ಪುತ್ತುಪ್ಪಲ್ಲಿ ಉಪಚುನಾವಣೆ | ಜೈಕ್ ಸಿ ಥಾಮಸ್ ಎಲ್‌ಡಿಎಫ್‌ ಅಭ್ಯರ್ಥಿ, ಯುಡಿಎಫ್‌ನಿಂದ ಚಾಂಡಿ ಉಮ್ಮನ್ ಕಣಕ್ಕೆ

ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ನಿಧನದಿಂದ ತೆರವಾಗಿದ್ದ ಕ್ಷೇತ್ರ

ಕೊಟ್ಟಾಯಂ: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಉಮನ್ ಚಾಂಡಿ ಅವರ ನಿಧನದಿಂದ ತೆರವಾಗಿರುವ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ)ಯ ಪ್ರಮುಖ ನಾಯಕ, ಜೈಕ್‌ ಸಿ ಥಾಮಸ್ ಅವರನ್ನು ಲೆಫ್ಟ್‌ ಡೆಮಾಕ್ರಟಿಕ್ ಫ್ರಂಟ್(ಎಲ್‌ಡಿಎಫ್‌)ನ ಅಭ್ಯರ್ಥಿಯಾಗಿ ಶನಿವಾರ ಘೋಷಿಸಲಾಗಿದೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಪಕ್ಷದ ಕೊಟ್ಟಾಯಂ ಜಿಲ್ಲಾ ಕಾರ್ಯದರ್ಶಿಯೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರ ತಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಜೈಕ್ ಅವರು ಆಗಸ್ಟ್ 17 ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.

ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದ್ದು, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್)ನ ಅಭ್ಯರ್ಥಿಯಾಗಿ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರನ್ನು ಕಣಕ್ಕಿಳಿಸಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಜುಲೈ 18 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದರು.

ಇದನ್ನೂ ಓದಿ: ಏನಿದು ‘ಬಹು-ಆಯಾಮೀಯ ಬಡತನ’ ಸೂಚ್ಯಂಕ?

ಎಲ್‌ಡಿಎಫ್‌ನ ಅಭ್ಯರ್ಥಿ ಜೈಕ್ ಅವರು 2016 ಮತ್ತು 2021 ರ ವಿಧಾನಸಭಾ ಚುನಾವಣೆಗಳಲ್ಲಿ ಉಮ್ಮನ್ ಚಾಂಡಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ‘ಒಸಿ’ ಎಂದು ಕರೆಯಲಾಗುವ ಉಮ್ಮನ್ ಚಾಂಡಿ ಅವರು ಐದು ದಶಕಗಳಿಗೂ ಹೆಚ್ಚು ಕಾಲ, ಸತತ 12 ಬಾರಿ ಪುತ್ತುಪ್ಪಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಾಗ್ಯೂ 2021ರಲ್ಲಿ ಜೈಕ್‌ ವಿರುದ್ಧ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.

ಕ್ಷೇತ್ರದಲ್ಲಿ ‘ಒಸಿ ಅಲೆ’ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವರ ಪುತ್ರ ಚಾಂಡಿ ಉಮ್ಮನ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಅಧ್ಯಕ್ಷ ಕೆ. ಸುಧಾಕರನ್ ಅವರು ಆಗಸ್ಟ್ 8 ರಂದು ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿದ ತಕ್ಷಣವೇ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.

“ಕಳೆದ 53 ವರ್ಷಗಳಿಂದ ಉಮ್ಮನ್ ಚಾಂಡಿಯವರು ಪುತ್ತುಪಲ್ಲಿಯನ್ನು ಪ್ರತಿನಿಧಿಸುತ್ತಿದ್ದರು. ಅವರ ನೆನಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಪುತ್ತುಪ್ಪಲ್ಲಿ ಮುಂದೆ ಪ್ರಸ್ತುತಪಡಿಸಲು ಚಾಂಡಿ ಉಮ್ಮನ್ ಹೊರತುಪಡಿಸಿ ಯಾರೂ ಇಲ್ಲ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ 15 ಸಾವಿರ ಮತಗಳನ್ನು ಪಡೆದಿದ್ದ ಬಿಜೆಪಿ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.

ವಿಡಿಯೊ ನೋಡಿ:  ಕೊಬ್ಬರಿಗೆ ಕನಿಷ್ಠ ಬೆಂಬಲ ಘೋಷಣೆ – ಸಂಸದರ ಕಚೇರಿ ಮುಂಭಾಗ ತೆಂಗು ಬೆಳೆಗಾರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *