ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಪಿಎಸ್‍ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಈಗ ಬಿಜೆಪಿಯ ಹಾಲಿ ಸಂಸದ, ಹಾಗೂ ಶಾಸಕರೊಬ್ಬರ ಬುಡಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಸಂಸದರೊಬ್ಬರು ಪಿಎಸ್‍ಐ ಪರೀಕ್ಷೆಯನ್ನು ಕಲಬುರಗಿಯ ಜ್ಞಾನಜ್ಯೋತಿ ಕೇಂದ್ರಕ್ಕೆ ನೀಡಬೇಕೆಂದು ಶಿಫಾರಸು ಪತ್ರ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಐಡಿ ತನಿಖಾ ತಂಡ ಸಂಸದರಿಗೆ ವಿಚಾರಣೆಗೆ ಹಾಜರಾಗುವಂತೆ ಯಾವುದೇ ಸಂದರ್ಭದಲ್ಲೂ ನೋಟಿಸ್ ನೀಡುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ. ಇಡೀ ಪಿಎಸ್‍ಐ ನೇಮಕಾತಿ ಹಗರಣದ ಕೇಂದ್ರ ಬಿಂದುವೇ ಕಲಬುರಗಿಯ ಜ್ಞಾನಜ್ಯೋತಿ ಕೇಂದ್ರ. ಬಿಜೆಪಿ ನಾಯಕಿ ದಿವ್ಯಾಹಾದರಗಿ ಅವರ ಪತಿಗೆ ಸೇರಿದ ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದೇ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆಯಲು ಸಂಸದರು ಯಾವ ಕಾರಣಕ್ಕಾ ಶಿಫಾರಸು ಪತ್ರ ನೀಡಿದರು ಎಂಬ ಅನುಮಾನ ಮೂಡಿದೆ. ಈಗಾಗಲೇ ಪ್ರಕರಣ ಸಂಬಂಧ ದಿವ್ಯಾ ಅವರ ಪತಿ ಸೇರಿದಂತೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಮೇಲ್ವಿಚಾರಕರು ಮತ್ತು ಕೆಲ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಅಕ್ರಮದಲ್ಲಿ ಬಿಜೆಪಿ ನಾಯಕರ ಪಾಲು ಹೆಚ್ಚಿದೆ ಎಂಬ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ದಿವ್ಯಾ, ಕಾಶಿನಾಥ್ ಮತ್ತು ಎಬಿವಿಪಿ ಮುಖಂಡ ಅರುಣ್ ಪಾಟೀಲ್ ಅಕ್ರಮದ ಪ್ರಮುಖ ರೂವಾರಿಯಾಗಿದ್ದಾರೆ. ದಿವ್ಯಾ ಮತ್ತು ಕಾಶಿನಾಥ್ ತಲೆ ಮರೆಸಿಕೊಂಡಿದ್ದು, ಇವರಿಬ್ಬರ ಪತ್ತೆಗಾಗಿ ಸಿಐಡಿ ತನಿಖಾ ತಂಡ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಶೋಧ ಕಾರ್ಯವನ್ನು ಮುಂದುವರೆಸಿದೆ. ಈಗಾಗಲೇ ಸಿಐಡಿ ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಸುಮಾರು 100ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ಗುತ್ತಿಗೆದಾರರ ಶೇ.40 ಕಮಿಷನ್ ಆರೋಪವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ನಿರಂತರ ಪ್ರತಿಭನಟೆ ನಡೆಸುತ್ತಿವೆ. ಏತನ್ಮಧ್ಯೆ ಪಿಎಸ್‌ಐ ಹಗರಣದಲ್ಲಿ ಬಿಜೆಪಿಯ ನಾಯಕರ ಹೆಸರು ಕೇಳಿ ಬಂದಿರೋದರಿಂದಲೂ ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಇದೇ ವೇಳೆ ಬಿಜೆಪಿಯ ಕೋರ್ ಸಮಿತಿ ಸಭೆ ಏಪ್ರಿಲ್ 22 ರಿಂದ 23 ರ ವರೆಗೆ ಕಲಬುರ್ಗಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿದೆ.