ಚಂಡೀಗಢ: ಸೇನಾಪಡೆಗಳಿಗೆ ಯುವಕರನ್ನು ಅಲ್ಪಾವಧಿಗೆ ನೇಮಿಸಿಕೊಳ್ಳುವ ಕೇಂದ್ರದ ಅಗ್ನಿಪಥ ನೇಮಕಾತಿ ಯೋಜನೆ ವಿರೋಧಿಸಿ ಪಂಜಾಬ್ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಈ ನಿರ್ಣಯವನ್ನು ಅನುಮೋದಿಸಿದ್ದು, ಬಿಜೆಪಿಯವರು ಮೊದಲು ತಮ್ಮ ಮಕ್ಕಳನ್ನು ಅಗ್ನಿವೀರ್ ಮಾಡಿ ಎಂದಿದ್ದಾರೆ.
ಪಂಜಾಬ್ ರಾಜ್ಯದ ಎಎಪಿ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್, ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನಿಸಿದ್ದಾರೆ. ಈ ಯೋಜನೆ ತುಂಬಾ ಒಳ್ಳೆಯದಾಗಿದ್ದರೆ ಸೈನ್ಯಕ್ಕೆ ಬಿಜೆಪಿ ಗಣ್ಯರ ಮಕ್ಕಳು ಸೇರ್ಪಡೆಯಾಗಲಿ ಎಂದಿದ್ದಾರೆ. ಈ ನಿರ್ಣಯವನ್ನು ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಬೆಂಬಲಿಸಿವೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಗ್ನಿಪಥ್ ಯೋಜನೆ ವಾಪಸ್ಸು ಪಡೆಯುವುದಂತೆ ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.
ಅಗ್ನಿಪಥ ಕೇಂದ್ರ ಸರ್ಕಾರದ ವಿಚಿತ್ರ ಯೋಜನೆಯಾಗಿದ್ದು ಅದು ಭಾರತೀಯ ಸೇನೆಯ ಮೂಲ ರಚನೆಯನ್ನು ನಾಶಪಡಿಸುತ್ತದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕರಾಳ ಕೃಷಿ ಕಾನೂನುಗಳು ಮತ್ತು ಇತರ ಯೋಜನೆಗಳ ಮೂಲವನ್ನು ಬಿಜೆಪಿ ನಾಯಕರನ್ನು ಹೊರತುಪಡಿಸಿ ಯಾರೂ ಅರ್ಥಮಾಡಿಕೊಂಡಿಲ್ಲ. ಅಗ್ನಿಪಥ್‌ನಂತಹ ಆಧಾರರಹಿತ ನಡೆಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಂಜಾಬ್ ವಿಧಾನಸಭೆ ಮಾತ್ರವಲ್ಲ, ದೇಶದಾದ್ಯಂತ ಎಲ್ಲಾ ರಾಜ್ಯಗಳ ವಿಧಾನಸಭೆಗಳು ಈ ಯೋಜನೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಹೇಳಿಕೆಯಾಗಿದೆ.
ಸಶಸ್ತ್ರ ಪಡೆಗಳಿಂದ ನೇಮಕಗೊಂಡ ಶೇ 20 ಯುವಕರು ಪಂಜಾಬ್‌ನಿಂದ ಬಂದವರು. ಆದರೆ ಸರ್ಕಾರಗಳು ನೇಮಕಾತಿಯನ್ನು ಜನಸಂಖ್ಯೆಯ ಆಧಾರದ ಮೇಲೆ ಮಾಡಿದ ಪರಿಣಾಮ ರಾಜ್ಯದ ಪ್ರಾತಿನಿಧ್ಯವು ಶೇ. 7.8 ಕ್ಕೆ ಇಳಿಯಿತು. ಈ ಹೊಸ ಯೋಜನೆಯೊಂದಿಗೆ ಇದು 2.3 ಕ್ಕೆ ಇಳಿಯುತ್ತದೆ ಪ್ರತಿಪಕ್ಷದ ನಾಯಕ (ಎಲ್‌ಒಪಿ) ಪರತಾಪ್ ಸಿಂಗ್ ಬಾಜ್ವಾ ಎಂದು ಉಲ್ಲೇಖಿಸಿದ್ದಾರೆ.
ಪ್ರಸ್ತಾವನೆಗೆ ಬಿಜೆಪಿ ವಿರೋಧ
ವಿಧಾನಸಭೆ ಕಲಾಪದಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಪ್ರಸ್ತಾವನೆಗೆ ಬಿಜೆಪಿ ಶಾಸಕ ಅಶ್ವಿನಿ ಶರ್ಮಾ ವಿರೋಧ ವ್ಯಕ್ತಪಡಿಸಿದರು. ಇದು ದೇಶ ಮತ್ತು ಸೇನೆಯ ಭದ್ರತೆಗೆ ಸಂಬಂಧಿಸಿದ ವಿಚಾರ. ನಾವು ಮೂರು ಪಡೆಗಳ ಮುಖ್ಯಸ್ಥರನ್ನು ನಂಬಬೇಕು. ಉತ್ತರ ಪ್ರದೇಶ ಸರ್ಕಾರವು ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದಂತೆ, ಪಂಜಾಬ್ ಏಕೆ ಮಾಡುತ್ತಿಲ್ಲ ಎಂದಿದ್ದಾರೆ.