“ಬಿಹಾರ ಎಸ್‍ಐ ಆರ್: ಕೈಬಿಡಲಾದ ಹೆಸರುಗಳ ಪಟ್ಟಿಯನ್ನು ಕಾರಣ ಸಹಿತ ಆಗಸ್ಟ್ 19ರ ಸಂಜೆಯೊಳಗೆ ಪ್ರಕಟಿಸಿ”

ಈಗ ಚುನಾವಣಾ ಆಯೋಗಕ್ಕೆ  ಸುಪ್ರೀಂ ಕೋರ್ಟ್ ಆದೇಶ
ಬಿಹಾರ: ರಾಜ್ಯದಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್‍ಐಆರ್) ಎಂಬ ಕಾರ್ಯಕ್ರಮದ ನಂತರ ಚುನಾವಣಾ ಆಯೋಗ ಆಗಸ್ಟ್ 1, ರಂದು ಪ್ರಕಟಿಸಿದ ಕರಡು ಪಟ್ಟಿಯಲ್ಲಿ ಹಿಂದಿನ ಮತದಾರ ಪಟ್ಟಿಯಲ್ಲಿದ್ದ ಸುಮಾರು 65 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದನ್ನು ಪರಿಗಣಿಸಿದ ಸುಪ್ರಿಂ ಕೋರ್ಟ್ ಹೀಗೆ ಕೈಬಿಡಲಾಗಿರುವ ಹೆಸರುಗಳ ಪಟ್ಟಿಯನ್ನು ಆಗಸ್ಟ್ 19, 2025 ರಂದು ಸಂಜೆ 5 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮಧ್ಯಂತರ ಆದೇಶ ನೀಡಿದೆ. ಬಿಹಾರ

ಈ ಆದೇಶದಲ್ಲಿ, ಇಬ್ಬರು ನ್ಯಾಯಾಧೀಶರ ಸುಪ್ರಿಂ ಕೋರ್ಟ್ ಪೀಠವು, ಜಿಲ್ಲಾ ಚುನಾವಣಾ ಅಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಮತಗಟ್ಟೆವಾರು, ಸೇರಿಸದಿರಲು ಕಾರಣಗಳೊಂದಿಗೆ ಈ ಎಲ್ಲ ಹೆಸರುಗಳನ್ನು ಹುಡುಕಬಹುದಾದ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಹೇಳಿದೆ. ಬಿಹಾರ

ಕಾರಣಗಳನ್ನು ಹೊಂದಿರುವ ಭೌತಿಕ ಪಟ್ಟಿಗಳನ್ನು ಮತಗಟ್ಟೆ-ಮಟ್ಟದ ಅಧಿಕಾರಿಗಳು ಮತ್ತು ಬ್ಲಾಕ್ ಅಭಿವೃದ್ಧಿ/ಪಂಚಾಯತ್ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು. ಬಿಹಾರದ ಮುಖ್ಯ ಚುನಾವಣಾಧಿಕಾರಿಯು ಪಟ್ಟಿಯ ಸಾಫ್ಟ್ ಪ್ರತಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಕಾರಣಗಳೊಂದಿಗೆ ಪಡೆಯಬೇಕು ಮತ್ತು ಪ್ರಾದೇಶಿಕ ಮತ್ತು ಇಂಗ್ಲಿಷ್ ಪತ್ರಿಕೆಗಳು, ರೇಡಿಯೋ, ಟಿವಿ ಮತ್ತು ಭಾರತ ಚುನಾವಣಾ ಆಯೋಗದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಇದಕ್ಕೆ ವ್ಯಾಪಕ ಪ್ರಚಾರವನ್ನು ನೀಡಬೇಕು.

ಇದನ್ನೂ ಓದಿ: ಶವ ಹೂತಿಟ್ಟ ಪ್ರಕರಣದ ದೂರುದಾರ ಅನಾಮಿಕ ಭೀಮ INDIA TODAY ಚಾನಲ್​ಗೆ ನೀಡಿದ ಸಂದರ್ಶನ..!

ಈ  ಸಾರ್ವಜನಿಕ ಸೂಚನೆಯಲ್ಲಿ, ಬಾಧಿತ ವ್ಯಕ್ತಿಗಳು ತಮ್ಮ ಆಧಾರ್ ಪ್ರತಿಯೊಂದಿಗೆ ಆಕ್ಷೇಪಣೆಗಳನ್ನು ಎತ್ತಬಹುದು ಇದನ್ನು ಗುರುತು ಮತ್ತು ನಿವಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಬಿಎಲ್‌ಒಗಳು/ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಈ ಆದೇಶದ ಪಾಲನೆಯ ಪುರಾವೆಗಳನ್ನು ಕಲೆಹಾಕಿ ಒಟ್ಟು ಸ್ಥಿತಿಯ ವರದಿಯನ್ನು ಆಗಸ್ಟ್ 22 ರಂದು ಮುಂದಿನ ವಿಚಾರಣೆ ವೇಳೆಯಲ್ಲಿ ಪೀಠದ ಪರಿಗಣನೆಗೆ ಸಲ್ಲಿಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ಕೈಬಿಟ್ಟ ಸುಮಾರು 65ಲಕ್ಷ ಮತದಾರರ ವಿವರಗಳನ್ನು ರಾಜಕೀಯ ಪಕ್ಷಗಳಿಗೆ ಕೊಡಲಾಗಿದೆ ಎಂದು ಆಯೋಗ ಹೇಳಿಕೊಂಡರೂ, ವಾಸ್ತವವಾಗಿ  ಹೆಸರುಗಳನ್ನು ಏಕೆ ಕೈಬಿಡಲಾಗಿದೆ ಎಂಬಿತ್ಯಾದಿ ವಿವರಗಳನ್ನು ಕೊಟ್ಟಿಲ್ಲ, ಅಲ್ಲದೆ ಬ್ಲಾಕ್‍ ಮಟ್ಟದ ಪಟ್ಟಿಗಳನ್ನು ರಾಜಕೀಯ ಪಕ್ಷಗಳಿಗೆ ನಿರಾಕರಿಸಲಾಗಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಎಡಿಆರ್‍ ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ನ್ಯಾಯಪೀಠ ಆಗಸ್ಟ್ 9ರ ಒಳಗೆ  ಎಡಿಆರ್‍ ಎತ್ತಿರುವ ವಿಷಯಗಳಿಗೆ ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ಆದರೆ, ಚುನಾವಣಾ ಆಯೋಗ ಕಾನೂನಿನ ಪ್ರಕಾರ ತಾನು ಈ ವಿವರಗಳನ್ನು ನೀಡಬೇಕಾಗಿಲ್ಲ ಎಂಬ ನಿಲುವನ್ನು ತಳೆಯಿತು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಈ ನಡುವೆ ಮತದಾರ ಪಟ್ಟಿಗಳನ್ನು ‘ಶುಚಿಗೊಳಿಸುವ’ ಗುರಿಯಿಂದ ನಡೆದ  ಈ ಬೃಹತ್‍ ಪ್ರಮಾಣದ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಗಳನ್ನು ಹುಸಿಗೊಳಿಸುವಂತೆ ಮತ್ತು  ಈ ಕಸರತ್ತಿನ ನಿಜ ಉದ್ದೇಶದ ಬಗ್ಗೆ ಪ್ರತಿಪಕ್ಷಗಳು ವ್ಯಕ್ತಪಡಿಸಿದ ಸಂದೇಹಗಳು ನಿಜವಿರಬಹುದೆಂದು ಭಾವಿಸುವಂತೆ ಮಾಡುವ ಪ್ರಕಟವಾದ ಪಟ್ಟಿಗಳಲ್ಲಿನ ಹಲವಾರು ಗೊಂದಲಗಳು ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದವು. ಇದಲ್ಲದೆ, ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿಯವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಒಂದು ವಿಧಾನಸಭಾ ಕ್ಷೇತ್ರವಾದ ಮಹದೇವಪುರದ ಮತದಾರ ಪಟ್ಟಿಗಳಲ್ಲಿ ಆಗಿದೆ ಎನ್ನಲಾದ  ‘ಅಕ್ರಮ’ಗಳು ಬಿಹಾರದ ಎಸ್‍ಐಆರ್‍ ನಲ್ಲಿಯೂ ಕೇಳಿಬರಲಾರಂಭಿಸಿವೆ.

ಈ ಹಿನ್ನೆಲೆಯಲ್ಲಿ, ಆಗಸ್ಟ್ 12-13 ರಂದು ಮುಂದುವರೆಯಲಿದ್ದ ಸುಪ್ರಿಂ ಕೋರ್ಟ್‍ ವಿಚಾರಣೆಗಳು   ಎಲ್ಲ ಪ್ರಜಾಪ್ರಭುತ್ವವಾದಿಗಳಲ್ಲಿ ಅತೀವ ಆಸಕ್ತಿಯನ್ನು ಮೂಡಿಸಿದ್ದವು.

ಎರಡೂವರೆ ದಿನಗಳ ಕಾಲ ಅರ್ಜಿದಾರರ ವಾದಗಳನ್ನು ಆಲಿಸಿದ ನ್ಯಾಯಪೀಠ ಈ ಎಸ್‍ಐಆರ್  ಚುನಾವಣಾ ಆಯೋಗದ “ಅಧಿಕಾರ” ಮತ್ತು ಸಾಮಾನ್ಯ ನಾಗರಿಕರ ಮತ ಚಲಾಯಿಸಲು ಅವಕಾಶ ಪಡೆಯುವ ಹಕ್ಕಿನ ನಡುವಿನ ಒಂದು ಸಮರವಾಗಿದೆ  ಎಂದು ಎಂದು ಟಿಪ್ಪಣಿ ಮಾಡಿತು.

ಆದರೂ ಆಗಸ್ಟ್ 13 ರ ಸಂಜೆ ಚುನಾವಣಾ ಆಯೋಗ ಹೊರಡಿಸಿದ ಪತ್ರಿಕಾ ಹೇಳಿಕೆ  ಕೂಡ 65 ಲಕ್ಷ ಹೆಸರುಗಳನ್ನು ಕೈಬಿಟ್ಟಿರುವುದರ ಬಗ್ಗೆ ಕೇವಲ 0.2% ಆಕ್ಷೇಪಗಳು ಬಂದಿವೆ, 99.8% ಹೆಸರುಗಳಿಗೆ ಯಾವುದೇ ಸವಾಲು ಬಂದಿಲ್ಲ ಎಂದಿತ್ತು. ರಾಜಕೀಯ ಪಕ್ಷಗಳಿಂದಂತೂ ಯಾವುದೇ ಆಕ್ಷೇಪಗಳು, ದಾವೆಗಳು ಬಂದಿಲ್ಲ ಎಂದೂ ಹೇಳಿತ್ತು.

ಹೀಗಿರುವಾಗ, ಇದುವರೆಗೆ ಆಶಯಗಳನ್ನು ವ್ಯಕ್ತಪಡಿಸುತ್ತ ಬಂದಿರುವ  ನ್ಯಾಯಾಪೀಠ ಈಗ ಕಾರಣಗಳ ಸಹಿತ ಕೈಬಿಟ್ಟವರ ವಿವರಗಳನ್ನು ಸಲ್ಲಿಸಬೇಕು ಎಂದು ಆದೇಶ  ನೀಡಿರುವುದು ಗಮನಾರ್ಹ ಸಂಗತಿ ಎಂದು ವಿಶ್ಲೇಷಕರು ಹೇಳುತ್ತಾರೆ.ತಾವು ಆಕ್ಷೇಪಗಳನ್ನು ಸಲ್ಲಿಸಲು ಹೋದಾಗ, ಅವನ್ನು ಫಾರ್ಮ್ 6 ರಲ್ಲಿಯೇ (ಅಂದರೆ ಹೊಸ ಮತದಾರರನ್ನು ಸೇರಿಸುವ ಅರ್ಜಿ) ಸಲ್ಲಿಸಬೇಕು ಎಂದು ಹೇಳುವ ಕೆಳ ಮಟ್ಟಗಳಲ್ಲಿನ ಅಧಿಕಾರಿಗಳು ಅವನ್ನು ‘ಆಕ್ಷೇಪ’ಗಳೆಂದು ಪರಿಗಣಿಸುವುದಿಲ್ಲ ಎಂದು ಹಲವು ರಾಜಕೀಯ ಪಕ್ಷಗಳು ಈಗಾಗಲೇ ದೂರಿರುವುದನ್ನು ಕೂಡ  ಇಲ್ಲಿ ಗಮನಿಸಬಹುದು.

ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಕಾಂಗ್ರೆಸ್‌, ಬಿಜೆಪಿಯ ನಾಯಕರುಗಳೆ.. ನಿಮಗೆ ಮನುಷ್ಯತ್ವ ಇಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *