ಬೆಂಗಳೂರು: ಖಾಸಗಿ ಬಸ್ಸುಗಳ ದರ ಸಮರ ಎಲ್ಲೆ ಮೀರಿದ್ದು, ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಊರುಗಳಿಗೆ ಪ್ರಯಾಣ ಬೆಳೆಸುವ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಪರಿಸ್ಥಿತಿ ಎದುರಾಗಿದೆ. ಹಬ್ಬದ ಸಂಭ್ರಮಗಳಲ್ಲಿ ಖಾಸಗಿ ಬಸ್ಸುಗಳು ಪ್ರಯಾಣ ದರವನ್ನು ಏಕಾಏಕಿ ಏರಿಸುತ್ತದೆ. ಇದು ಕೆಲವೊಮ್ಮ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.
ವಿಶೇಷವಾಗಿ ಬೆಂಗಳುರು ನಗರದಿಂದ ಹೊರ ಜಿಲ್ಲೆಗಳು ಅಥವಾ ಹೊರ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಎರಡು ದಿನದ ಹಿಂದೆ ಇದ್ದ ಪ್ರಯಾಣ ದರಗಳು ಇದೀಗ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಖಾಸಗಿ ಬಸ್ಸಿನ ದರಕ್ಕಿಂತ ವಿಮಾನ ಪ್ರಯಾಣ ದರವೇ ತುಸು ಅಗ್ಗ ಎಂಬಷ್ಟರ ಮಟ್ಟಿಗೆ ದರ ಏರಿಕೆಯಾಗಿವೆ. ಹೀಗಿದ್ದರೂ ಸರ್ಕಾರ ಮೌನವಾಗಿದೆ.
ಖಾಸಗಿ ಬಸ್ ಟಿಕೆಟ್ ದರ ಏರಿಕೆಯ ಬಿಸಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗದ ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ ಹಾಗೂ ಇನ್ನಿತರ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತಟ್ಟುತ್ತಿದೆ.
ಎರಡು ದಿನದ ಹಿಂದೆ 600 -700 ಇದ್ದ ಟಿಕೆಟ್ ದರ ಈಗ ಹಲವು ಪಟ್ಟು ಹೆಚ್ಚಾಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಹುಬ್ಬಳ್ಳಿ – ಬೆಳಗಾವಿ ಪ್ರಯಾಣ ದರ 5 ಸಾವಿರಕ್ಕೆ ಏರಿಸಲಾಗಿದೆ. ಖಾಸಗಿ ಬಸ್ಸು ಮಾಲೀಕರು ಹಬ್ಬದ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಖಾಸಗಿ ಬಸ್ಸು ಮಾಲೀಕರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿ, ಗೋವಾ, ಕಾರವಾರ, ಹೈದರಾಬಾದ್ ಸೇರಿದಂತೆ ನಾನಾ ಮಾರ್ಗಗಳ ನಡುವೆ ಅಕ್ಟೋಬರ್ 21ರಿಂದ 24ರ ಅವಧಿಯಲ್ಲಿ ವಿಮಾನ ಪ್ರಯಾಣ ದರಕ್ಕಿಂತ ಖಾಸಗಿ ಬಸ್ಸಿನ ಪ್ರಯಾಣವೇ ದುಬಾರಿಯಾಗಿದೆ.
ಅಕ್ಟೋಬರ್ 21ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸರ್ಕಾರಿ ಬಸ್ಸಿನ ಪ್ರಯಾಣ ದರ ಎಸಿ ಸ್ಲೀಪರ್ 960 ರಿಂದ 1,140ರೂ.ವರೆಗೆ ಇದೆ. ನಾನ್ ಎಸಿ ಸ್ಲೀಪರ್ 797 ರೂ.ನಿಂದ 943ರೂ ಇದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನಯಾನಕ್ಕೆ 3,694 ರೂ. ಪ್ರಯಾಣ ದರವಿದ್ದು, ಇದೇ ಮಾರ್ಗದಲ್ಲಿ ಸಾಮಾನ್ಯವಾಗಿ 500 ರಿಂದ 800 ರೂ. ಇರುತ್ತಿದ್ದ ಖಾಸಗಿ ಬಸ್ಸಿನ ಪ್ರಯಾಣ ದರ ಹಬ್ಬದ ನೆಪದಲ್ಲಿ 5 ಸಾವಿರ ರೂಪಾಯಿ ಆಸುಪಾಸಿನಲ್ಲಿವೆ.
ಅಕ್ಟೋಬರ್ 22ರಂತೆ ನಿಗದಿಯಾಗಿರುವ ಸರ್ಕಾರಿ ಬಸ್ಸಿನ ಟಿಕೇಟಿನ ದರ ನೋಡುವುದಾದರೆ ಬೆಂಗಳೂರಿನಿಂದ ಬೆಳಗಾವಿಗೆ ಎಸಿ ಸ್ಲೀಪರ್ 1139 ರೂ.ನಿಂದ 1348 ರೂ.ವರೆಗೆ ನಿಗದಿ ಮಾಡಲಾಗಿದೆ. ನಾನ್ ಎಸಿ ಸ್ಲೀಪರ್ 1061 ರೂ. ಇದ್ದರೆ, ಎಸಿ ಅಲ್ಲದ ಆಸನಗಳ ಟಿಕೆಟ್ ದರ 899 ರೂ.ವರೆಗೆ ಇದೆ. ಇದೇ ಬೆಂಗಳೂರು- ಬೆಳಗಾವಿಗೆ ಖಾಸಗಿ ಬಸ್ ಟಿಕೆಟ್ ದರ ಎಸಿ ಸ್ಲೀಪರ್ ಇಂಟರ್ಸಿಟಿ ಸ್ಮಾಟ್ ಬಸ್ ರೂ.2,700 ದಿಂದ 4,000ರದ ವರೆಗೆ ಹಾಗೂ ನಾನ್ ಎಸಿ ಸ್ಲೀಪರ್ 1700ರಿಂದ 2500 ಸಾವಿರದ ವರೆಗೆ ಇದೆ.
ಬೆಂಗಳೂರು- ಕಾರವಾರ ನಡುವೆ ಸ್ಲೀಪರ್ ಕೋಚ್ ಬಸ್‌ಗೆ 4,099 ರೂ. ದರವಿದ್ದರೆ, ಬೆಂಗಳೂರು- ಮಂಗಳೂರು ನಡುವೆ 3,400 ರೂ. ಹಾಗೂ ಹೊರ ರಾಜ್ಯಗಳಾದ ಬೆಂಗಳೂರು- ಗೋವಾ ನಡುವೆ 4 ಸಾವಿರ ರೂ. ಮತ್ತು ಬೆಂಗಳೂರು-ಹೈದರಾಬಾದ್ ನಡುವೆ 3,999 ರೂ. ದರವಿದೆ. ಇದರಿಂದ ಬಸ್ಸಿನ ಪ್ರಯಾಣಕ್ಕಿಂತ ವಿಮಾನದಲ್ಲಿ ಪ್ರಯಾಣಿಸುವುದೇ ಉತ್ತಮ ಎನ್ನುವ ಮಟ್ಟಕ್ಕೆ ಬಂದಿದೆ.
ಬೆಂಗಳೂರಿನಿಂದ ಹಾವೇರಿಗೆ ಸರ್ಕಾರಿ ಬಸ್ಸಿನ ಪ್ರಯಾಣ ದರ ಎಸಿ ಸೆಮಿ ಸ್ಲೀಪರ್ 788 (ಐರಾವತ) ಇದೆ. ನಾನ್ ಎಸಿ ಸ್ಲೀಪರ್ ರೂ.700 ರಿಂದ 824 ರೂ. ಇದೆ. ಇದೇ ಬೆಂಗಳೂರಿನಿಂದ ಹಾವೇರಿಗೆ ಖಾಸಗೀ ಬಸ್ಸಿನಲ್ಲಿ ಪ್ರಯಾಣದ ದರ ರೂ. 1400 ಕ್ಕಿಂತ ಹೆಚ್ಚು ಇವೆ.
ಹಬ್ಬದ ನೆಪದಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ಸು ಮಾಲೀಕರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಚ್ಚುವರಿ ದರ ಪಡೆದ ಮಾಹಿತಿಕೊಟ್ಟರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಹೇಳಿದ್ದಾರೆ.
ಆದರೂ, ಮನಬಂದಂತೆ ಪ್ರಯಾಣ ದರ ಹೆಚ್ಚಿಸುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕೈಗೊಳ್ಳುವ ಕ್ರಮ ಪರಿಣಾಮಕಾರಿಯಾಗಿಲ್ಲ ಎಂಬುದು, ಕ್ರಮ ಕೈಗೊಳ್ಳಬೇಕು. ಸರ್ಕಾರದ ಎಚ್ಚರಿಕೆ ಕ್ರಮಗಳು ಒಮ್ಮೆಯಾದರೂ ಹಬ್ಬದ ವೇಳೆ ಜಾರಿಯಾಗಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಆದರೂ ಸಹ ಸರ್ಕಾರದ ನಿರ್ಲಕ್ಷ್ಯತನ ಮುಂದುವರೆದಿರುವುದು ಜನರಲ್ಲಿ ನಿರಾಶೆ ಮೂಡಿಸಿದೆ.
ಪ್ರತಿ ಹಬ್ಬಗಳಲ್ಲೂ ಸರ್ಕಾರದ ವತಿಯಿಂದ ಎಚ್ಚರಿಕೆ ನೀಡುವ ಸಾರಿಗೆ ಸಚಿವರು ಈವರೆಗೆ ಎಷ್ಟು ಖಾಸಗಿ ಬಸ್ಸುಗಳ ಸಂಸ್ಥೆ ವಿರುದ್ಧ ದಂಡ ಇಲ್ಲವೇ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಸಾಮಾನ್ಯ ಬಸ್ಸುಗಳ ಪ್ರಯಾಣದ ದರ ಯಥಾಸ್ಥಿತಿಯಲ್ಲಿದ್ದರೆ, ಹಬ್ಬಕ್ಕೆಂದೇ ನಿಯೋಜಿಸಲಾಗಿರುವ ವಿಶೇಷ (1500) ಬಸ್ಸುಗಳ ಪ್ರಯಾಣ ದರ ಶೇ.20ರಷ್ಟು ಹೆಚ್ಚಳವಾಗಿದೆ.