ಬೆಂಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಹಲವು ಪ್ರಮುಖ ಅಪರಾಧಗಳ ಹಿಂದಿನ ಸೂತ್ರಗಳನ್ನು ಹೆಣೆದಿದ್ದು ಜೈಲಿನಿಂದಲೇ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದರು.
ದೂರವಾಣಿ ಕದ್ದಾಲಿಕೆ ವಿಚಾರಕ್ಕೆ ಶಾಸಕ ಆರವಿಂದ್ ಬೆಲ್ಲದ್ ತನ್ನ ದೂರವಾಣಿ ಕದ್ದಾಲಿಕೆ ಮಾಡುತ್ತಿರುವುದು ಹಾಗೂ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ತನಗೆ ದೂರವಾಣಿ ಕರೆ ಮಾಡಿದ್ದ ಎಂದು ಆರೋಪ ಮಾಡಿದ್ದರು.
ಜೈಲಿನಲ್ಲಿ 26 ಚಾಕು, 200 ಗ್ರಾಂ ಗಾಂಜಾ, ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಗಾಂಜಾ ಹೊಂದಿದ್ದ 84 ಜನರನ್ನು ಬಂಧಿಸಲಾಗಿದೆ. ಮಾರಕಾಸ್ತ್ರ ಇಟ್ಟುಕೊಂಡಿದ್ದ 48 ರೌಡಿಗಳನ್ನು ಬಂಧಿಸಲಾಗಿದೆ.
ಇದನ್ನು ಓದಿ: ಟ್ಯಾಪಿಂಗ್ ಪ್ರಕರಣ : ತಪ್ಪು ನಂಬರ್‌ನಿಂದ ನಾಯಕತ್ವ ಬದಲಾವಣೆಯ ಗುಟ್ಟು ರಟ್ಟಾಯ್ತು!?
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹಾಗೂ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್ ಕರೀಂ ಆಲಿ ಕೊಲೆಯ ಹಿಂದಿನ ಸಂಚು ಸಹ ಜೈಲಿನಲ್ಲೇ ತಂತ್ರ ರೂಪಿಸಲಾಗಿತ್ತು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ನಿಖರವಾಗಿವಾಗಿ ತಿಳಿದು ಧಾಳಿ ನಡೆಸಿದರು.
ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು ಇಂದು ಮುಂಜಾನೆ ಐದು ಗಂಟೆಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಓರ್ವ ಡಿಸಿಪಿ ನೇತೃತ್ವದ ತಂಡ ಐದು ಮಂದಿ ಎಸಿಪಿ ಹಾಗೂ 120 ಪೊಲೀಸ್ ಸಿಬ್ಬಂದಿಗಳೊಂದಿಗೆ ದಿಡೀರ್ ದಾಳಿ ನಡೆಸಿ 9 ಗಂಟೆವರಿಗೆ ಪರಿಶೀಲನೆ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ರೌಡಿಗಳು ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿದ್ದಲ್ಲದೆ, ಊಟದ ತಟ್ಟೆಗಳನ್ನೇ ಮಾರಕಾಸ್ತ್ರಗಳನ್ನಾಗಿ ಪರಿವರ್ತಿಸಿಕೊಂಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಇದರ ಜತೆಗೆ ಮೊಬೈಲ್‍ಗಳು, ಸಿಮ್‍ಗಳು, ಮಾದಕದ್ರವ್ಯ, ಗಾಂಜಾ, ಸ್ಮೋಕಿಂಗ್ ಪೈಪುಗಳು, ಚಾಕು, ಚೂರಿ ಸೇರಿದಂತೆ ಹಲವಾರು ಮಾರಕಾಸ್ತ್ರಗಳು ರೌಡಿಗಳ ಬಳಿ ಇರುವುದನ್ನು ಪತ್ತೆ ಮಾಡಲಾಗಿದೆ.
ರೌಡಿಗಳಿಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಎಚ್ಚರಿಕೆ ನೀಡಿ , ಜೈಲಿನಲ್ಲಿ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಹಾಗೂ ಜೈಲಿನಿಂದಲ್ಲೆ ಅಪರಾಧ ಕೃತ್ಯಗಳಿಗೆ ಸಂಚು ರೂಪಿಸುವುದು ಕಂಡಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಮಾದಕ ವಸ್ತು ಜಾಲ ನಿರ್ಮೂಲನೆ ನಮ್ಮ ಮೊದಲ ಆದ್ಯತೆ: ಪ್ರವೀಣ್ ಸೂದ್
ರೌಡಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದನ್ನು ಹತ್ತಿಕ್ಕಲು ರೌಡಿಗಳ ಮೇಲೆ ದಾಳಿ ನಡೆಸಲಾಗಿದೆ. ಜೈಲಿನಿಂದ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಮಾಹಿತಿಯಿಂದ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ ಎಂದು ಕಮಲ್ ಪಂತ್, ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹಾಡುಹಗಲೇ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ರೌಡಿಗಳ ತಂತ್ರಗಳ ಬಗ್ಗೆ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ. ರೌಡಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಅವುಗಳನ್ನು ಹತ್ತಿಕ್ಕಲು ನಗರದ ವಿವಿಧ ವಿಭಾಗಗಳಲ್ಲಿ ಪೊಲೀಸರು ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಕೇಂದ್ರ, ಪಶ್ಚಿಮ, ಉತ್ತರ, ಈಶಾನ್ಯ, ವೈಟ್ ಫೀಲ್ಡ್, ಪೂರ್ವ ಇತರ ವಿಭಾಗದಲ್ಲಿ ಪೊಲೀಸರು, ರೌಡಿಗಳು, ಹಳೆ ಕುಖ್ಯಾತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸೋನೆ ಮಳೆ ಚಳಿಯಲ್ಲೂ ಬಿಸಿ ಮುಟ್ಟಿಸಿ ಪರಿಶೀಲನೆ ನಡೆಸಿದ್ದಾರೆ.
ಎರಡು ಸಾವಿರಕ್ಕೂ ರೌಡಿಗಳ ವಾಸಸ್ಥಳಕ್ಕೆ ಧಾಳಿ:
ನಗರದ ವಿವಿಧ ವಿಭಾಗಗಳ ಸುಮಾರು 2,144 ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಮನೆಗಳಲ್ಲಿ ತಪಾಸಣೆ ಕಾರ್ಯ ಮಾಡಲಾಗಿದೆ. ಜೈಲಿನಲ್ಲೂ ಶೋಧ ಕಾರ್ಯ ನಡೆದಿದೆ. ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ನಗರದ ಎಲ್ಲಾ ವಿಭಾಗಗಳ ಪೊಲೀಸರಿಂದ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿರುವುದು ಕಂಡು ಬಂದಿದೆ.
ಕೇಂದ್ರ ವಿಭಾಗದಲ್ಲಿ ಸುಮಾರು 100 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ. ಕೆಲವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಅವರ ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ, ಕುಟುಂಬದ ವಿವರಗಳನ್ನು ಕಲೆಹಾಕಿ ಮುಂದೆ ರೌಡಿ ಚಟುವಟಿಕೆಗಳಲ್ಲಿ ತೊಡಗುವುದಾಗಲಿ, ಅಪರಾಧ ಕೃತ್ಯ ನಡೆಸುವುದು, ಬೇರೆಯವರಿಗೆ ನೆರವು ನೀಡುವುದಾಗಲಿ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ಈಶಾನ್ಯದಲ್ಲಿ ದಾಳಿ:
ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ 292ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. 152 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈಶಾನ್ಯ ವಿಭಾಗದಲ್ಲೂ ಪೊಲೀಸರ ದಾಳಿ ಮುಂದುವರೆದಿದ್ದು, ಮುಬಾರಕ್, ಸಿಕಂದರ್, ಅಜಯ್ ಸೇರಿದಂತೆ, ಹಲವು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: ರಾಜ್ಯಪಾಲರ ಹುದ್ದೆಗೆ ಲಂಚ-ನ್ಯಾಯಾಧೀಶರ ಘನತೆಗೆ ಧಕ್ಕೆ: ಹೈಕೋರ್ಟ್
ಯಲಹಂಕ, ಕೊತ್ತನೂರು, ವಿದ್ಯಾರಣ್ಯಪುರ ಸೇರಿದಂತೆ, ಹಲವು ಕಡೆ ದಾಳಿ ಮಾಡಿ, ಪಾಯಿಸನ್ ರಾಮ, ಛತ್ರಿ ಹೇಮಂತ, ಕೆಂಡಾ ವಿಷ್ಣು, ಕೊಳಿ ಜಗ್ಗ, ಮಂಡ್ಯ ರಕ್ಷಿತಾ ಮನೆಗಳನ್ನು ಪರಿಶೀಲಿಸಿದ್ದಾರೆ.
ಡಿ.ಜೆ.ಹಳ್ಳಿ, ಬಾಗೂರ್ ಲೇಔಟ್, ಕೆ.ಜಿ ಹಳ್ಳಿ, ಇಸ್ಲಾಂಪುರಂ ಸೇರಿದಂತೆ, ಅನೇಕ ಕಡೆ ಪೊಲೀಸರು ದಾಳಿ ನಡೆಸಿದ್ದು, ಆಗ್ನೇಯ ವಿಭಾಗದ ಪೊಲೀಸರಿಂದ ಸುಮಾರು 200ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.
ರೌಡಿ ಲಗ್ಗೆರೆ ಸೀನಾ, ಬಾಂಬ್ ನಾಗನ ಪುತ್ರ ಶಾಸ್ತ್ರಿ, ಸೈಲೆಂಟ್ ಸುನೀಲ, ಸೈಕಲ್ ರವಿ, ರಮೇಶ್ ಅಲಿಯಾಸ್ ಕುಳ್ಳಿ, ಆನಂದ, ಜಫ್ರು, ಯಶವಂತ, ಜಿಮ್ ವಿನಯ್, ರಘುನಂದನ ಅಲಿಯಾಸ್ ರಘು, ಅರುಣ್, ಶ್ರೀಕಾಂತ, ಆನಂದ ಅಲಿಯಾಸ್ ಮೆಡ್ಡ, ಪ್ರವೀಣ ಸೇರಿದಂತೆ ಅನೇಕ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಕಾಗದಪತ್ರ, ಚೆಕ್ ಬುಕ್, ಮಾರಕಾಸ್ತ್ರ, ಮಾದಕವಸ್ತುಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ವೈಟ್‌ಫೀಲ್ಡ್ ವಿಭಾಗದಲ್ಲಿ 102 ಕಡೆ ಪರಿಶೀಲನೆ ನಡೆಸಿ, 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕುಖ್ಯಾತ ರೌಡಿಶೀಟರ್‌ಗಳಾದ ಕಾಡುಬೀಸನಹಳ್ಳಿ ಜಗ್ಗ, ಸೋಮ, ರೋಹಿತ್ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ. ಯಲಹಂಕ ಪೊಲೀಸರ ದಾಳಿ ವೇಳೆ ಗಾಂಜಾ ಸಿಕ್ಕಿದ್ದು, ಲಾಲ ಎಂಬಾತನ ಮನೆಯಲ್ಲಿ ಐದು ಕೆಜಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.