ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯು ಸಿಐಡಿ ನಡೆಸುತ್ತಿದೆ. ಇದರ ನಡುವೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿಯಾಗಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ 1995 ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಆರ್. ಹಿತೇಂದ್ರ ಅವರನ್ನು ನೇಮಕ ಮಾಡಿ ಹೆಚ್ಚುವರಿ ಹೊಣೆ ನೀಡಲಾಗಿದೆ. ಪ್ರಸ್ತುತ ಅವರು ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೃತ್ ಪೌಲ್ ಆಂತರಿಕ ಭದ್ರತಾ ದಳದ ಎಡಿಜಿಪಿ ಆಗಿ ವರ್ಗಾವಣೆಯಾಗಿದ್ದಾರೆ.
ಇತ್ತೀಚಿಗೆ 545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಬಗ್ಗೆ ಅಮೃತ್ ಪೌಲ್ ಅವರಿಗೆ ದೂರುಗಳು ಬಂದಿದ್ದರೂ ಸಹ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದವು.
ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಪೊಲೀಸ್ ವಲಯದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ವರ್ಗಾಯಿಸಲಾಗಿದೆ ಎನ್ನಲಾಗಿದೆ.
ಅಮೃತ್ ಪೌಲ್ ಅಕ್ರಮದಲ್ಲಿ ಭಾಗಿ: ಕಾಂಗ್ರೆಸ್ ಆರೋಪ
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಕಾಂಗ್ರೆಸ್‌ನಿಂದ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ಕಾಂಗ್ರೆಸ್ ಆರೋಪದ ಹಿನ್ನೆಲೆ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ; ನೇಮಕಾತಿ ಪ್ರಕ್ರಿಯೆ ಎಡಿಜಿಪಿ ಅಡಿಯಲ್ಲಿ ನಡೆದಿದೆ. ಯಾರೆಲ್ಲ ಅಂತಹ ಕ್ರಿಯೆಯೊಳಗೆ ಕೆಲಸ ಮಾಡಿದ್ದಾರೋ ಅಂತಹವರನ್ನು ಒಂದು ಗಳಿಗೆಯೂ ಮುಂದುವರಿಸುವುದು ಸರಿಯಲ್ಲ. ಈಗ ನೇಮಕಾತಿ ಎಡಿಪಿಜಿ ವರ್ಗಾವಣೆ ಆಗಿದೆ. ಎಲ್ಲೋ ಒಂದು ಕಡೆ ಸರ್ಕಾರವೇ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಮೃತ್ ಪೌಲ್ ವರ್ಗಾವಣೆಗೆ 15 ದಿನ ಬೇಕಿತ್ತಾ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ದಿವ್ಯಾ ಹಾಗರಗಿ ಅವರ ಫೋಟೋ ಯಾರ ಜೊತೆಯಾದರೂ ಇರಲಿ. ಅವರು ಬಿಜೆಪಿನೋ, ಕಾಂಗ್ರೆಸ್ ನವರೋ, ಜೆಡಿಎಸ್ ನವರೋ. ಅವರೊಬ್ಬ ಆರೋಪಿ, ಮೊದಲು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ. ಡಿ.ಕೆ ಶಿವಕುಮಾರ್ ಜೊತೆ ಇರುವ ಫೋಟೋಗೆ ಪಕ್ಷದ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ. ದಿವ್ಯಾ ಹಾಗರಗಿ ಅವರು ಅವರ ಮಗನ ಮದುವೆ ಆಮಂತ್ರಣ ಕೊಡಲು ನನ್ನ ಮನೆಗೂ ಬಂದಿದ್ದರು. ಅವರ ಜೊತೆ ನನ್ನ ಫೋಟೋನೂ ಇರಬಹುದು. ಮೋದಿ ಅವರ ಜೊತೆಯೂ ದಿವ್ಯಾ ಹಾಗರಗಿ ಅವರ ಫೋಟೋ ಇರಬಹುದು. ಹಾಗಂತ ವಿಚಾರಣೆ ನಡೆಸಬಾರದಾ? ಬಿಜೆಪಿ ಅವರ ಸಾಮಾಜಿಕ ಜಾಲತಾಣದವರು ಹಾಕುವ ಪೊಸ್ಟ್ ಗೆ ಉತ್ತರ ಕೊಡಲು ಹೋದರೆ ದಿನ ಪೂರ್ತಿ ಅದೇ ಕೆಲಸ ಮಾಡ್ಕೊಂಡಿರಬೇಕಾಗುತ್ತೆ ಎಂದು ಪ್ರಿಯಾಂಕ್ ಖರ್ಗೆ ನುಡಿದರು.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ರುದ್ರಗೌಡ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪ್ರಮುಖ ವ್ಯಕ್ತಿ ಎನ್ನಲಾಗಿದೆ.