ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸರ್ಕಾರದ ಮೇಲಿನ ಭ್ರಷ್ಟಾಚಾರದಲ್ಲಿ ಆರೋಪಗಳ ವಿರುದ್ಧ ಭಾರತೀಯ ಜನತಾ ಪಕ್ಷ ಇಂದು(ಸೆಪ್ಟಂಬರ್ 13) ಪ್ರತಿಭಟನಾ ಜಾಥಾ ನಡೆಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಬಂಗಾಳದ ಹಲವು ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ಮುಂದಾಗಿದ ಸಮಯದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ.
ಕೋಲ್ಕತ್ತಾದ ರಾಜ್ಯ ಕಾರ್ಯಾಲಯ ʻನಬನ್ನಾʼ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಬ್ಯಾರಿಕೇಡ್ ಹಾಕಲಾಗಿದೆ. ಇದೇ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.
ಸುವೇಂದು ಅಧಿಕಾರಿ ಸಂತ್ರಗಚಿ ಪ್ರದೇಶದಿಂದ ಮೆರವಣಿಗೆಯನ್ನು ಮುನ್ನಡೆಸಿದ್ದು, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಉತ್ತರ ಕೋಲ್ಕತ್ತಾದಿಂದ ಪ್ರತಿಭಟನೆಯನ್ನು ಮುನ್ನಡೆಸಿದ್ದಾರೆ.
ರಾಜ್ಯ ಕಾರ್ಯಾಲಯದ ಸಮೀಪದ ಸೆಕೆಂಡ್ ಹೂಗ್ಲಿ ಬ್ರಿಡ್ಜ್ ಬಳಿ ಸುವೇಂದು ಅಧಿಕಾರಿ, ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ, ಮುಖಂಡ ರಾಹುಲ್ ಸಿನ್ಹಾ ಸೇರಿದಂತೆ ಪಕ್ಷದ ಇತರೆ ನಾಯಕರನ್ನು ಅಡ್ಡಗಟ್ಟಿದ ಪೊಲೀಸರು, ವಶಕ್ಕೆ ಪಡೆದು ಕಾರಾಗೃಹ ವಾಹನವೊಂದರಲ್ಲಿ ಕರೆದೊಯ್ದರು.
ಕೇಂದ್ರ ಕೋಲ್ಕತಾದ ಬುರ್ರಾಬಜಾರ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಪೊಲೀಸ್ ಠಾಣೆ ಸಮೀಪದಲ್ಲಿ ಪೊಲೀಸ್ ಕಾರಿಗೆ ಬೆಂಕಿ ಹಚ್ಚಲಾಗಿದೆ. ಕೆಲವು ವ್ಯಕ್ತಿಗಳು ಕಲ್ಲುಗಳನ್ನು ಎಸೆಯುವುದು ಮತ್ತು ದೊಣ್ಣೆಗಳೊಂದಿಗೆ ಓಡಾಡುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಅಗ್ನಿಶಾಮಕದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಅತ್ಯಂತ ಜನನಿಬಿಡ ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಒಂದಾದ ಬುರ್ರಾಬಜಾರ್‌ನಲ್ಲಿ ಮಧ್ಯಾಹ್ನದ ವೇಳೆಗೆ ಬಹುತೇಕ ಎಲ್ಲ ಅಂಗಡಿಗಳನ್ನೂ ಮುಚ್ಚಲಾಗಿದೆ.
ಪೂರ್ವ ಮಿಡ್ನಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಇಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಟಿಎಂಸಿ ನಾಯಕರೂ ಆಗಮಿಸಿದ್ದರಿಂದ ಮಾತಿನ ಚಕಮಕಿ ನಡೆದಿದೆ.
‘ನಬನ್ನಾ’ ಬಳಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ಬಿಜೆಪಿ ಬೆಂಬಲಿಗರು ಭಾಗವಹಿಸಲು ಅನುಕೂಲವಾಗಲು ಉತ್ತರ ಬಂಗಾಳದಿಂದ ಮೂರು ಮತ್ತು ದಕ್ಷಿಣ ಬಂಗಾಳದಿಂದ ನಾಲ್ಕು ರೈಲುಗಳ ವ್ಯವಸ್ಥೆ ಮಾಡಿತ್ತು. ಬಿಜೆಪಿ ಕಾರ್ಯಕರ್ತರನ್ನು ಕೋಲ್ಕತಾಗೆ ಕರೆದೊಯ್ಯುತ್ತಿದ್ದ ಬಸ್‌ಗಳನ್ನು ಕೂಡ ಉತ್ತರ 24 ಪರಗಣಾಸ್‌ನಲ್ಲಿ ಪೊಲೀಸರು ತಡೆದಿದ್ದಾರೆ.
ಬಿಜೆಪಿಯ ಜಾಥಾದಲ್ಲಿ ಪಾಲ್ಗೊಳ್ಳಲು ನೂರಾರು ಕಾರ್ಯಕರ್ತರು ರೈಲಿನಲ್ಲಿ ಆಗಮಿಸುತ್ತಿದ್ದು, ಪೊಲೀಸರು ಅವರನ್ನು ರೈಲ್ವೆ ನಿಲ್ದಾಣದಲ್ಲಿಯೇ ಬ್ಯಾರಿಕೇಡ್ ಹಾಕಿ ತಡೆ ಹಿಡಿಯುತ್ತಿದ್ದರು ಎಂದು ವರದಿಯಾಗಿದೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಬಂಧಿಸುತ್ತಿಸುತ್ತಿದ್ದರು. ಪನಾಗಢ್ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಕೋಲ್ಕತ್ತಾದ ರಾಣಿಗಂಜ್ ರೈಲ್ವೆ ನಿಲ್ದಾಣದಲ್ಲಿ ನಡೆಯಲಿರುವ ಬಿಜೆಪಿ ಪ್ರತಿಭಟನಾ ಜಾಥಾಕ್ಕೆ ಪಾಲ್ಗೊಳ್ಳಲು ಆಗಮಿಸುವ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ದುರ್ಗಾಪುರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಲಾಗಿದೆ. ನಾನು ಕೂಡಾ ದುರ್ಗಾಪುರದತ್ತ ತೆರಳುತ್ತಿದ್ದು, ಅವರನ್ನು ಬದಲಿ ಮಾರ್ಗದಲ್ಲಿ ಕರೆತರುವುದಾಗಿ ಬಿಜೆಪಿ ಮುಖಂಡ ಅಭಿಜಿತ್ ದತ್ತ ತಿಳಿಸಿದ್ದಾರೆ.