ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಗಳಲ್ಲಿ ಪ್ರಮುಖನಾದ ರುದ್ರಗೌಡ ಡಿ. ಪಾಟೀಲ ಹಾಗೂ ಅವರ ಇನ್ನೊಬ್ಬ ಸಹಚರನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ(ಏಪ್ರಿಲ್ 23) ತಡರಾತ್ರಿ 3 ಗಂಟೆ ಸುಮಾರಿಗೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್ ನನ್ನ ಬಂಧಿಸಿ ಕರೆತಂದಿದ್ದಾರೆ. ಮಹಾರಾಷ್ಟ್ರದಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಐಡಿ ಕಚೇರಿಗೆ ಕೈಗೆ ಬೇಡಿ ತೊಡಿಸಿ ಕರೆತಂದ ರುದ್ರೇಗೌಡ ಮಾಧ್ಯಮಗಳ ಮುಂದೆ ನಕ್ಕು ಫೋಸ್ ಕೊಟ್ಟಿದ್ದಾನೆ.
ಮಹಾರಾಷ್ಟ್ರದ ಪುಣೆಯ ಬಳಿ ರುದ್ರಗೌಡ ಅವರ ಮೊಬೈಲ್ ಲೊಕೇಶನ್ ಪತ್ತೆ ಮಾಡಿದ ಅಧಿಕಾರಿಗಳು, ವಿಶೇಷ ತಂಡ ರಚಿಸಿಕೊಂಡು ಅಲ್ಲಿಗೆ ಹೋಗಿ ವಶಕ್ಕೆ ಪಡೆದರು. ರುದ್ರಗೌಡ ಜೊತೆಗೇ ಇದ್ದ, ಅಕ್ರಮಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿ ಮಂಜುನಾಥ ಎನ್ನುವವರನ್ನೂ ಸೆರೆ ಹಿಡಿಯಲಾಗಿದೆ. ರುದ್ರಗೌಡ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದವರು. ಮಂಜುನಾಥ ಬಿದನೂರು ನಿವಾಸಿಯಾಗಿದ್ದಾರೆ.
ರುದ್ರಗೌಡನನ್ನು ಇಂದು ನ್ಯಾಯಾಧೀಶರ ಮುಂದೆ ಸಿಐಡಿ ಹಾಜರುಪಡಿಸಲಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಸಿಐಡಿ ಕೋರಲಿದೆ.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ. ಪರೀಕ್ಷೆ ಕೇಂದ್ರದೊಳಗಿದ್ದ ಕೆಲವು ಅಭ್ಯರ್ಥಿಗಳಿಗೆ ರುದ್ರಗೌಡ ಪಾಟೀಲ್ ಬ್ಲೂಟೂತ್ ಮೂಲಕ ಉತ್ತರ ರವಾನಿಸಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರುದ್ರಗೌಡ ಅವರ ಅಣ್ಣ ಮಹಾಂತೇಶ, ಅಭ್ಯರ್ಥಿಗಳಾದ ವಿಶಾಲ್ ಶಿರೂರ, ಹಯ್ಯಾಳಿ ದೇಸಾಯಿ, ಮೊಬೈಲ್ ಕೊಟ್ಟು ಸಹಕರಿಸಿದ ಶರಣಬಸಪ್ಪ, ಕಾನ್ಸ್ ಸ್ಟೇಬಲ್ ರುದ್ರಗೌಡ ಪಾಟೀಲ ಎನ್ನುವವರನ್ನು ಬಂಧಿಸಲಾಗಿದೆ. ಇವರೆಲ್ಲ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಆರೋಪದಡಿ ಮಾತ್ರ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 16 ಮಂದಿಯನ್ನು ಬಂಧಿಸಲಾಗಿದೆ.
ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದವರಿಗೆ ಆತಂಕ ಎದುರಾಗಿದ್ದು ಪೊಲೀಸ್ ಸಬ್ ಇನ್ಸ್ಪೆಕ್ಟರ್(ಪಿಎಸ್ಐ), ಕಾನ್ಸ್ಟೇಬಲ್, ಎಫ್ಡಿಎ, ಎಸ್ಡಿಎ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಅನುಮಾನ ರುದ್ರಗೌಡ ಪಾಟೀಲ್ ಮೇಲಿದೆ.