ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಸಿಐಡಿ ಪೊಲೀಸರು ಪಿಎಸ್ಐ ಪರೀಕ್ಷಾ ಅಕ್ರಮ ಸಂಬಂಧ ಮೂವರು ಪಿಎಸ್‌ಐ ಅಭ್ಯರ್ಥಿಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಐಡಿ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ನೇತೃತ್ವದ ತಂಡ ರಾಯಚೂರು ಮೂಲದ ಕೆ. ಪ್ರವೀಣ್ ಕುಮಾರ್, ಕಲಬುರ್ಗಿಯ ಅರುಣ್ ಪಾಟೀಲ್, ಚೇತನ್ ಹಾಗೂ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯ ಟೀಚರ್ ಸುಮಾ, ಸಿದ್ದಮ್ಮ, ಸಾವಿತ್ರಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿ ಪರೀಕ್ಷಾ ಕೇಂದ್ರದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನು ಓದಿ: ಪಿಎಸ್ಐ ಪರೀಕ್ಷೆ ಅಕ್ರಮ : 20 ಪ್ರಶ್ನೆ – 121 ಅಂಕ – 7 ನೇ
ಕಳೆದ ಏಪ್ರಿಲ್ 11 ರಂದು ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿ ನೂರಕ್ಕೆ ನೂರು ಅಂಕ ಗಳಿಸಿ ಪಿಎಸ್ಐ ಆಗಿ ನೇಮಕವಾಗಿದ್ದ ವೀರೇಶ್‌ನನ್ನು ಬಂಧಿಸಿದ್ದರು. ಬಂಧಿತರ ಸಂಖ್ಯೆ ಏಳಕ್ಕೆ ಏರಿದ್ದು, ಅಕ್ರಮದಲ್ಲಿ ಶಾಮೀಲಾಗಿರುವ ಮತ್ತಷ್ಟು ಅಭ್ಯರ್ಥಿಗಳನ್ನು ಬಂಧಿಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.
ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲೆ ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರವಾಗಿತ್ತು. ಅಭ್ಯರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಪರಿವೀಕ್ಷಕರು ಒಗ್ಗೂಡಿ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಸಂಬಂಧ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅದರಂತೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ತಮಗೆ ಗೊತ್ತಿರುವಷ್ಟು ಪ್ರಶ್ನೆಗಳಿಗೆ ಮಾತ್ರ ಸರಿ ಉತ್ತರ ಬರೆದಿದ್ದರೆ. ಉಳಿದ ಪ್ರಶ್ನೆಗಳನ್ನು ಬಿಟ್ಟು ಬಿಟ್ಟಿದ್ದಾರೆ.
ಇದನ್ನು ಓದಿ: ಪಿಎಸ್ಐ ನೇಮಕಾತಿಯಲ್ಲಿ ಭಾರೀ ಅಕ್ರಮ: ಸಿಐಡಿ ತನಿಖೆಗೆ ಸರ್ಕಾರ ಆದೇಶ
ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಿಐಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದೇ ಮಾದರಿಯಲ್ಲಿ ಬೇರೆ ಕಡೆ ಸಹ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವವರ ಜಾಡು ಹಿಡಿದು ಸಿಐಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಆಕಾಂಕ್ಷಿಗಳು ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ರ್‍ಯಾಲಿ ನಡೆಸಿದ್ದರು. ಪಿಎಸ್ಐ ನೇಮಕಾತಿ ಸಂಬಂಧ ಮರು ಪರೀಕ್ಷೆ ಮಾಡುವಂತೆ ಆಗ್ರಹಿಸಿದ್ದರು.
ಕಳೆದ ಅಕ್ಟೋಬರ್‌ನಲ್ಲಿ ಪಿಎಸ್ಐ ನೇಮಕಾತಿ ಸಂಬಂಧ ಪರೀಕ್ಷೆ ನಡೆದಿತ್ತು. 545 ಪಿಎಸ್ಐ ಸಿವಿಲ್ ನೇಮಕಾತಿಗಾಗಿ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು.