ಬೆಂಗಳೂರು: “ನಿಮ್ಮನ್ನು ನಂಬಿದಕ್ಕೆ ನಾನು ಬೀದಿಗೆ ಬರುವಂತಾಯಿತು”, ಇನ್ನೆಂದೂ ಜೀವನದಲ್ಲಿ ಬಿಜೆಪಿಯನ್ನು ನಂಬುವುದಿಲ್ಲ. ನಂಬಲು ಕೂಡ ಇದು ಅನರ್ಹ ಪಕ್ಷ ..! ಎಂದು ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಕಿಡಿಕಾರಿದ ಬಗ್ಗೆ ವರದಿಯಾಗಿದೆ.
ಕಳೆದ ರಾತ್ರಿ ಖಾಸಗಿ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಅವರು ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ಸಚಿವ ಸ್ಥಾನ ಇಂದು ಸಿಗುತ್ತದೆ, ನಾಳೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಆರ್.ಶಂಕರ್ ಶಾಸಕಾಂಗ ಸಭೆಯಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ ಎಂದು ಗೊತ್ತಾಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು. ಅಲ್ಲಿ ನೆಮ್ಮದಿಯಾಗಿಯೂ ಇದ್ದೆ. ಉನ್ನತ ಸ್ಥಾನಮಾನ ನೀಡಲಾಗುತ್ತದೆ ಎಂದು ನಂಬಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಯಿತು. ಇದರಿಂದ ಪಕ್ಷ ವಿರೋ ಚಟುವಟಿಕೆ ಹಣೆಪಟ್ಟಿ ಅಂಟಿಸಿ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಲಾಯಿತು ಎಂದು ಆಕ್ರೋಶ ಹೊರಹಾಕಿದರು ಎಂದು ಶಂಕರ್ ಅವರ ಆಪ್ತರು ತಿಳಿಸಿದ್ದಾರೆ.
ಕಾಡಿಬೇಡಿ ವಿಧಾನಪರಿಷತ್ಗೆ ಆಯ್ಕೆ ಮಾಡಿದರೂ ಸಚಿವ ಸ್ಥಾನ ಮಾತ್ರ ಈಗಲೂ ಗಗನಕುಸುಮವಾಗಿಯೇ ಉಳಿದಿದೆ. ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಸುಳ್ಳು ಹೇಳುತ್ತಲೇ ಬಂದಿದ್ದೀರಿ. ಇನ್ನೇನು ಚುನಾವಣಾ ವರ್ಷ ಸಮೀಪಿಸುತ್ತಿದೆ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ನೀವು ಕೊಡುವ ಕೊಡುಗೆ ಇದೇನಾ ಎಂದು ಶಂಕರ್ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಈ ಹಂತದಲ್ಲಿ ಬೊಮ್ಮಾಯಿ ಸೇರಿದಂತೆ ಸಂಪುಟದ ಕೆಲವು ಸಚಿವರು ಶಂಕರ್ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಅವರು ಶಾಸಕಾಂಗ ಸಭೆಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿ ನೀವು ಬೇಡ, ನಿಮ್ಮ ಪಕ್ಷವು ಬೇಡ ನಿಮ್ಮನ್ನು ನಂಬಿ ಬಂದಿದ್ದಕ್ಕೆ ದೊಡ್ಡ ಉಡುಗೊರೆ ಕೊಟ್ಟಿದ್ದೀರಿ, ನಿಮ್ಮ ಸಚಿವ ಸ್ಥಾನ ನೀವೇ ಇಟ್ಟುಕೊಳ್ಳಿ ಎಂದು ಸಭೆಯಿಂದ ಹೊರಬಂದಿದ್ದಾರೆ ಎಂದು ಗೊತ್ತಾಗಿದೆ.