ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಲ್ಲಿನ ಕರೋಲ್‌ಬಾಗ್ ಮಾರುಕಟ್ಟೆ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ, ಬೈಕ್ ರಿಪೇರಿಯಲ್ಲಿ ಮೆಕ್ಯಾನಿಕ್‌ಗಳೊಂದಿಗೆ ಕೈಜೋಡಿಸಿದ್ದು ಸಾಕಷ್ಟು ಸದ್ದು ಮಾಡಿದೆ. ಸಾವಿರಾರು ಭೇಟಿಯ ಭಾಗವಾಗಿ ರಾಹುಲ್ ಗಾಂಧಿ ಅವರು ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದರು. ಭಾರತ್ ಜೋಡೊ ಯಾತ್ರೆಯಂತೆಯೇ ಅವರ ಸುತ್ತ ಸಾಕಷ್ಟು ಜನರು ಸೇರಿದ್ದರು. ರಾಹುಲ್ ಪರ ಘೋಷಣೆಯನ್ನೂ ಕೂಗಿದರು. ಹಲವರು ಹಸ್ತಲಾಘವ ನೀಡಲು ಮುಗಿಬಿದ್ದರು.
ಇದನ್ನೂ ಓದಿ:ಜಲಿಯನ್ ವಾಲಾಬಾಗ್ ನವೀಕರಣಗೊಳಿಸಿ ಹುತಾತ್ಮ ಸ್ಮಾರಕ್ಕೆ ಅವಮಾನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ನಂತರ ಕೋರಲ್‌ಬಾಗ್ ಸ್ಥಳೀಯ ವ್ಯಾಪಾರಿಗಳು ಹಾಗೂ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದರು. ಮೆಕ್ಯಾನಿಕ್‌ಗಳೊಂದಿಗೆ ಮಾತನಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಅಲ್ಲಿನ ಗ್ಯಾರೇಜ್‌ನಲ್ಲಿ ಕುಳಿತು ಬೈಕ್ ದುರಸ್ತಿಯಲ್ಲಿ ಮೆಕ್ಯಾನಿಕ್‌ಗಳೊಂದಿಗೆ ಕೈಜೋಡಿಸಿದ ಚಿತ್ರಗಳನ್ನು ರಾಹುಲ್ ಗಾಂಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೋವುಗಳನ್ನು ಬದಲಿಸುವ ನಿಟ್ಟಿನಲ್ಲಿ ರಥದ ಗಾಲಿಗಳನ್ನು ತಿರುಗಿಸುವ ಮೂಲಕ ಭಾರತವನ್ನು ಮುನ್ನೆಡೆಸುತ್ತಿರುವ ಕೈಗಳಿಂದ ಕಲಿಯುವ ಪ್ರಯತ್ನʼ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೇಳಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಕರೋಲ್‌ಬಾಗ್‌ನಲ್ಲಿದ್ದ ರಾಹುಲ್ ಗಾಂಧಿ ಅಲ್ಲಿನ ಶ್ರಮಜೀವಿಗಳಿಗೆ ಹಸ್ತಲಾಘವ ನೀಡಿದರು. ಕೆಲವೆಡೆ ಜನರೊಂದಿಗೆ ಛಾಯಚಿತ್ರ ತೆಗೆಸಿಕೊಂಡರು. ತಿಂಗಳ ಹಿಂದೆ ರಾಹುಲ್ ಗಾಂಧಿ ಅವರು ವಾಷಿಂಗ್‌ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಸಂಚರಿಸಿ ಸುದ್ದಿಯಾಗಿದ್ದರು. ತಮ್ಮ ಆ ಪ್ರಯಾಣದಲ್ಲಿ ಭಾರತ ಮೂಲದ ಚಾಲಕನೊಂದಿಗೆ ಸಾಕಷ್ಟು ವಿಷಯಗಳನ್ನು ಅವರು ಚರ್ಚಿಸಿದರು. ಅಮೆರಿಕದಲ್ಲಿ ಜೀವನ ನಡೆಸುತ್ತಿರುವ ಬಗೆ ಕುರಿತು ಸಮಾಲೋಚನೆ ನಡೆಸಿದ್ದರು. ಇದಕ್ಕೂ ಮೊದಲು ದೆಹಲಿಯಿಂದ ಚಂಡೀಘಡ್‌ವರೆಗೆ ಟ್ರಕ್‌ನಲ್ಲಿ ಸಂಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.