ಜಾರ್ಖಂಡ್: ಕಾಂಗ್ರೆಸ್ ಸಂಸದ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಶನಿವಾರ (ಇಂದು) ಜಾರ್ಖಂಡ್‌ಗೆ ಭೇಟಿ ನೀಡಲಿರುವ ಅವರು, ರಾಜ್ಯದಲ್ಲಿ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದಾರೆ. ಚುನಾವಣೆ
ಸೀಟು ಹಂಚಿಕೆ ಒಪ್ಪಂದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. 81 ವಿಧಾನಸಭಾ ಸದಸ್ಯರ ಬಲವಿರುವ ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಶನಿವಾರ ಮತದಾರರು, ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಸಂವಿಧಾನ್ ಸಮ್ಮಾನ್ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಳಗೊಂಡಿರುವ ಆಡಳಿತಾರೂಢ ಇಂಡಿಯಾ ಒಕ್ಕೂಟ, ಸದ್ಯ ಪ್ರಣಾಳಿಕೆ ಮತ್ತು ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಚರ್ಚೆ ನಡೆಸುತ್ತಿದೆ. ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ಇದನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನು ಓದಿ : ಹರಿಯಾಣದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ
ಹರಿಯಾಣದಲ್ಲಿ ಸೋಲಿನ ಬಳಿಕ ಕಾಂಗ್ರೆಸ್ ಮತ್ತೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಕಾಂಗ್ರೆಸ್ ಅಂದುಕೊಂಡಷ್ಟು ಉತ್ತಮ ಪ್ರದರ್ಶನ ನೀಡಿಲ್ಲ. ಇದೀಗ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆಯಾಗಿದೆ. ಜಾರ್ಖಂಡ್‌ನಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ.
ಪ್ರತಿಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಈಗಾಗಲೇ ಸೀಟು ಹಂಚಿಕೆ ಒಪ್ಪಂದವನ್ನು ಪ್ರಕಟಿಸಿದೆ. 81 ಸ್ಥಾನಗಳಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು, ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು) 10 ಸ್ಥಾನಗಳು, ಜನತಾ ದಳ (ಯುನೈಟೆಡ್) 2 ಸ್ಥಾನಗಳು ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿವೆ.
ಬಿಜೆಪಿಯ ಜಾರ್ಖಂಡ್ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರ ಎಜೆಎಸ್‌ಯು ಜೊತೆಗಿನ ಭಿನ್ನಾಭಿಪ್ರಾಯಗಳ ವರದಿಗಳ ಹೊರತಾಗಿಯೂ ಒಪ್ಪಂದವನ್ನು ಘೋಷಿಸಿದರು, ಬಾರ್ಕಗಾಂವ್ ಕ್ಷೇತ್ರವನ್ನು ಬಿಟ್ಟುಕೊಡದೇ ಇರುವುದಕ್ಕೆ ಎಜೆಎಸ್‌ಯು ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಇದನ್ನು ನೋಡಿ : ಪಿಎಂಎಲ್‌ಎ ಮತ್ತು ಯುಎಪಿಎ – ಎರಡು ಕರಾಳು ಶಾಸನಗಳ ಆಳ ಅಗಲ Janashakthi Media