ದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕಳೆದ 11 ತಿಂಗಳಿಂದಲೂ ದೇಶದ ವಿವಿದೆಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ಆರು ತಾಸುಗಳ ರೈಲು ತಡೆ ಆಂದೋಲನ ಹಮ್ಮಿಕೊಂಡಿದ್ದವು.
ಇದನ್ನು ಓದಿ: ಲಖಿಂಪುರ ಖೇರಿ ದುರ್ಘಟನೆ: ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಗೊಳಿಸಲು ರೈತರಿಂದ ರೈಲು ತಡೆ
ಉತ್ತರಪ್ರದೇಶದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ಅಕ್ಟೋಬರ್ 03ರಂದು ನಡೆದ ಹಿಂಸಾಚಾರದಲ್ಲಿ ಆರೋಪಿ ಎನ್ನಿಸಿರುವ ಆಶಿಶ್ ಮಿಶ್ರಾ ತಂದೆ ಅಜಯ್ ಮಿಶ್ರಾರನ್ನು ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಇಂದು ರೈಲು ತಡೆ ಪ್ರತಿಭಟನಾ ಧರಣಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ದೇಶಾದ್ಯಂತ ರೈಲು ತಡೆ ಆಂದೋಲನ ನಡೆಸುತ್ತಿರುವ ಎಲ್ಲ ರೈತ ಸಂಘಟನೆಗಳ ಹೋರಾಟಗಾರರು ರೈಲುಗಳನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಪಂಜಾಬ್, ಹರಿಯಾಣಗಳಲ್ಲಿ ರೈಲು ತಡೆ ಆಂದೋಲನದಿಂದ ಪ್ರಯಾಣಿಕರ ಸಂಚಾರಕ್ಕೆ ವ್ಯತ್ಯಯ ಉಂಟಾದವು. ಒಟ್ಟಾರೆಯಾಗಿ 184 ಪ್ರದೇಶಗಳ 160 ರೈಲುಗಳ ಮೇಲೆ ರೈಲು ತಡೆ ಆಂದೋಲನ ನಡೆದಿದೆ. ಬಹುತೇಕ ರೈತರು ರೈಲ್ವೆ ಹಳಿಗಳ ಮೇಲೆಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಇದರಿಂದಾಗಿ ವಿವಿಧೆಡೆಯಿಂದ ಸಂಚಾರ ಮಾಡಬೇಕಿದ್ದ 43 ರೈಲುಗಳು ರದ್ದುಗೊಂಡಿವೆ. 50 ರೈಲುಗಳು ಭಾಗಶಃ ರದ್ದಾಗಿವೆ. ಇನ್ನು 63 ರೈಲುಗಳನ್ನು ಅವು ಹೋಗಬೇಕಿದ್ದ ಸ್ಥಳಕ್ಕೆ ಹೋಗುವ ಮೊದಲು ತಡೆಯಲಾಗಿದೆ ಎಂದು ಉತ್ತರ ರೈಲ್ವೆ ವಲಯದ ಸಿಪಿಆರ್ಒ ತಿಳಿಸಿದ್ದಾರೆ.
ಚಳವಳಿ ನಿರತ ರೈತರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಅಗತ್ಯವಿರುವಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಲುಧಿಯಾನಾ ಪೊಲೀಸ್ ಅಧಿಕಾರಿ ದೀಪಕ್ ಪರೀಕ್ ತಿಳಿಸಿದ್ದಾರೆ.
ದೆಹಲಿಗೆ ಬರುವ ಹಲವು ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದ್ದು, ರೈಲು ತಡೆ ಆಂದೋಲನದಿಂದ ಇಲ್ಲಿಯವರೆಗೆ ಒಟ್ಟು 42 ರೈಲುಗಳು ತುಂಬ ತಡವಾಗಿ ಸಂಚಾರ ಮಾಡಿವೆ. ನಾವು ರೈಲುಗಳ ವೇಳಾಪಟ್ಟಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯಕ್ಕಂತೂ ಪ್ರಮುಖ ಮೂರು ಮಾರ್ಗಗಳಾದ ಪಾಲ್ವಾ, ಜಿಂದ್ ಮತ್ತು ಅಂಬಾಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಕಡೆಗಳಲ್ಲಿ ಆಂದೋಲನ ನಡೆಯುತ್ತಿರುವ ರೈಲ್ವೆ ನಿಲ್ದಾಣಗಳು, ಹಳಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ಯಾವುದೇ ರೈಲು ಹಳಿಗಳ ಮೇಲೆ ಬೇರೇನೂ ಅವಘಡಗಳು ಸಂಭವಿಸಲಿಲ್ಲ.
ಚಂಡಿಘಡದ ಎಸ್ಎಎಸ್ ನಗರ ಜಿಲ್ಲೆಯ ದಪ್ಪರ್ ರೈಲ್ವೆ ಸ್ಟೇಶನ್ನಲ್ಲಿ ರೈಲು ನಿಂತಿದ್ದು, ರೈತರ ಆಂದೋಲನದಿಂದಾಗಿ ಮುಂದಕ್ಕೆ ಸಾಗಿಲ್ಲ. ಇದರಿಂದ ಅದರಲ್ಲಿದ್ದ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನು ಹರಿಯಾಣದ ಬಹದ್ದೂರ್ಗಡ್ನಲ್ಲಿ ರೈಲ್ವೆ ಹಳಿಗಳನ್ನು ರೈತರು ನಿರ್ಬಂಧಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯವನ್ನು ಮುಂದೂಡಲಾಗಿದೆ. ಇದರ ಹೊರತಾಗಿ ಓಡಿಶಾ, ರಾಜಸ್ಥಾನಗಳಲ್ಲೂ ರೈತರ ಪ್ರತಿಭಟನೆಯಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.