ಲೋಕಭವನ್ ಚಲೋ | ನರೇಗಾ ಹೆಸರು ಬದಲಾವಣೆ – ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ವಿಬಿ ಜಿ ರಾಮ್ ಜೀ ಯೋಜನೆ  ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಗರದ ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಸಚಿವರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ‌.

ಇದನ್ನೂ ಓದಿ : ಬೆಂಗಳೂರು | ಗ್ಯಾರಂಟಿ ಯೋಜನೆಗಳಿಗೆ ₹1.13 ಲಕ್ಷ ಕೋಟಿ ವೆಚ್ಚ: ರಾಜ್ಯಪಾಲ

ಮನರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮನೂ ಸಹ ಇದರಲ್ಲಿ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದರು.

RSS ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನ ಬಿಜೆಪಿಯವರು ರದ್ದು ಮಾಡಿದ್ದಾರೆ ಎಂದು ಆರೋಪಿಸಿದ ಸಿಎಂ, ಆರ್​​​​​ಎಸ್​​​ಎಸ್​​​​ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ ಸಿದ್ಧಾಂತವಾಗಿದೆ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ಹೊರ ಹಾಕಿದರು.

ಗಾಂಧೀಜಿಯನ್ನು ಗೋಡ್ಸೆ ಅಲ್ಲ, ಬಿಜೆಪಿ ಹಾಗೂ ಎನ್‌ಡಿಎ ಅವರು ಸೇರಿ ಕೊಲ್ಲುತ್ತಿರುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.ಮನರೇಗಾ ಮರುಜಾರಿ ಮಾಡುವವರೆಗೂ ಹೋರಾಟ ಬಿಡಲ್ಲ ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಫ್ರೀಡಂಪಾರ್ಕ್‌ನಿಂದ ರಾಜಭವನದವರೆಗೆ “ರಾಜಭವನ ಚಲೋ – ಮನರೇಗಾ ಬಚಾವೋ ಸಂಗ್ರಾಮ” ಬೃಹತ್ ಪ್ರತಿಭಟನೆ ವೇಳೆ ಡಿಸಿಎಂ ಮಾತನಾಡಿದರು.

ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ ಅಡಿ ಕೂಲಿ ಕೆಲಸ ಕೊಟ್ಟಿದ್ದು ಮನಮೋಹನ್‌ ಸಿಂಗ್‌ ಅವರ ಸರ್ಕಾರ. 2013ರಲ್ಲಿ ಮನರೇಗಾ ಒಂದು ಉತ್ತಮವಾದ ಯೋಜನೆ ಎಂದು ವಿಶ್ವಬ್ಯಾಂಕ್‌ ಪ್ರಮಾಣಪತ್ರವನ್ನು ಕೊಟ್ಟಿತ್ತು ಎಂದರು.

ಇಂದು ಬಿಜೆಪಿಯವರು ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಹಕ್ಕು ಇಲ್ಲ. ಕಚೇರಿಗಳಲ್ಲಿ ಗಾಂಧಿ ಫೋಟೋ ಇಟ್ಟುಕೊಳ್ಳಲು ಆಗುವುದಿಲ್ಲ. ಗಾಂಧೀಜಿಯನ್ನು ಗೋಡ್ಸೇ ಅಲ್ಲ, ಬಿಜೆಪಿ ಹಾಗೂ ಎನ್‌ಡಿಎ ಅವರು ಸೇರಿ ಕೊಲ್ಲುತ್ತಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಗಾಂಧೀಜಿ ಅವರನ್ನು ಕೊಲ್ಲಲು ಸಾಧ್ಯವಿಲ್ಲ. ಮನರೇಗಾ ಹಳ್ಳಿಗಳ ಉದ್ಧಾರದ ಯೋಜನೆ. ಗಾಂಧೀಜಿಯವರನ್ನು ನೀವು ದ್ವೇಷದಿಂದ ಕಾಣುತ್ತಿದ್ದೀರಿ. ಅದಕ್ಕೆ ನಮಗೆ ನಿಮ್ಮ ಕಾಯ್ದೆ ಬೇಡವಾಗಿದೆ ಎಂದು ಗುಡುಗಿದರು.

ಮನರೇಗಾ ಮರು ಜಾರಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮ್ಮನ್ನು ಜೈಲಿಗೆ ಹಾಕಿದ್ರೂ ನಾವು ಹೆದರುವುದಿಲ್ಲ. ಗಾಂಧೀಜಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ ಹಾಗೂ ಹಳ್ಳಿಗೊಂದು ಪಂಚಾಯಿತಿ ಇರಬೇಕು ಎಂಬುದು ಗಾಂಧೀಜಿಯವರ ಸಂಕಲ್ಪವಾಗಿತ್ತು. ಮನರೇಗಾ ಮರುಜಾರಿಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ, ರಾಜ್ಯಪಾಲರವರೆಗೆ ನಿಯೋಗ ಹೋಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ 5 ಕಿ.ಮೀ ಪಾದಯಾತ್ರೆ ಮಾಡುತ್ತೇವೆ. ಇದರಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಸಂಸದರು ಭಾಗವಹಿಸುತ್ತಾರೆ. ಎಲ್ಲರೂ ಸೇರಿಕೊಂಡು ಗಾಂಧೀಜಿ ಅವರ ಹೆಸರನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಡಿಕೆಶಿಯವರು ಕರೆ ನೀಡಿದರು.

ವಿಬಿ-ರಾಮ್-ಜಿ ಯೋಜನೆ ರದ್ದು ಹಾಗೂ ನರೇಗಾ ಮರು ಜಾರಿ ಮಾಡಬೇಕು ಎಂದು ಅಗ್ರಹಿಸಿ ಕೆಪಿಸಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಸಚಿವರಾದ ಚೆಲುವರಾಯ ಸ್ವಾಮಿ, ಕೆಜೆ ಜಾರ್ಜ್, ಮಹದೇವಪ್ಪ, ದಿನೇಶ್ ಗೂಂಡುರಾವ್, ಶರಣ ಪ್ರಕಾಶ್ ಪಾಟೀಲ್, ಎನ್ ಎಸ್ ಬೋಸರಾಜು, ಶಿವರಾಜ್ ತಂಗಡಗೆ, ಕೆ ಹೆಚ್ ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ಕೆ ಜೆ ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಬಿ ವಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ನೋಡಿ : ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir

Donate Janashakthi Media

Leave a Reply

Your email address will not be published. Required fields are marked *