ಅಂಜಲಿಯನ್ನು ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಡಿವೈಎಫ್ಐ ಆಗ್ರಹ

ಬೆಂಗಳೂರು: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಪ್ರೀತಿ ನಿರಾಕರಿಸಿದಕ್ಕೆ ಚಾಕುವಿನಿಂದ ಇರಿದು ಕೊಲೆಗೈದಿರುವ ಹೇಯ ಕೃತ್ಯವನ್ನು ಎಸಗಿರುವ ಹಂತಕ ಗಿರೀಶ ಸಾವಂತನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಆಗ್ರಹಿಸಿದೆ.

ಈ ಕುರಿತು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಪತ್ರಿಕಾ ಪ್ರಕಟಣೆ ನೀಡಿದ್ದು,ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ  ಕೆಟರಿಂಗ್  ಕೆಲಸ ಮಾಡುತ್ತಿದ್ದ ಯುವತಿ ಅಂಜಲಿ ಅಂಬಿಗೇರಳನ್ನು ಪ್ರೀತಿಸುವಂತೆ ಗಿರೀಶ ಪೀಡಿಸುತ್ತಿದ್ದು, ಆಕೆ ಪ್ರೀತಿಯನ್ನು ನಿರಾಕರಿಸಿದ್ದಾಳೆಂದು ಬೆಳ್ಳಂಬೆಳಿಗ್ಗೆ ಅವಳ ಮನೆಗೆ ನುಗ್ಗಿರುವ ಗಿರೀಶ್‌, ಆಕೆಯ ಕೊಲೆ ಮಾಡಿದ್ದಾನೆ.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ದುರ್ಘಟನೆಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಅದೇ ನೆಲದಲ್ಲಿ ಮತ್ತೊಬ್ಬ ಯುವತಿಯ ಹತ್ಯೆ ನಡೆದಿರುವುದು ಅಘಾತಕಾರಿ ಸಂಗತಿಯಾಗಿದೆ. ಈ ಘಟನೆಗಳು ಯುವತಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಮರೀಚಿಕೆಯಾಗುತ್ತಿದೆ ಎಂಬುದನ್ನು ತೆರೆದಿಟ್ಟಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಜುಂಜುನು ಲಿಫ್ಟ್‌ ಅಪಘಾತ: ಸಲಕರಣೆಗಳ ನಿರ್ವಹಣಾ ಕೊರತೆಯೇ ಗಣಿದುರಂತಕ್ಕೆ ಕಾರಣ ಎಂದು ದೂಷಿಸಿದ ಕಾರ್ಮಿಕರು

ರಾಜ್ಯದಲ್ಲಿ ದಿನನಿತ್ಯ ಚಿಕ್ಕ ಹೆಣ್ಮಗುವಿನಿಂದ ವಯೋವೃದ್ಧ ಮಹಿಳೆಯರವರೆಗೂ ಒಂದಿಲ್ಲೊಂದು ರೀತಿಯ ಹಿಂಸೆ ದೌರ್ಜನ್ಯ ಘಟನೆಗಳು, ಕೊಲೆಗಳು ಅವ್ಯಾಹತವಾಗಿ, ಅನಿಯಂತ್ರಿತವಾಗಿ ನಡೆಯುತ್ತಿವೆ. ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯವೇ ಇಲ್ಲವೇನು ಎಂಬಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಈ ಹಿಂಸೆ ದೌರ್ಜನ್ಯಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಉಗ್ರಪ್ಪ ಸಮಿತಿ ನೀಡಿರುವ ವರದಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ.

ಕೊಲೆಗೈದ ಹಂತಕ ಗಿರೀಶನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ಕೊಡಬೇಕು. ಕೊಲೆಯಾಗಿರುವ ಅಂಜಲಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಂತಹ ಪ್ರಕರಣಗಳನ್ನು ದೀರ್ಘ ಕಾಲ ನಡೆಸದೇ ಶೀಘ್ರವಾಗಿ ಇತ್ಯರ್ಥಪಡಿಸಲು ಈ ಕೇಸ್ ಗಳನ್ನು ತ್ವರಿತ ನ್ಯಾಯಾಲಯಕ್ಕೆ ನೀಡಬೇಕು, ಆ ಮೂಲಕ ದುರುಳರಿಗೆ ಶಿಕ್ಷೆಯನ್ನೂ ಮತ್ತು ಸಂತ್ರಸ್ತ ಕಟುಂಬಗಳಿಗೆ ನ್ಯಾಯ ಒದಗಿಸಬೇಕು. ಸರಕಾರ ಹೆಚ್ಚಿನ ಸಂಖ್ಯೆಯಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ.

ಇದನ್ನು ನೋಡಿ : ಪಂಜಾಬ್ ಲೋಕಸಭೆ : ” ದೆಲ್ಲಿ ದಾರಿ ಬಂದ್ ಮಾಡಿದ್ದ ಬಿಜೆಪಿಗೆ ಹಳ್ಳಿ ದಾರಿ ಬಂದ್ ” ವ್ಯಾಪಕಗೊಂಡ ಅನ್ನದಾತರ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *