ಬೆಂಗಳೂರು : ಪಿಎಸ್ಐ ಆಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಮಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು 545 ಅಭ್ಯರ್ಥಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅದರಂತೆ, ಇಂದು ನೋಟಿಸ್ ನೀಡಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಮಾತ್ರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಪಿಎಸ್‌ಐ ಅಕ್ರಮದಲ್ಲಿ ಕೇವಲ ಕಲಬುರಗಿ ಅಷ್ಟೇ ಅಲ್ಲದೇ ರಾಜ್ಯದ ಹಲವು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ಹಾಗೂ ಒಎಂಆರ್ ಶೀಟ್ ಜೊತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಏಪ್ರಿಲ್ 20 ರಿಂದ ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಹಾಜರಿಗೆ ಸೂಚಿಸಿದೆ. 545 ಅಭ್ಯರ್ಥಿಗಳಲ್ಲಿ ಕ್ರಮಾಂಕದಂತೆ ತಲಾ 50 ಮಂದಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಒಎಂಆರ್ ಪ್ರತಿ ಮತ್ತು ಅಭ್ಯರ್ಥಿಗಳ ಬಳಿ ಇರುವ ನಕಲುಪ್ರತಿಯನ್ನು ಸಿಐಡಿ ತಾಳೆ ಹಾಕಲಿದ್ದು, ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಸಿಐಡಿ ಕಚೇರಿಯ ಅನೆಕ್ಸ್-2 ಕಟ್ಟಡದ ರೂಂ ನಂ. 7ರಲ್ಲಿ ತನಿಖಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ, ಈ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಆದೇಶಿಸಲಾಗಿದೆ.
ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದಲ್ಲಿ 45 ಅಭ್ಯರ್ಥಿಗಳ ತೀವ್ರ ವಿಚಾರಣೆ ನಡೆಸಿದರು. ಇನ್ನುಳಿದ ಐವರು ಅಭ್ಯರ್ಥಿಗಳು ಗೈರು ಹಾಜರಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಭ್ಯರ್ಥಿಗಳು ತಂದಿರುವ ಒಎಂಆರ್ ಶೀಟ್ಗಳಿಗೂ ಈಗಾಗಲೇ ಕೆಪಿಎಸ್‌ಸಿಯಿಂದ ಪಡೆದ ಮೂಲ ಒಎಂಆರ್ ಶೀಟ್ಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಬೆಂಗಳೂರಿನ ಪರೀಕ್ಷಾ ಕೇಂದ್ರ ಒಂದರಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗಷ್ಟೇ ನೋಟಿಸ್ ನೀಡಲಾಗಿತ್ತು. ತಮಗೆ ಸಿಕ್ಕಿರುವ ಸಾಕ್ಷಿಗಳನ್ನು ಆಧರಿಸಿ ಸಿಐಡಿ ವಿಚಾರಣೆ ನಡೆಸುತ್ತಿದೆ.
ದಿವ್ಯಾ ಹಾಗರಗಿ ಶರಣಾಗತಿ ಸಾಧ್ಯತೆ?
ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇಷ್ಟರಲ್ಲೇ ಸಿಐಡಿ ಪೊಲೀಸರೆದುರು ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಹೋಗಿ ಉಪಾಹಾರ ಮಾಡಿ ಬಂದವರು. ದಿವ್ಯ ಬಂಧನ ವಿಳಂಬಕ್ಕೆ ಬಿಜೆಪಿ ಮುಖಂಡರ ಕೈವಾಡವಿದೆ ಎಂಬ ಗುಮಾನಿ ಇದೆ ಎಂದು ಆರೋಪಿಸಲಾಗುತ್ತಿದೆ.
ಕಲಬುರಗಿಯಲ್ಲಿ ಏಪ್ರಿಲ್ 22ರಂದು ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 21ರಂದೇ ಕಲಬುರಗಿಗೆ ಬರಲಿದ್ದಾರೆ. ದಿವ್ಯ ಬಂಧನ ವಿಳಂಬವಾದಲ್ಲಿ ಅಂದು ಕಲಬುರಗಿಗೆ ಬರುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಘೇರಾವ್ ಹಾಕಿ ಪ್ರತಿಭಟಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಾಜಿ ಸಚಿವ ಶರಣ್‌ಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ. ಈ ಮುಜುಗರದ ಸನ್ನಿವೇಶ ಎದುರಾಗಬಾರದೆಂಬ ಕಾರಣಕ್ಕೆ ಕೆಲವರು ಶರಣಾಗುವಂತೆ ದಿವ್ಯಾ ಹಾಗರಗಿ ಗುಪ್ತ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.