ಕೋಲಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲಿನ ಶಿಕ್ಷೆ ಹಾಗೂ ಸಂಸತ್ ಸದಸ್ಯತ್ವದ ಅನರ್ಹತೆ ಹಿನ್ನೆಲೆಯಲ್ಲಿ ಸಂವಿಧಾನದ ರಕ್ಷಣೆ ವಿಚಾರವನ್ನು ಮುಂದಿಟ್ಟುಕೊಂಡು ಬೃಹತ್ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದೆ. ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಲು ‘ಜೈ ಭಾರತ್’ ಸಮಾವೇಶಕ್ಕೆ ನಗರದಲ್ಲಿ ಕಾಂಗ್ರೆಸ್‌ನಿಂದ ಭರದ ತಯಾರಿಗಳು ನಡೆದಿದೆ.
ಏ. 10ರಂದು ಬೆಳಿಗ್ಗೆ 11.30ಕ್ಕೆ ಆರಂಭವಾಗಲಿರುವ ಸಮಾವೇಶದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಆಡಳಿತದ ಮೂರು ರಾಜ್ಯದ ಮುಖ್ಯಮಂತ್ರಿಗಳು, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ಪಾಲ್ಗೊಳ್ಳ ಲಿದ್ದಾರೆ. ಸಮಾವೇಶಕ್ಕೂ ಮುನ್ನ ಪ್ರತಿಭಟನಾ ರ‍್ಯಾಲಿ ನಡೆಸಲೂ ಯೋಜನೆ ರೂಪಿಸಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ : ಸಂಸತ್ ಸ್ಥಾನದಿಂದ ಅನರ್ಹ: ರಾಹುಲ್‌ಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ: ಖರ್ಗೆ ಆರೋಪ
20 ಎಕರೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ : ಸಮಾವೇಶಕ್ಕೆ ನಗರ ಹೊರ ವಲಯದ ಟಮಕದಲ್ಲಿ 11 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಪಕ್ಕದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿದ ಜಾಗದಲ್ಲಿ ಮೂರು ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ 20 ಎಕರೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಕನಿಕರ ಗಿಟ್ಟಿಸಿಕೊಳ್ಳಲು ಕಾರ್ಯಕ್ರಮ ? 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ‘ಮೋದಿ ಉಪನಾಮ’ ಉವಾಚ ಮಾಡಿದ ಕಾರಣ ರಾಹುಲ್ ಎರಡು ವರ್ಷ ಶಿಕ್ಷೆ ಹಾಗೂ ಸಂಸತ್ ಸದಸ್ಯತ್ವದ ಅನರ್ಹತೆಗೆ ಕಾರಣವಾಗಿದ್ದೇ ಕೋಲಾರ. ಹಾಗಾಗಿ, ಇಲ್ಲಿಂದಲೇ ಹೋರಾಟ ಆರಂಭಿಸಿ ಬಿಜೆಪಿಗೆ ಸಂದೇಶ ರವಾನಿಸಲು ಕಾಂಗ್ರೆಸ್ ಸಜ್ಜಾಗುತ್ತಿದೆ ಬಹುತೇಕ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಂದಲೇ ಚುನಾವಣಾ ಪ್ರಚಾರದ ಕಹಳೆ ಮೊಳಗಿಸಲು ಈ ವೇದಿಕೆಯನ್ನೇ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ರಾಹುಲ್ ಮೇಲಿನ ಶಿಕ್ಷೆ ಹಾಗೂ ಅನರ್ಹತೆಯ ಕನಿಕರ ಗಿಟ್ಟಿಸಿಕೊಳ್ಳುವ ವೇದಿಕೆ ಇದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಇಂದು ದೇಶದಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ
ಅಭ್ಯರ್ಥಿ ಘೋಷಣೆ?: ಕೋಲಾರ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಅವರನ್ನೇ ಕಣಕ್ಕಿಳಿಸುವಂತೆ ರಾಹುಲ್ ಮೇಲೆ ಒತ್ತಡ ಹೇರಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಈಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ಸ್ಮರಿಸಬಹುದು. ಎರಡನೇ ಪಟ್ಟಿಯಲ್ಲೂ ಕೋಲಾರಕ್ಕೆ ಅಭ್ಯರ್ಥಿ ಘೋಷಿಸಿಲ್ಲ. ಹೀಗಾಗಿ, ಅಂದೇ ಕೋಲಾರದ ಅಭ್ಯರ್ಥಿಯನ್ನು ಖುದ್ದಾಗಿ ರಾಹುಲ್ ಗಾಂಧಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.
‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧನಿದ್ದೇನೆ’ ಎಂದು ಹೇಳಿರುವ ಸಿದ್ದರಾಮಯ್ಯ, ಈಗ ರಾಹುಲ್ ಒಪ್ಪಿಗೆಗೆ ಕಾಯುತ್ತಿದ್ದಾರೆ. ಈಗಾಗಲೇ, ವರುಣದಲ್ಲಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಸಮಾವೇಶಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರನ್ನು ಸೇರಿಸಲು ಪಕ್ಷದಿಂದ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.