ಭದ್ರತಾ ಲೋಪ ಸಂಬಂಧಿಸಿ ಚರ್ಚೆ ನಡೆಸುವಂತೆ ಪ್ರತಿಭಟನೆ | 15 ಸಂಸದರು ಅಮಾನತು!

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿ ಚರ್ಚೆ ನಡೆಸುವಂತೆ ಸಂಸತ್ತಿನೊಳಗೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣಕ್ಕೆ, ಅಶಿಸ್ತಿನ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಸಿಪಿಐ(ಎಂ)ನ ಇಬ್ಬರು ಸಂಸದರು ಸೇರಿದಂತೆ ಒಟ್ಟು 14 ಲೋಕಸಭೆ ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಪ್ರತಿಭಟನೆಯಿಂದಾಗಿ ಗುರುವಾರದ ನಡೆದ ಉಭಯ ಸದನಗಳು ಪುನರಾವರ್ತಿತವಾಗಿ ಮುಂದೂಡಲ್ಪಟ್ಟವು.

ಮಾಣಿಕಂ ಠಾಗೋರ್, ಕನಿಮೋಳಿ, ಪಿ.ಆರ್. ನಟರಾಜನ್, ವಿ. ಕೆ. ಶ್ರೀಕಾಂತಂ, ಬೇನಿ ಬಹನ್, ಕೆ. ಸುಬ್ರಹ್ಮಣ್ಯಂ, ಎಸ್‌. ಆರ್. ಪ್ರತಿಬನ್, ಎಸ್. ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಲೋಕಸಭೆಯಿಂದ ಅಮಾನತುಗೊಂಡ ಸಂಸದರಲ್ಲಿ ಸೇರಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ರಾಜ್ಯಸಭೆಯಿಂದ ಅಮಾನತುಗೊಂಡ ಏಕೈಕ ಸಂಸದರಾಗಿದ್ದಾರೆ.

ಇದನ್ನೂ ಓದಿ: ಸಂಸತ್ ಭದ್ರತಾ ಲೋಪ | ಯಾರು ಈ 6 ಆರೋಪಿಗಳು?

ಅಮಾನತುಗೊಂಡಿರುವ 15 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್‌ ಪಕ್ಷದವರಾಗಿದ್ದು, ಇಬ್ಬರು ಸಿಪಿಎಂ, ಇಬ್ಬರು ಡಿಎಂಕೆ ಮತ್ತು ತಲಾ ಒಬ್ಬರು ಸಿಪಿಐ ಮತ್ತು ಟಿಎಂಸಿಯವರಾಗಿದ್ದಾರೆ. ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನೊಳಗೆ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಈ ಅಮಾನತು ಪ್ರಕ್ರಿಯೆ ನಡೆದಿದೆ.

ಡಿಸೆಂಬರ್ 22 ರಂದು ಮುಕ್ತಾಯಗೊಳ್ಳಲಿರುವ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಐವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆ ಗುರುವಾರ ಅಂಗೀಕರಿಸಿತು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಐವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು. ಟಿ. ಎನ್. ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರಿಕೊಸ್ ಅಮಾನತುಗೊಂಡ ಸಂಸದರಾಗಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಇಬ್ಬರು ವ್ಯಕ್ತಿಗಳು ಹಾರಿ, ಬಣ್ಣ ಸೂಸುವ ಬಾಂಬ್ ಎಸೆದು ಭದ್ರತಾ ಲೋಪ ಘಟನೆ ಬಗ್ಗೆ ಚರ್ಚೆ ಮಾಡುವಂತೆ ಈ ಸಂಸದರು ಒತ್ತಾಯಿಸಿದ್ದರು.

ವಿಡಿಯೊ ನೋಡಿ: ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು! ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದ ಆರೋಪ #ParliamentAttack

Donate Janashakthi Media

Leave a Reply

Your email address will not be published. Required fields are marked *