‘ಹ್ಯಾಪಿ ಬರ್ತ್‌ಡೇ… ರಾಜೀನಾಮೆ ನೀಡಿ’: ಪ್ರಧಾನ್ ವಿರುದ್ಧ ಪ್ರತಿಭಟನೆ ತೀವ್ರ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ತಲುಪಿದ ಹಿನ್ನೆಲೆಯಲ್ಲಿ, ಅಭಿಜಿತ್ ದೀಪ್ಕೆ ಅವರು ವಿನೂತನ ರೀತಿಯಲ್ಲಿ ಸಚಿವರ ಹುಟ್ಟುಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಬಿಳಿ ಫಲಕದ ಮೇಲೆ “Happy Birthday Pradhan, Please Resign” ಎಂದು ಬರೆಯುವ ಮೂಲಕ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಹುಟ್ಟುಹಬ್ಬದ ಹಾಡು ಹಾಡಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನಂತರ ಮಾತನಾಡಿದ ದೀಪ್ಕೆ, “ಸಚಿವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮಗೆ ಉಡುಗೊರೆಯಾಗಿ ರಾಜೀನಾಮೆ ನೀಡಿ. ಬೇಕಿದ್ದರೆ ರಾಜೀನಾಮೆ ಪತ್ರವನ್ನು ನಾವು ತಯಾರಿಸುತ್ತೇವೆ, ಅದಕ್ಕೆ ನೀವು ಸಹಿ ಹಾಕಿದರೆ ಸಾಕು” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಅಯೋಧ್ಯಾ ರಾಮಮಂದಿರದಲ್ಲಿ ಭಕ್ತರ ಕಾಣಿಕೆ ಹುಂಡಿಯ ಹಗಲು ದರೋಡೆ?

ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಈ ಧರಣಿಗೆ ದೀಪ್ಕೆ ನೇತೃತ್ವ ವಹಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

ಪ್ರತಿಭಟನೆ ಆರಂಭವಾದ ಬಳಿಕ ಸ್ಥಳ ತೊರೆಯಲು ನಿರಾಕರಿಸಿರುವ ಅವರು, ಸರ್ಕಾರ ಇದುವರೆಗೆ ಮಾತುಕತೆಗೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ತಮ್ಮ ಸಂಘಟನೆಯ ಎಕ್ಸ್ ಖಾತೆಯನ್ನು ನಿರ್ಬಂಧಿಸಿರುವ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಮಿತಿಯ ಮುಂದೆ ಪ್ರಶ್ನೆ ಎತ್ತಿದರು.

“ಎಲ್ಲವೂ ಗೌಪ್ಯ ಎಂದು ಹೇಳುವ ಸರ್ಕಾರ, ನೀಟ್ ಪ್ರಶ್ನೆಪತ್ರಿಕೆಯನ್ನು ಹೇಗೆ ಕಾಪಾಡಲಿಲ್ಲ? ಸೋರಿಕೆ ಆಗದೇ ಇದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆಗಳು ತಪ್ಪಿಸಬಹುದಾಗಿತ್ತು” ಎಂದು ಅವರು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ದೀಪ್ಕೆ, “ಅಂತರರಾಷ್ಟ್ರೀಯ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತೇವೆ ಎನ್ನುವ ಸರ್ಕಾರ, ಒಂದು ಸಚಿವರ ರಾಜೀನಾಮೆಯನ್ನೂ ಪಡೆಯಲು ವಿಫಲವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ?” ಎಂದು ಪ್ರಶ್ನಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 17 ವಿದ್ಯಾರ್ಥಿಗಳ ಸಾವು ಸಂಭವಿಸಿದೆ ಎಂದು ಆರೋಪಿಸಿದ ಅವರು, ಇದರ ಹೊಣೆಗಾರಿಕೆ ಸಚಿವರ ಮೇಲಿದೆ ಎಂದರು.

“ನಾವು ಮತ ಬೇಡುವುದಿಲ್ಲ, ನ್ಯಾಯ ಕೇಳುತ್ತಿದ್ದೇವೆ. ನಮ್ಮನ್ನು ಭಯೋತ್ಪಾದಕರು ಎಂದು ಕರೆಯುವುದು ಸರಿಯಲ್ಲ. ನಾವು ತೆರಿಗೆ ಪಾವತಿಸುವ ನಾಗರಿಕರು” ಎಂದು ಅವರು ಕಿಡಿಕಾರಿದರು.

ಇದೇ ವೇಳೆ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಜೂನ್ 27ರೊಳಗೆ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ಜೂನ್ 28ರಿಂದ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಎದುರುನಿಂದ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ, “ವಿದ್ಯಾರ್ಥಿಗಳ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media

Donate Janashakthi Media

Leave a Reply

Your email address will not be published. Required fields are marked *