ಜೂನ್ 4 ರಂದು 2024ರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಮಾರನೇ ದಿನ ಜೂನ್ 5 ರಂದು ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹಾರಲಿದ್ದಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಸ್ತಾರ ವಿಮಾನ ಯಾನ ಸಂಸ್ಥೆಯ ಬೋರ್ಡಿಂಗ್ ಪಾಸ್ ಒಂದನ್ನು ರಾಹುಲ್ ಗಾಂಧಿ ಅವರ ವಿಮಾನದ ಟಿಕೆಟ್ ಎಂಬಂತೆ ಬಿಂಬಿಸಿ, ಜೂನ್ 5 ರಂದು ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹಾರಲಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬಿಂಬಿಸಲಾಗಿದೆ. ಬೋರ್ಡಿಂಗ್ ಪಾಸ್‌ನ ಫೋಟೋದಲ್ಲಿ ರಾಹುಲ್ ಗಾಂಧಿ ಅವರ ಹೆಸರು ಕಾಣುತ್ತೆ. ಪ್ರಯಾಣದ ದಿನಾಂಕ ಜೂನ್ 5, 2024 ರಂದೂ ಬರೆಯಲಾಗಿದೆ. ಭಾರತದಿಂದ ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಪ್ರಯಾಣಿಸಲಿದ್ದಾರೆ ಎಂದು ಬಿಂಬಿಸಲಾಗಿದೆ.
ಬೂಮ್ ಫ್ಯಾಕ್ಟ್ ಚೆಕ್ ಸಂಸ್ಥೆಯ ಪರಿಶೀಲನೆ ವೇಳೆ ಈ ಫೋಟೋವನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ಸಾಬೀತಾಗಿದೆ. ಈ ಕುರಿತಾಗಿ ಪರಿಶೀಲನೆ ನಡೆಸಿದ ವೇಳೆ ಅಜಯ್ ಅವತಾನೆ ಎಂಬುವರು ಈ ಬೋರ್ಡಿಂಗ್ ಪಾಸ್ ತಮ್ಮದು ಎಂದು ಖಚಿತಪಡಿಸಿದ್ದಾರೆ. ಅವರು 2019ರಲ್ಲಿ ಈ ಬೋರ್ಡಿಂಗ್ ಪಾಸ್ ಬಳಸಿಕೊಂಡು ವಿಸ್ತಾರ ಅಂತಾರಾಷ್ಟ್ರೀಯ ವಿಮಾನದಲ್ಲಿ ದಿಲ್ಲಿ ಏರ್‌ಪೋರ್ಟ್‌ನಿಂದ ಸಿಂಗಪುರಕ್ಕೆ ಪ್ರಯಾಣ ಮಾಡಿದ್ದರು.
ಇದನ್ನೂ ಓದಿ : ವಿಧಾನಸಭಾ ಚುನಾವಣೆಯ ಫಲಿತಾಂಶ; ಅರುಣಾಚಲದಲ್ಲಿ ಬಿಜೆಪಿಗೆ ಬಹುಮತ, ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಮೆಲುಗೈ
ವೈರಲ್ ಆಗಿರುವ ಈ ಫೋಟೋವನ್ನು ಬೂಮ್ ಸಂಸ್ಥೆ ಮೊದಲಿಗೆ ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಿತು. ಈ ವೇಳೆ ಬೋರ್ಡಿಂಗ್ ಪಾಸ್‌ನಲ್ಲಿ ವ್ಯತ್ಯಾಸಗಳನ್ನು ಗಮನಿಸಿತು. ಬೋರ್ಡಿಂಗ್ ಪಾಸ್‌ನಲ್ಲಿರುವ ವಿಮಾನ ಸಂಖ್ಯೆಯು ಎರಡು ಸ್ಥಳಗಳಲ್ಲಿ ವಿಭಿನ್ನವಾಗಿದೆ. ಒಂದು ಸ್ಥಳದಲ್ಲಿ ‘UK121’ ಎಂದು ನಮೂದಿಸಲಾಗಿದೆ, ಇನ್ನೊಂದು ಸ್ಥಳದಲ್ಲಿ ‘UK115’ ಎಂದು ಹೆಸರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈ ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಹುಡುಕಾಟ ಮಾಡಿದ ವೇಳೆ ‘ಲೈವ್ ಫ್ರಮ್ ಎ ಲೌಂಜ್’ ಎಂಬ ಹೆಸರಿನ ವೆಬ್‌ಸೈಟ್‌ನಲ್ಲಿ ಆಗಸ್ಟ್ 9, 2019 ರಂದು ಪ್ರಕಟವಾಗಿದ್ದ ಲೇಖನವೊಂದರಲ್ಲಿ ಇದ್ದ ಬೋರ್ಡಿಂಗ್ ಪಾಸ್ ಫೋಟೋ ಲಭ್ಯವಾಯ್ತು.