ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಪವನ್ ಕುಮಾರ್ ಜೊತೆಯಾಗಿ ಮನೋವೈಜ್ಞಾನಿಕ ಕಥಾಹಂದರದ ಒಂದು ವಿಶಿಷ್ಠವಾದ ಸಿನಿಮಾದ ಹೆಸರು ದ್ವಿತ್ವ. ಬೆಳಗ್ಗೆ 11.46ಕ್ಕೆ ಸರಿಯಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಬಿಡುಗಡೆಗೊಂಡಿದೆ. ಚಿತ್ರವನ್ನು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ.
ದ್ವಿತ್ವ ಎಂದರೆ ಎರಡು ಎಂದರ್ಥ. ದ್ವಿಪಾತ್ರದಲ್ಲಿ ಅಂದ್ರೆ ಲೂಸಿಯಾ ಸಿನಿಮಾದ ರೀತಿಯಲ್ಲಿಯೇ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಆರಂಭವಾಗಿದೆ.
ಈ ಹಿಂದೆ ಮನೋವೈಜ್ಞಾನಿಕ ಕಥೆಯಾಧಾರಿತ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ಮತ್ತೆ ಅದೇ ಕಥೆವಸ್ತುವನ್ನು ಇಟ್ಟುಕೊಂಡು ‘ದ್ವಿತ್ವ’ ಸಿನಿಮಾ ಹೊರಬರುತ್ತಿದೆ. ಶೀರ್ಷಿಕೆ ಜೊತೆಗೆ ಡಿಫರೆಂಟ್ ಆದಂತಹ ಪೋಸ್ಟರ್ ಬಿಡುಗಡೆಗೊಂಡಿದೆ.
‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ಮುಂತಾದ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ 9ನೇ ಸಿನಿಮಾವಾಗಿ ದ್ವಿತ್ವ ಸಿನಿಮಾ ಮೂಡಿ ಬರಲಿದೆ. ವಿಜಯ್ಕುಮಾರ್ ಕಿರಗಂದೂರು ಮತ್ತು ಪುನೀತ್ ರಾಜಕುಮಾರ್ ಜೊತೆಯಾಗಿರುವ ನಾಲ್ಕನೇ ಚಿತ್ರ ಇದಾಗಿದೆ.
ನಿರ್ದೇಶಕ ಪವನ್ ಕುಮಾರ್ ಅವರು 2018ರಲ್ಲಿ ಬಿಡುಗಡೆಯಾದ ‘ಯೂ ಟರ್ನ್’ ಚಿತ್ರದ ಬಳಿಕ ಕನ್ನಡದಲ್ಲಿ ಮತ್ತೆ ಬೇರೆ ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಈಗ ಮತ್ತೆ ಬಹು ನಿರೀಕ್ಷಿತ ಅತ್ಯಂತ ದೀರ್ಘ ತಯಾರಿಯೊಂದಿಗೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡುತ್ತಿದ್ದು, ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾರಂಭಿಸಲು ಚಿತ್ರ ತಂಡ ನಿರ್ದೇಶಿಸಿದೆ.