ಪಿಎಸ್ಐ‌ ನೇಮಕಾತಿ ಹಗರಣ: ₹15 ಲಕ್ಷ ಪಡೆದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು?

ಕೊಪ್ಪಳ: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಫೋನ್‌ ಸಂಭಾಷಣೆಯೊಂದು ಬಹಿರಂಗಗೊಂಡಿದು. ಅದರಲ್ಲಿ, ಹಣ ನೀಡಿದ ವ್ಯಕ್ತಿಯೊಬ್ಬ ಶಾಸಕನಿಗೆ  ಹಣ ವಾಪಸ್ಸು ನೀಡುವಂತೆ ಕೇಳಿದ್ದಾರೆ ಎಂಬುದು ಫೋನ್‌ ಸಂಭಾಷಣೆ ಮೂಲಕ ಬಯಲಾಗಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಪರಸಪ್ಪ ಬೇಗೂರು ಎಂಬುವರು ತನ್ನ ಮಗನನ್ನು ಪಿಎಸ್‌ಐ ಮಾಡಲು  ₹15 ಲಕ್ಷ ಹಣವನ್ನು ಆಡಳಿತ ಪಕ್ಷದ ಕ‌ನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ನೀಡಿರುವುದು ದೃಢಪಟ್ಟಿದ್ದು. ಹಣವನ್ನು ವಾಪಸ್ಸು ಕೇಳುವುದಕ್ಕೆ ಸಂಬಂಧಿಸಿ ಫೋನ್‌ ಸಂಭಾಷಣೆ ನಡೆದಿದೆ. ಪೋನ್‌ ಮಾಡಿದ ಪರಸಪ್ಪ ಬೇಗೂರು ನನ್ನ ಮಗನ ಪಿಎಸ್ಐ‌ ನೇಮಕಾತಿಗೆ ಕೊಟ್ಟ ₹15 ಲಕ್ಷ ಹಣವನ್ನು ವಾಪಸ್ ಕೊಡಿ ಎಂದು ‌ಕೇಳಿದ್ದಾರೆ.

ಹಣ ಕೊಡು ಎಂದು‌ ನಾನೇನು ನಿಮ್ಮ ಮನೆಗೆ ಬಂದಿದ್ದೆನಾ? ನಿನ್ನ ಉದ್ದೇಶವೇನು? ನೀನು ಯಾವ ಕೆಲಸಕ್ಕೆ ‌ಹಣ‌ ಕೊಟ್ಟಿದ್ದೀಯಾ? ಅದನ್ನು ‌ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ? ಹುಚ್ಚನ ರೀತಿಯಲ್ಲಿ ಮಾತನಾಡುತ್ತಿದ್ದೀಯಾ? ಎಲ್ಲರೂ‌ ನನಗೆ ಪೋನ್ ‌ಕರೆ ಮಾಡುತ್ತಿದ್ದಾರೆ. ಹಿಂಗೆ ಕೇಳಿದರೆ ಬಹಳ ನಿಷ್ಠುರವಾಗಿ ಮಾತನಾಡ ಬೇಕಾಗುತ್ತದೆ. ಸಾಲ ಕೊಡು ಎಂದು ಕೇಳಲು‌ ನಿನ್ನ ಮನೆಗೆ ಬಂದಿದ್ದೇನಾ? ಗೌರವದಿಂದ ಕೊಟ್ಟಿದ್ದೀಯಾ.‌ ನಾಲ್ಕು ದಿನ ಹೆಚ್ಚು ಕಡಿಮೆ ಆಗುತ್ತದೆ. ಹಣ ನಾನೇ ಹೇಳಿ ಕೊಡಿಸುತ್ತೇನೆ. ಅದಕ್ಕೆ ನಾನು ಜವಾಬ್ದಾರಿಯಾಗಿದ್ದೇನೆ. ನಿನ್ನ ಅವಸರಕ್ಕೆ, ನಿನ್ನ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ. ಹಣ‌ ಬೇರೆಯವರ ಕಡೆ ಇದೆ. ಅನುಕೂಲ‌ ಮಾಡಿ ವಾಪಸ್ ಕೊಡಿಸುವೆ ಎಂದು ಶಾಸಕ ಬಸವರಾಜ ದಢೇಸುಗೂರು ಮಾತನಾಡಿದ್ದಾರೆ ಎನ್ನಲಾಗಿದೆ.

ಆಡಿಯೊ ಸಂಭಾಷಣೆ ಹೀಗಿದೆ.

ಪರಸಪ್ಪ: ನನ್ನ ಹಣ ಕೊಡಿ. ಕೈ ಮುಗಿತೀನಿ. ಸರ್, ಬರ್ತೀನಿ ಮೂರ್ನಾಲ್ಕು ದಿನ ಆಯಿತು.

ಶಾಸಕ: ನಾನು ಬೆಂಗಳೂರಿಗೆ ಬಂದಿದ್ದೇನೆ. ಜಿಲ್ಲಾಧ್ಯಕ್ಷ ದೊಡ್ಡನಗೌಡ ಹತ್ತಿರ ಮಾತನಾಡಿದ್ದೇನೆ.

ಪರಸಪ್ಪ: ಹೌದು ಸರ್, ದೊಡ್ಡನಗೌಡರು ನಮಗೆ ಬೇಕಾದವರು.

ಶಾಸಕ: ನನಗೆ ಯಾರಿಂದಲೂ‌ ಹೇಳಿಸುವುದು, ಕೇಳಿಸುವುದು ಬೇಕಾಗಿಲ್ಲ. ದುಡ್ಡು ವಾಪಸ್ ಕೊಡುತ್ತೇನೆ.

ಪರಸಪ್ಪ: ಹಣ ಕೊಟ್ಟು‌ ಒಂದೂವರೆ ವರ್ಷ ಆಯಿತು ಸರ್.

ಶಾಸಕ: ಹಣ ಪಡೆದಿದ್ದೇನೆ ಸರ್ಕಾರಕ್ಕೆ ಕೊಟ್ಟ ಹಣ ಅದು.‌ ಬೆಂಗಳೂರಿನಿಂದ ವಾಪಸ್ ‌ಬಂದ ಮೇಲೆ ಕೊಡುತ್ತೇನೆ.

ಪರಸಪ್ಪ: ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ನಿಮ್ಮ ಬಳಿ ಬರುವೆ. ಹಣದ ತೊಂದರೆಯಾಗಿದೆ.

ಶಾಸಕ: ಬಾರಪ್ಪ, ಅನುಮಾನ ಬೇಡ. ಹಣ ಖಂಡಿತಾ ಕೊಡುತ್ತೇನೆ.

ಎರಡನೇ ಆಡಿಯೊ ಹೀಗಿದೆ;

ಶಾಸಕ: ನನಗೆ ಎಷ್ಟು ಕೋಟಿ ಹಣ ಕೊಟ್ಟಿದ್ದೀಯಪ್ಪ

ಪರಸಪ್ಪ: ಸರ್, ₹15 ಲಕ್ಷ ಕೊಟ್ಟಿದ್ದೇನೆ.

ಶಾಸಕ: ನಿನಗೆ ಮಾನ ಮರ್ಯಾದೆ ಎನಾದರೂ ಇದೆಯಾ, ಇಲ್ಲವಾ? ಯಾರ ಮುಂದೆ ಎನು‌ ಮಾತನಾಡಬೇಕು ಎನ್ನುವ ಸೌಜನ್ಯ ಇದೆಯೊ ಇಲ್ಲವೊ?

ಪರಸಪ್ಪ: ಎಲ್ಲಾ ಹೇಳಿದ್ದೇವಲ್ಲ ಸರ್.

ಶಾಸಕ: ಮಾತುಕತೆ ನಡೆದಿದೆ. ನೋಡ್ರಿ ಪರಸಪ್ಪ‌ ಮಾತು ಲೂಸ್ ಆಗಿದ್ರೆ ಸರಿ ‌ಇರಲ್ಲ. ನಿನ್ನ ಹಣದಿಂದ‌‌ ನನಗೆ ಎನೂ ಆಗಬೇಕಾಗಿಲ್ಲ‌. ಮಾತನಾಡಬೇಕಾದರೆ ಬಹಳ ಗೌರವದಿಂದ ‌ಇರಬೇಕು. ಹಣ ಕೊಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ‌.

ಪರಸಪ್ಪ: ನಾನು ಬಡವ ಇದ್ದೇನೆ ಸರ್.

ಶಾಸಕ: ನೀನು ಬಡವ, ಶ್ರೀಮಂತ ‌ಎನೇ ಆಗಿರು.‌ ಮಾತು ಸರಿಯಾಗಿ ಇರಬೇಕು.

ಪರಸ್ಪಪ್ಪ: ಸರ್, ಹಣ ಕೊಡುವುದಾದರೆ ಕೊಡಿ. ಇಲ್ಲವಾದರೆ ಇಲ್ಲ ಎಂದು ಹೇಳಿಬಿಡಿ.

ಶಾಸಕ: ನಾನು ಕೊಡ್ತೀನಿ.‌ ಇವೆಲ್ಲ ಹೇಳಬೇಡ.‌ ನಿನ್ನ ಬಳಿ ಸಾಲ ತಂದಿಲ್ಲ. ಇಷ್ಟೇ ದಿನದಲ್ಲಿ ಕೊಡ್ತೇನೆ ಎಂದು ಹೇಳಿದ್ನಾ?

ಪರಸಪ್ಪ: ಕೊಡುವುದಿಲ್ಲ ಎಂದು ಹೇಳಿ ಬಿಡಿ ಸರ್.

ಶಾಸಕ: ಕೊಡುವುದಿಲ್ಲ ಎಂದು ನಾನು ಯಾಕೆ ಹೇಳಲಿ. ಅಂತ ಚಿಲ್ಲರೆ ಕೆಲಸ ಮಾಡುವುದಿಲ್ಲ.

ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಪಿಎಸ್​ಐ ಅಭ್ಯರ್ಥಿಗಳಿಂದ ಹಣ ಪಡೆದಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ರಮದ ಕಬಂಧಬಾಹು ಜಿಲ್ಲೆಯಲ್ಲೂ ಹರಡಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಪಿಎಸ್ಐ ನೇಮಕಾತಿ ಹಗರಣ ಮತ್ತೊಂದು ತಿರುವು ಪಡೆದಿದೆ.

ಶಾಸಕನನ್ನು ಬಂಧಿಸಲು ಎಂಬಿ ಪಾಟೀಲ್‌ ಆಗ್ರಹ

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರಕ್ಕೆ ಹಣ ನೀಡಿರುವುದಾಗಿ ಶಾಸಕ ಬಸವರಾಜ ದಢೇಸುಗೂರು ಹೇಳಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.

ಗವಿಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್‌, ಈ ಪ್ರಕರಣದಲ್ಲಿ ಸರ್ಕಾರ ಉತ್ತರಿಸಬೇಕು. ಅಕ್ರಮವಾಗಿ ಪಡೆದ ಹಣವನ್ನು ಸರ್ಕಾರಕ್ಕೆ ಕೊಟ್ಟಿದ್ದಾಗಿ ಹೇಳಿದ್ದಾರೆ. ತಕ್ಷಣ ಶಾಸಕನನ್ನು ಬಂಧಿಸಬೇಕು. ಪ್ರಕರಣದಲ್ಲಿ ಯಾರಾರು ಇದ್ದಾರೆ, ಅವರ ಮೇಲೆ ಕ್ರಮಕೈಗೊಳ್ಳಬೇಕು. ಎಂದರು.

Donate Janashakthi Media

Leave a Reply

Your email address will not be published. Required fields are marked *