ಬೆಂಗಳೂರು : ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಏಳನೇ ರ‍್ಯಾಂಕ್ ಗಿಟ್ಟಿಸಿದ್ದ ಅಭ್ಯರ್ಥಿ ವೀರೇಶ್ ಎಂಬಾತನ ಅಕ್ರಮವನ್ನು ಸಿಐಡಿ ಅಧಿಕಾರಿಗಳು ಬಯಲು ಮಾಡಿದ್ದಾರೆ.
ಈ ಹಿಂದೆ ಮೂರು ಬಾರಿ PSI ಪರೀಕ್ಷೆ ಬರೆದಿದ್ದ ವೀರೇಶ್ ಪಾಸ್ ಆಗಿರಲಿಲ್ಲ. ವಯಸ್ಸು ಮೀರಿ ಹೋಗುತ್ತೆ ಅನ್ನೋ ಭಯದಲ್ಲಿ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದನು. ಇದೀಗ ವೀರೇಶ್ ಬರೆದ OMR ಶೀಟ್ ನಿಂದಲೇ ಅಕ್ರಮ ಬಯಲಿಗೆ ಬಂದಿದೆ. ವೀರೇಶ್ ತಂದೆ ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ವೀರೇಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮದಲ್ಲಿ ಹಲವು ಅಭ್ಯರ್ಥಿಗಳು ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.
ಕಳೆದ ವರ್ಷ ವೀರೇಶ್ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಕೇಂದ್ರದಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದನು. ಕೇವಲ 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ವೀರೇಶ್ ಗೆ 121 ಅಂಕಗಳು ಬಂದಿರೋದು ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವೀರೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವೀರೇಶ್ ಪರೀಕ್ಷೆ ಬರೆದಿದ್ದ ಶಾಲೆ ಬಿಜೆಪಿ ಮುಖಂಡ ರೊಬ್ಬರಿಗೆ ಸೇರಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲು : ಸದ್ಯ ಅಭ್ಯರ್ಥಿ ವೀರೇಶ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಸಹಿ ನಕಲು (ಐಪಿಸಿ 465), ಕೆಲಸ ಕೊಡಿಸುವುದಾಗಿ ವಂಚನೆ (417), ವಂಚನೆ (ಐಪಿಸಿ 420), ಅಪರಾಧ ಸಂಚು (ಐಪಿಸಿ 34) ಆರೋಪದಡಿ ಕಲಬುರಗಿಯ ಚೌಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮತ್ತಷ್ಟು ಅಭ್ಯರ್ಥಿಗಳ ವಿರುದ್ಧ ರಾಜ್ಯದಾದ್ಯಂತ ಪ್ರಕರಣಗಳು ದಾಖಲಾಗುವ ಸಾಧ್ಯತೆಯೂ ಇದೆ.
‘ಅಕ್ರಮದ ಬಗ್ಗೆ ಇನ್‌ಸ್ಪೆಕ್ಟರ್ ಕೆ.ಎಚ್. ದಿಲೀಪ್‌ಕುಮಾರ್ ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಅದರನ್ವಯ ದಾಖಲಾಗಿರುವ ಪ್ರಕರಣದಲ್ಲಿ ಅಭ್ಯರ್ಥಿ ವೀರೇಶ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೆತಂದು ತನಿಖೆ ಮುಂದುವರಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
20 ಪ್ರಶ್ನೆ – 121 ಅಂಕ – 7 ನೇ ರ‌್ಯಾಂಕ್ : ಪಿಎಸ್‌ಐ ಹುದ್ದೆಗೆ ಅರ್ಜಿ (ಸಂಖ್ಯೆ 2271151) ಸಲ್ಲಿಸಿದ್ದ ವೀರೇಶ್ ಅವರಿಗೆ ನೋಂದಣಿ ಸಂಖ್ಯೆ- 9221946 ನೀಡಲಾಗಿತ್ತು. ‘ಪತ್ರಿಕೆ -2ರ (ಸಾಮಾನ್ಯ ಅಧ್ಯಯನ) ಒಎಂಆರ್ ಹಾಳೆಯಲ್ಲಿ ಕೇವಲ 20 ಪ್ರಶ್ನೆಗಳಿಗೆ ವೀರೇಶ್ ಉತ್ತರಿಸಿದ್ದರು. ಅದರ ನಕಲು ಪ್ರತಿಯನ್ನು ಅಭ್ಯರ್ಥಿಗೆ ನೀಡಿ, ಅಸಲಿ ಪ್ರತಿಯನ್ನು ಬೆಂಗಳೂರಿನ ಸಿಐಡಿ ಕಚೇರಿ ಆವರಣದಲ್ಲಿರುವ ನೇಮಕಾತಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ, ವಿಭಾಗದಲ್ಲಿದ್ದ ಒಎಂಆರ್ ಅಸಲಿ ಪ್ರತಿಯಲ್ಲಿ 100 ಪ್ರಶ್ನೆಗಳಿಗೂ ಉತ್ತರಿಸಿರುವುದು ದಾಖಲಾಗಿದೆ. ಅದೇ ಪ್ರತಿಯನ್ನು ಮೌಲ್ಯಮಾಪನ ಮಾಡಿ, 121.875 ಅಂಕಗಳನ್ನು ನೀಡಲಾಗಿದೆ’ ಎಂದೂ ತಿಳಿಸಿದರು.
ವಿರೇಶ್ ಲಕ್ಷಾಂತರ ರೂ ಹಣ ನೀಡಿ ಒಎಂಆರ್ ಶೀಟ್ ಪಡೆದಿದ್ದ ಎನ್ನಲಾಗುತ್ತಿದೆ. ಆತನಿಗೆ ಮತ್ತೊಂದು ಒಎಂಆರ್ ಶೀಟ್ ನೀಡಿದ್ದು ಯಾರು? ಬಿಗಿ ಭದ್ರತೆಯಲ್ಲಿದ್ದ ಆ ಕೊಠಡಿಯಲ್ಲಿ ಹೇಗೆ ನಕಲಿ ಒಎಂಆರ್ ಶೀಟ್ ಇಡಲಾಯಿತು. ಇದರ ಹಿಂದೆ ಯಾರೆಲ್ಲ ಇದ್ದಾರೆ ಇನ್ನಷ್ಟು ಉತ್ತರಗಳು ತನಿಖೆಯಿಂದ ಗೊತ್ತಾಗಬೇಕಿದೆ.