ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಮಾ. 2ರಂದು ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ

ಶಿವಮೊಗ್ಗ: ಸಿಗಂದೂರು ಸೇತುವೆ ಪ್ರವೇಶದ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮವನ್ನು ಮಾರ್ಚ್‌ 2ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಸಾಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದರು. ಶರಾವತಿ

ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಅರಣ್ಯಭೂಮಿ ಸಾಗುವಳಿದಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಹಕ್ಕೊತ್ತಾಯದ ಹೋರಾಟ ಇದಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆನಾಡು ರೈತರ ಭೂಹಕ್ಕು ಸಮಸ್ಯೆ ನಿವಾರಣೆ ಮಾಡುವಲ್ಲಿ ಮಾಡಿದ ಸಾಧನೆ ಶೂನ್ಯ. ಮಲೆನಾಡಿನ 65 ವಿಧಾನಸಭಾ ಕ್ಷೇತ್ರದ ಶಾಸಕರು, ಸಚಿವರು ಕಣ್ಣಿದ್ದೂ ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ, ಬಾಯಿದ್ದು ಮೂಖರಾಗಿ ಹೋಗಿದ್ದಾರೆ. ಮಲೆನಾಡಿನ ಜ್ವಲಂತ ಭೂಸಮಸ್ಯೆ ಬಗೆಹರಿಸುವಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಸಕ್ತಿ ಇಲ್ಲ.

ಇದನ್ನೂ ಓದಿ: ಎಸ್‌ಐಆರ್‌ ತನಿಖೆ ಮೇಲ್ವಿಚಾರಣೆಗೆ ನ್ಯಾಯಾಧೀಶರನ್ನು ನೇಮಿಸಿದ ಸುಪ್ರೀಂಕೋರ್ಟ್‌

ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 3 ಲಕ್ಷ ಅರಣ್ಯಹಕ್ಕು ಅರ್ಜಿ ವಜಾ ಮಾಡಿದ್ದರೇ, ಸಿದ್ದರಾಮಯ್ಯ ಸಹ ಅದೇ ದಾರಿ ತುಳಿದಿದ್ದಾರೆ.. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಶಿವಮೊಗ್ಗ ಗ್ರಾಮಾಂತರ, ಸಾಗರ ಕ್ಷೇತ್ರದ ಶಾಸಕರಾಗಲೀ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಕುರಿತು ಮದನ್ ಗೋಪಾಲ್ ಶಿಫಾರಸ್ಸು ಮಾಡಿದ ವರದಿ ಅನುಷ್ಟಾನಕ್ಕೆ ತರಬೇಕು. ಶರಾವತಿ ಸಂತ್ರಸ್ತರ ಮಾದರಿಯಲ್ಲಿ ತುಂಗಾ, ಭದ್ರಾ, ಅಂಬ್ಲಿಗೊಳ, ಚಕ್ರ, ವರಾಹಿ, ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕು. ಸಾಗರ ಹೊಸನಗರ ಕ್ಷೇತ್ರದಲ್ಲಿ ಉಯೋಗಿಸಿಕೊಳ್ಳದೆ ಹಾಗೆ ಉಳಿಸಿಕೊಂಡಿರುವ ಕೆಪಿಸಿ ಭೂಮಿಯನ್ನು ರೈತರಿಗೆ ವಾಪಾಸ್ ಕೊಡಬೇಕು ಎಂದರು.

ರಾಜ್ಯದಲ್ಲಿ ಅರಣ್ಯಹಕ್ಕು ಕಾಯ್ದೆಯನ್ನು ಜಾರಿಗೆ ತರಬೇಕು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರಣ್ಯ ಸ್ವರೂಪ ಇಲ್ಲದ ಗ್ರಾಮ, ಹಕ್ಕುಪತ್ರ ಪಡೆದಿರುವ ಜಮೀನು, ಬಗರ್‌ಹುಕುಂ ಇನ್ನಿತರೆ ಕೈಬಿಡಬೇಕು. ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇರಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆ ಪಕ್ಷಾತೀತವಾಗಿದ್ದು ಇದನ್ನು ಮುಂದಿಟ್ಟು ಕೊಂಡು ಕಾಂಗ್ರೇಸ್ ಮತ್ತು ಬಿಜೆಪಿ ರಾಜಕೀಯ ಮಾಡುವುದು ಬೇಡ. ಮಲೆನಾಡು ರೈತರ ಸಮಸ್ಯೆ ಬಗೆಹರಿಸಲು ನಿರಂತರ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಈ ವೇಳೆ ಅಶೋಕ ಬೇಸೂರು, ಹೆಬ್ಸೆ ನಾಗರಾಜ, ಅಶೋಕ್ ಕೋಡಸರ, ಮಂಜಪ್ಪ ಆರನಕೆರೆ, ದಯಾನಂದ ಹಾಜರಿದ್ದರು.

ಇದನ್ನೂ ನೋಡಿ: ಪಿಚ್ಚರ್ ಪಯಣ – 166 | ಸಿನೆಮಾ: ‘ನಮ್ಮ ಸಾಲಿ, ನಿರ್ದೇಶನ – ಅನಿಲ್ ರೇವೂರ ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *