ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬರಪರಿಹಾರಕ್ಕೆ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಬರಗಾಲದಿಂದ ಬಳಲಿದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದ್ದು, ಇದರಲ್ಲಿ ಕಾಂಗ್ರೆಸ್ ಸರ್ಕಾರದ ಯಾವುದೇ ಪಾತ್ರವಿಲ್ಲ. ಈಗ ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ನೀಡಿದಂತೆಯೇ ಡಬಲ್ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ ಬಳಿ ಹಣವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಬರಗಾಲದ ಪರಿಹಾರಕ್ಕಾಗಿ ಸರಿಯಾದ ಮಾಹಿತಿ ನೀಡಲು ಕೂಡ ಸರ್ಕಾರ ವಿಳಂಬ ಮಾಡಿತ್ತು. ಕೋರ್ಟ್ ಆದೇಶವಾಗಿದ್ದರೆ ಕರ್ನಾಟಕಕ್ಕೆ ಮಾತ್ರ ಪರಿಹಾರ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರವೇ ಕ್ರಮ ವಹಿಸಿ ಪರಿಹಾರ ನೀಡಿದೆ. ಇದರಲ್ಲಿ ಕಾಂಗ್ರೆಸ್ ನ ಶ್ರಮ ಏನೂ ಇಲ್ಲ. ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಮಾತ್ರ ಹಣ ಬಿಡುಗಡೆಯಾಗಿದೆ ಎಂದರು.
ಇದನ್ನೂ ಓದಿ: ಮಾಜಿ ಸಚಿವ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು
ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರದ ಹಣವನ್ನು ಲೂಟಿ ಮಾಡಬಾರದು. ಇದರಲ್ಲೂ ಕೈ ಚಳಕ ಮಾಡಿ ದುಡ್ಡು ಹೊಡೆಯದಂತೆ ನಾವು ಕಾವಲು ಕಾಯುತ್ತೇವೆ. ಬರದಿಂದ ನೊಂದ ರೈತರ ಖಾತೆಗೆ ನೇರವಾಗಿ ಪರಿಹಾರ ನೀಡಬೇಕು. ಈವರೆಗೆ ಬರ ಪರಿಹಾರ ಬಂದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ದುಪ್ಪಟ್ಟು ಪ್ರವಾಹ ಪರಿಹಾರ ನೀಡಿತ್ತು. ಈಗಲೂ ಸರ್ಕಾರ ತನ್ನ ಕಡೆಯಿಂದ ಡಬಲ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಪರಿಹಾರದ ಬಗ್ಗೆ ಸಾಮಾನ್ಯ ಪ್ರಜ್ಞೆ ಹಾಗೂ ತಿಳಿವಳಿಕೆ ಇಲ್ಲ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿತ್ತು ಎಂದು ತಿಳಿಸಲಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವೇ ಇತ್ತು. ಆಗಿನ ಪರಿಹಾರಕ್ಕೂ ಈಗ ನೀಡಿರುವ ಪರಿಹಾರಕ್ಕೂ ಜನರೇ ಹೋಲಿಕೆ ಮಾಡಲಿ. ವಿದ್ಯುತ್ ದರ, ಮಾರ್ಗಸೂಚಿ ದರ, ದತ್ತು ಪಡೆಯಲು ದರ ಹೀಗೆ ಎಲ್ಲದರಲ್ಲೂ ಸರ್ಕಾರ ದರ ಏರಿಕೆ ಮಾಡಿದೆ ಎಂದು ದೂರಿದರು.
ರಾಜ್ಯ ಸರ್ಕಾರ ದುಡ್ಡು ಹೊಡೆಯಲು ಚೆಕ್ ಮೂಲಕ ಪರಿಹಾರ ನೀಡಬಾರದು. ಡಿಬಿಟಿ ಮೂಲಕವೇ ನೇರವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ನೋಡಿ: “ಶೃತಿ ಮೆಡಂ ಶಕ್ತಿ ಯೋಜನೆ ನಮಗೆ ಬಲ ತಂದಿದೆ” ಬಾಯಿ ಇದೆ ಅಂತ ಹೆಂಗೆಂಗೊ ಮಾತಾಡಿದ್ರೆ ಹೇಗೆ ಮೆಡಂ” – ಮಹಿಳೆಯರ ಆಕ್ರೋಶ