ಬೆಂಗಳೂರು : ರಾಜ್ಯಾಧ್ಯಂತ ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೆ ಸುರಿದಂತ ಆಲಿಕಲ್ಲು ಸಹಿತ ಭಾರೀ ಮಳೆಗೆ ರಾಜ್ಯದ ವಿವಿಧೆಡೆ ಐವರು ಮೃತಪಟ್ಟಿದ್ದಾರೆ. ಇನ್ನೂ ಎರಡು ದಿನ ವರುಣಾಘಾತ ಉಂಟಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದಲ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾದ ಅವಘಡದಲ್ಲಿ ಐವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ನಾರಾಣಿ, ಮುಂಡಾಜೆ, ಕಡಬ ತಾಲೂಕಿನ ಕೆಂಬಾರು, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ, ತಲಕಾವೇರಿ, ಕುಶಾಲನಗರದಲ್ಲಿ ಉತ್ತಮ ಮಳೆ ನಿನ್ನೆ ಆಗಿದೆ.
ಹುಬ್ಬಳ್ಳಿ-ಧಾರವಾಡ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ ಸೇರಿದಂತೆ ವಿವಿಧ ತಾಲೂಕಿನಲ್ಲಿ ನಿನ್ನ ಭಾರೀ ಮಳೆಯಾಗಿದ್ದರೇ, ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯಲ್ಲೂ ಗುಡುಗು ಸಹಿತ ಒಂದುಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ.
ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ಕಾರೊಂದು ಮಳೆ ನೀರಿನಲ್ಲಿ ಮುಳುಗಿದ ಪರಿಣಾಮ ಇನ್ಪೋಸಿಸ್ ಉದ್ಯೋಗಿಯಾಗಿದ್ದಂತ ಭಾನುರೇಖಾ ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಸಮೀಪದ ಗುಡೇಕೋಟೆಯ ಡಿ.ಸಿದ್ಧಾಪುರ ಗ್ರಾಮ ಪಂಚಾಯ್ತಿ ಸದಸ್ಯರೂ ಆದ ಮಲ್ಲಿಕಾರ್ಜುನ(43) ಹೊಲದಲ್ಲಿ ಬೆಳೆಗೆ ನೀರು ಹಾಯಿಸುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದರೇ, ಕೊಪ್ಪಳದ ಶಿವಪುರ ಗ್ರಾಮದ ಶ್ರೀಕಾಂತ್ ದೊಡ್ಡಗೌಡರ(16), ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೊಬಳಿಯ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್(40) ಕೂಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಬೆಟ್ಟದಪುರ ಸಮೀಪದ ಬಾರಸೆ ಗ್ರಮಾದಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಬಿರುಗಾಳಿ ಸಹಿತ ಮಳೆಯಿಂದ ವಿದ್ಯುತ್ ಕಂಬ ಉರುಳಿ ಬಿದ್ದು ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ವಾಮಿ(18) ಸಾವನ್ನಪ್ಪಿದ್ದರೇ, ಹರೀಶ್ (42) ಮತ್ತು ಸಂಜಯ್ (19) ತೀವ್ರವಾಗಿ ಗಾಯಗೊಂಡಿದ್ದಾರೆ.
ಧರೆಗುರುಳಿದ ಮರಗಳು ರಸ್ತೆ ಬಂದ್ : ಮಾಗಡಿ ರಸ್ತೆ, ರಾಜಾಜಿನಗರ, ಪಂಚಮಶೀಲನಗರ, ಬೆಂಗಳೂರು ಪ್ರೆಸ್ ಕ್ಲಬ್, ನಾಗರಬಾವಿ, ಸ್ಯಾಂಕಿರಸ್ತೆ, ಲಿಂಗರಾಜಪುರ, ಕ್ರೈಸೆಂಟ್ ರಸ್ತೆ, ಬಿನ್ನಿಮಿಲ್, ಬಸವನಗುಡಿ, ವಿಶ್ವೇಶ್ವರಯ್ಯಪುರ, ಜಾಲಹಳ್ಳಿ, ಇಂದಿರಾನಗರ, ಮತ್ತಿಕೆರೆ, ಮಲ್ಲೇಶ್ವರ, ಹೊಸಕೆರೆಹಳ್ಳಿ, ಹನುಮಂತ ನಗರ, ಜೆ.ಪಿ. ನಗರ, ಕೆ.ಜಿ.ರಸ್ತೆ, ಶೇಷಾದ್ರಿಪುರಂ, ಗಾಂಧಿನಗರ, ಕುಮಾರಸ್ವಾಮಿ ಲೇಔಟ್, ರಾಜರಾಜೇಶ್ವರಿನಗರ, ವಿಠಲ್ ಮಲ್ಯ ರಸ್ತೆ, ಸಂಪಂಗಿರಾಮನಗರ, ಜಯಮಹಲ್ ಪ್ಯಾಲೆಸ್ ರಸ್ತೆ, ಆರ್.ಟಿ. ನಗರ ಸೇರಿ ನಗರ ನಾನಾ ಭಾಗಗಳಲ್ಲಿ ಮರಗಳು ರಸ್ತೆಗೆ ಬಿದ್ದಿವು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿ, ಸಂಚಾರಿ ಪೊಲೀಸರು ಮಾರ್ಗ ಬದಲಾಯಿಸಿದರು. ಮತ್ತೊಂದೆಡೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಹರಸಾಹಸಪಟ್ಟರು.
ಶಿವಾನಂದ ವೃತ್ತ ಸಂಪೂರ್ಣ ಜಲಾವೃತಗೊಂಡು ಸುಮಾರು 3 ರಿಂದ 4 ಅಡಿ ನೀರು ತುಂಬಿಕೊಂಡಿತು. ಇನ್ನು ಈ ಸಮಯದಲ್ಲಿ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ತೆರಳದಂಥಹ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಾರ್ಗದಲ್ಲಿ ಏಕಮುಖವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು. ಪ್ಯಾಲೇಸ್ ಗುಟ್ಟಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಮಳೆ ನೀರಿನಿಂದ ಮುಚ್ಚಿ ಹೋಗಿ ಹಸಿರು ರಸ್ತೆಯಂತೆ ಕಂಡು ಬಂದಿತು. ಮಳೆಗೆ ಮರದ ಎಲೆಗಳು ಉದುರಿ ರಸ್ತೆ ತುಂಬಲ್ಲಾ ಹರಡಿಕೊಂಡಿದ್ದವು.
ಮಹಾಲಕ್ಷ್ಮೀಲೌಟ್‌ನಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಒದ್ದೆಯಾದವು. ಕೆ.ಆರ್.ಪುರ, ರಾಮಮೂರ್ತಿನಗರ, ಕೌದೇನಹಳ್ಳಿ, ಐಟಿಐ ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿಯಿತು. ರಾಮಮೂರ್ತಿನಗರದ ತಗ್ಗು ಪ್ರದೇಶದಲಿ ಇರುವ ಮನೆಗಳಿಗೆ ಹಾಗೂ ಅಂಗಡಿಗಳಿಗೂ ನೀರು ನುಗ್ಗಿತು. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಈವರೆಗೆ 400 ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿ ಕಂಟ್ರೋಲ್ ರೂಂಗೆ ಬಂದಿವೆ.
ನೆಲಕ್ಕುರುಳಿದ ವಿದ್ಯುತ್ ಕಂಬಗಳು : ಗಾಳಿ ಮತ್ತು ಮಳೆಯಿಂದ ಹತ್ತಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಶನಿವಾರ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದ ಪರಿಣಾಮ ಹಲವು ಬಡಾವಣೆಗಳಲ್ಲಿ ಬೆಳಕಿಲ್ಲದೆ ನಿವಾಸಿಗಳು ಪರದಾಡಿದರು. ಅನೇಕ ಬಡಾವಣೆಗಳಲ್ಲಿ ಇನ್ನು ಕೂಡ ಬೆಸ್ಕಾಂ ಸಿಬ್ಬಂದಿ ನೆಲಕ್ಕೆ ಬಿದ್ದಿರುವ ವಿದ್ಯುತ್ ಕಂಬಗಳ ತೆರವುಗೊಳಿಸುವ ಕಾರ್ಯ ಶುರು ಮಾಡಿಲ್ಲ. ಇದರ ಮಧ್ಯೆಯೇ ಇಂದು ಕೂಡ ಮತ್ತೆ ಸುರಿದ ಗಾಳಿ ಸಹಿತ ಮಳೆಗೆ ಇನ್ನಷ್ಟು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ : ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ ಕುಟುಂಬ ವರ್ಗದವರನ್ನು ಸಿದ್ದರಾಮಯ್ಯ ಇಂದು ಸಂಜೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ತಕ್ಷಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ್ದರ ಕುರಿತು ತನಿಖೆ ನಡೆಸುವಂತೆ ಸಿಎಂ ಆದೇಶಿಸಿದ್ದಾರೆ. ಮಳೆ ಅನಾಹುತದ ಮಾಹಿತಿ ದೊರೆಯುತ್ತಿದ್ದಂತೆ ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರ ಜತೆ ತುರ್ತು ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮಳೆಯಿಂದ ಉರುಳಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಮಳೆ ಅನಾಹುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿ ಸಾರ್ವಜನಿಕರಿಗೆ ತೊಂದರೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.