ಪಿಎಸ್‌ಐ ಅಕ್ರಮ ಸರ್ಕಾರವೇ ಒಪ್ಪಿಕೊಂಡಿದೆ; ಅದಕ್ಷ ಗೃಹ ಮಂತ್ರಿ ರಾಜೀನಾಮೆ ನೀಡಬೇಕು

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ತಮಗೆ ಎರಡೆರಡು ನಾಲಿಗೆ ಇದೆ ಎಂಬುದನ್ನ ಮತ್ತೆ ಸಾಬೀತು ಪಡಿಸಿದ್ದಾರೆ. ವಿಧಾನ ಪರಿಷತ್ ಅಧಿವೇಶನದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಎದೆ ತಟ್ಟಿ ಹೇಳಿದ್ದ ಗೃಹ ಸಚಿವರು ಇಂದು ನಡು ಬಗ್ಗಿಸಿ ಪಿಎಸೈ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ, ಮರು ಪರೀಕ್ಷೆ ನಡೆಸುತ್ತೇವೆ ಎಂದಿರುವುದು ಅಕ್ರಮ ನಡೆದಿರುವ ಬಗ್ಗೆ ಸರ್ಕಾರವೇ ಒಪ್ಪಿಕೊಂಡಂತಾಗಿದೆʼʼ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಇದನ್ನು ಓದಿ: 545 ಪಿಎಸ್ಐ ಪ್ರವೇಶ ನೇಮಕಾತಿ ರದ್ದು: ಮರು ಪರೀಕ್ಷೆಗೆ ರಾಜ್ಯ ಸರ್ಕಾರ ನಿರ್ಧಾರ

ಈ ಮೂಲಕ ಹಾವಿಗೂ ಎರಡು ನಾಲಿಗೆ ಇದೆ, ಹಾವಿನ ಪುರದವರಿಗೂ ಕೂಡ ಎರಡೆರಡು ನಾಲಿಗೆ ಇದೆ ಎಂದು ಸಾಬೀತಾಯಿತು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದ್ದು, ಕಳೆದ ಬಾರಿ ಅಧಿವೇಶನದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಕೋಟಿ ಕೋಟಿ ಭಾರೀ ಅವ್ಯವಹಾರಗಳು ನಡೆದಿವೆ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೆ. ರಾಜ್ಯದ ಪ್ರಮುಖ ಪತ್ರಿಕೆಗಳು ಸರ್ಕಾರದ ಮುಖಕ್ಕೆ ರಾಚುವಂತೆ ಇಲಾಖೆಯ ಮುಖವಾಡಗಳನ್ನೇ ಧಾರಾವಾಹಿಗಳಂತೆ ಬಿಚ್ಚಿಟ್ಟಿದ್ದವು. ಆಗ ಸತ್ಯ ಹರಿಶ್ಚಂದ್ರರಂತೆ ಮಾತಾಡಿದ್ದ ಗೃಹ ಸಚಿವರು ಅಕ್ರಮವೇ ನಡೆದಿಲ್ಲ ಎಂದು ಅಧಿವೇಶನದಲ್ಲಿ ಸುಳ್ಳು ಹೇಳಿಕೆ ಕೊಟ್ಟಿದ್ದರು. ಅಕ್ರಮ ಆಗಿದೆ ಎಂದಾದಮೇಲೆ ಯಾವ ನೈತಿಕತೆಯ ಮೇಲೆ ಗೃಹ ಸಚಿವರು ಮುಂದುವರೆಯುತ್ತಿದ್ದಾರೆʼʼ ಎಂದರು.

ಅಕ್ರಮದ ಬಗ್ಗೆ ದಯವಿಟ್ಟು ವಿಚಾರಣೆಗೆ ಬನ್ನಿ ಎಂದು ಕರೆಯುವಂತಹ ಅದಕ್ಷ ಗೃಹ ಸಚಿವರನ್ನ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬರುವ ಪಿಎಸ್‌ಐಗಳ ನೇಮಕಾತಿಯಲ್ಲಿಯೇ ಕೋಟಿ ಕೋಟಿ ಅವ್ಯವಹಾರಗಳು ನಡೆಯುತ್ತಿದ್ದರು, ನಿಮ್ಮ ಗಮನಕ್ಕೆ ಬಾರದೆ ಅಕ್ರಮ ನಡೆದಿದೆಯೇ? ಸ್ವಇಲಾಖೆಯಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಅಸಮರ್ಥರಾಗಿ ಮುಂದುವರೆಯಲು ನಿಮ್ಮ ನೈತಿಕತೆ ಪ್ರಶ್ನೆ ಮಾಡುತ್ತಿಲ್ಲವೇ? ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಇಷ್ಟಕ್ಕೂ ಸರ್ಕಾರ ಮರು ಪರೀಕ್ಷೆ ನಡೆಸುವುದಾದರೇ ಪ್ರಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವ ತಪ್ಪಿಗೆ ಶಿಕ್ಷೆ ಅನುಭವಿಸಬೇಕು? ಈಗಾಗಲೇ ಮುಂದೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅಕ್ರಮ ನಡೆಯುವುದಿಲ್ಲ ಎಂಬ ಯಾವ ಮುಖ ಇಟ್ಟು ಭರವಸೆ ಕೊಡುತ್ತೀರಿ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪ್ರಶ್ನೆಗಳ ಸವಾಲು ಹಾಕಿದ್ದಾರೆ.

ಇದನ್ನು ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ : ಕಲಬುರಗಿ ಜಿಲ್ಲೆಗ ಸಿಕ್ಕಿದ್ದ ಸೀಟುಗಳೆಷ್ಟು ಗೊತ್ತೆ?!

545 ಪಿಎಸ್‌ಐ ಹುದ್ದೆಗಳಿಗೆ ರಾಜ್ಯದಲ್ಲಿ ಒಟ್ಟು 54,289 ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳು ಶುಲ್ಕ ಕಟ್ಟಿದ್ದಾರೆ. ಮತ್ತೆ ಅವರಿಂದ ಶುಲ್ಕ ಪಡೆದರೆ ಒಂದೇ ಪರೀಕ್ಷೆಗೆ ಎರಡೆರಡು ಬಾರಿ ಶುಲ್ಕ ಕಟ್ಟಬೇಕೆ? ನಿಮ್ಮ ತಪ್ಪಿಗೆ ಅಭ್ಯರ್ಥಿಗಳಿಗೆ ಬರೆ ಎಳೆಯುವಂತಾಗಲಿದೆ. ಹೀಗಾಗಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಮೊದಲ ಬಾರಿಗೆ ಅರ್ಜಿ ಶುಲ್ಕ ಕಟ್ಟಿದವರಿಗೆ ಉಚಿತ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಒತ್ತಾಯಿಸುತ್ತೇನೆ ಎಂದು ಬಿ ಕೆ ಹರಿಪ್ರಸಾದ್‌ ಹೇಳಿದರು.

ಗೃಹ ಸಚಿವ ಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಹೆಚ್ಚು ಮಾತಾಡದೆ ಕೆ.ಎಸ್.‌ ಈಶ್ವರಪ್ಪ ಮಾದರಿಯಲ್ಲಿ “ವಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಖುರ್ಚಿ ಖಾಲಿ ಮಾಡಬೇಕೆಂದು ಅರಗ ಜ್ಞಾನೇಂದ್ರ ಅವರನ್ನು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *