ರಾಜ್ಯೋತ್ಸವದಂದು ಪುನೀತ್‌ ರಾಜ್‌ಕುಮಾರ್‌ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರದಾನ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌  ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನವೆಂಬರ್ 1ರ ಸಂಜೆ 4 ಗಂಟೆಗೆ ವಿಧಾನ ಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಸಭೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಸಭೆ ಬಳಿಕ ಸುದ್ದಿಗಾರರಿಗೆ ಕಾರ್ಯಕ್ರಮದ ಕುರಿತ ವಿವರಗಳನ್ನು ತಿಳಿಸಿದರು.

2009ರ ನಂತರ ಯಾರಿಗೂ ಇದುವರೆಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿಲ್ಲ. ಈಗ ಒಟ್ಟಿಗೆ 8 ಮಂದಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ನಿರ್ಧಾರವಾಗಿದೆ. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನ. ಅವರು ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು. ಪುನೀತ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ. ಹಲವಾರು ಶ್ರೇಷ್ಠ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವೆಂಬರ್ 1ರ ಬಳಿಕ ಬೆಂಗಳೂರಿನಲ್ಲಿ ಮೂರು ಕಾರ್ಯಕ್ರಮ ಮಾಡಲಿದ್ದೇವೆ. 10 ದಿನಗಳ ಅಂತರದಲ್ಲಿ ಬೆಂಗಳೂರಿನ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಿದ್ದೇವೆ ಎಂದು ಈ ವೇಳೆ ಮುಖ್ಯಮಂತ್ರಿ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಕರ್ನಾಟಕ ಮೂಲದ ಒಬ್ಬರು ಪರಭಾಷಾ ನಟ ಅಥವಾ ನಟಿಗೆ ಆಹ್ವಾನ ಕೊಡುವ ಬಗ್ಗೆಯೂ ಚರ್ಚೆಯಾಗಿದ್ದು, ಕನ್ನಡದಲ್ಲಿ ಮಾತಾಡುವಂಥ ನಟ ಅಥವಾ ನಟಿಗೆ ಆಹ್ವಾನಿಸುವ ಕುರಿತು ಚರ್ಚೆಯಾಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಪೈಕಿ ಒಬ್ಬರನ್ನು ಕರೆಸುವ ಬಗ್ಗೆ ಚರ್ಚೆಯಾಗಿದೆ. ಆದರೆ ಈ ಸಂಬಂಧ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ತಿಳಿದುಬಂದಿದೆ.

ಕಾರ್ಯಕ್ರಮದ ರೂಪುರೇಷೆ ಕುರಿತು ರಾಜ್ ಕುಟುಂಬ ಸದಸ್ಯರ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲಾಯಿತು. ಸಭೆಯಲ್ಲಿ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಡಾ. ಸುಧಾಕರ್, ಗೋಪಾಲಯ್ಯ, ಸುನಿಲ್‌ ಕುಮಾರ್, ಬೈರತಿ ಬಸವರಾಜ್, ರಾಜ್​ ಕುಟುಂಬದವರಾದ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್​​​ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *