಟ್ ಘೋಷಸಿದ ಜಿಲ್ಲೆಗಳ ವಿವರ ಹೀಗಿವೆ: ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳು.
ಇಂದು (ಜೂನ್ 5) ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಅಂಕಿಅಂಶಗಳ ಪ್ರಕಾರ ನಿನ್ನೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ನಿನ್ನೆ ಒಟ್ಟಾರೆ 37.2 ಎಂಎಂ ಮಳೆಯಾಗಿದೆ. ಇದು ಶೇ.115 ಪಟ್ಟು ಹೆಚ್ಚಿನ ಮಳೆಯೆಂದು ಹೇಳಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ನೆನ್ನೆ ಸಂಜೆ 5.30ರವರೆಗೂ 9 ಎಂಎಂ ಮಳೆಯಾಗಿದ್ದು, ರಾತ್ರಿ 8.30ರವರೆಗೆ 12.4 ಎಂಎಂ ಮಳೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 5.30ರವರೆಗೆ 25.6 ಎಂಎಂ ಮಳೆಯಾಗಿದ್ದು, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ರಾತ್ರಿ 8.30ರ ವೇಳೆಗೆ 44.2ಎಂಎಂ ಮಳೆಯಾಗಿದೆ.
ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೂನ್ 7ರವರೆಗೂ ಮಳೆಯಾಗಲಿದೆ. ಜೂನ್ 5 ಹಾಗೂ 6 ರಂದು ಗುಡುಗು ಸಹಿತ ಜೋರು ಮಳೆ ಬೀಳಲಿದೆ. ನಂತರ ಜೂನ್ 7 ರಂದು ಮಳೆ ಅಬ್ಬರ ತುಸು ಕಡಿಮೆಯಾಗುವ ಸಾಧ್ಯತೆಗಳಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.