ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಕಲಬುರ್ಗಿ : ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯ ವಿರೋಧಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ಬಹಿರ್ದೆಸೆಗೆಂದು ಹೋದ ಹೊತ್ತಿನಲ್ಲಿ ಕಾಮುಕ ಪುಂಡರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಬರ್ಬರಿವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಕಾರರು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಡಾ. ಬಾಳಿ ಮೀನಾಕ್ಷಿ ಮಾತನಾಡಿ, ಈಗಾಗಲೇ ಪೋಲಿಸ್ ಇಲಾಖೆ ಅತ್ಯಾಚಾರಗೈಯ್ದ ಬಾಲಕನನ್ನು ಬಂಧಿಸಿದ್ದು ಮಾಧ್ಯಮಗಳ ಮ‌ೂಲಕ ತಿಳಿದು ಬಂದಿದೆ. ಇಂದೊಂದು ತೀರ ಆಘಾತಕಾರಿ ಘಟನೆಯಾಗಿದೆ. ಮಹಿಳೆ ಮತ್ತು ಮಕ್ಕಳು ಎಲ್ಲೆಲ್ಲೊ ಸುರಕ್ಷಿತವಾಗಿಲ್ಲ‌ ಎಂಬುದನ್ನು ಎತ್ತಿ ತೋರಿಸುತ್ತದೆ. ಅಪ್ರಾಪ್ತ ವಯಸ್ಕ ಹೆಣ್ಣುಮಗುವಿನ ಮೇಲೆ ಅಪ್ರಾಪ್ತ ಹುಡುಗರಿಂದ ಅತ್ಯಾಚಾರಗಳು ಘಟಿಸುತ್ತಿರುವುದು ಇತ್ತೀಚಿಗೆ ಹೆಚ್ಚಾಗುತ್ತಿರುವುದು ಭಯಾನಕವಾಗಿದೆ. ಸಮಾಜ ಸ್ವಾಸ್ಥ್ಯವು ಸಂಪೂರ್ಣ ಹಾಳಾಗಿರುವ ವಿಕೃತ ಸ್ಥಿತಿಯನ್ನು ಇದು ಎತ್ತಿ ತೋರಿಸುತ್ತದೆ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ಮೊಬೈಲ್ ಗಳಲ್ಲಿ ಅಶ್ಲೀಲ ಚಿತ್ರಗಳ ವಿಕ್ಷಣೆಯೇ ಮಕ್ಕಳ ಈ ವಿಕೃತಿಗೆ ಕಾರಣವಾಗಿದೆ ಎಂಬುದು ಸ್ಪಚ್ಟವಾಗುತ್ತಿದೆ. ಈ ಕುರಿತು ಸಮೀಕ್ಷೆ ಮಾಡಬೇಕು‌. ಮೊಬೈಲ್ ನಲ್ಲಿ ಲೋಡ್ ಆಗುತ್ತಿರುವ ಅಶ್ಲೀಲ ವೀಡಿಯೋಗಳ ಮೇಲೆ ನಿಗಾವಣೆ ವಹಿಸಬೇಕೆಂದು ಆಗ್ರಹಿಸಿದರು.

ದೌರ್ಜನ್ಯ ವಿರೋಧಿ ವೇದಿಕೆ ಮುಖಂಡರಾ ಕೆ.ನೀಲಾ ಮಾತನಾಡುತ್ತಾ, ಹೆಣ್ಣುಮಕ್ಕಳು ಬಹಿರ್ದೆಸೆಗೆಂದು ಹೋದಾಗಲೇ ಇಂಥ ಅವಘಡಗಳು ಘಟಿಸುತ್ತಿರುವುದು ಕಂಡು ಬರುತ್ತಿದೆ. ಎಲ್ಲ ಕಡೆಯೂ ಶೌಚಾಲಯಗಳು ನಿರ್ಮಾಣವಾಗಿಲ್ಲ. ಒಂದೆಡೆ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಮಾಡುವ ಸೋಗು ಹಾಕುತ್ತಿದೆ. ಆದರೆ ಇವತ್ತಿಗೂ ಗ್ರಾಮಗಳಲ್ಲಿ ಕುಟುಂಬಕ್ಕೊಂದು ಶೌಚಾಲಯಗಳು ಇಲ್ಲ. ಸಾರ್ವಜನಿಕ ಶೌಚಾಲಯಗಳಂತೂ ನಗರಗಳಲ್ಲಿಯೇ ಇಲ್ಲ‌. ಶೌಚಾಲಯಗಳ ಕುರಿತು ಸುಳ್ಳು ಅಂಕಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಮಹಿಳೆಯರ ವಿಷಯದಲ್ಲಿ ಆಡಳಿತಾರೂಢ ಸರ್ಕಾರ ಅದೆಷ್ಟು ಅಸೂಕ್ಷ್ಮವಾಗಿದೆ ಎಂದರೆ ತನ್ನದೆ ಪಕ್ಷದ ಕಾರ್ಯಕರ್ತರು ಅತ್ಯಾಚಾರಗಳಲ್ಲಿ ಶಾಮೀಲಾಗಿದ್ದನ್ನು ಕಂಡೂ ಕಾಣದಂತೆ ಜಾಣಕುರುಡು ತೋರಿಸುತ್ತದೆ. ಅತ್ಯಾಚಾರಗಳನ್ನು ಎಸಗಿಯೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಬಹುದು ಎಂಬ ಧೋರಣೆ ದೇಶವ್ಯಾಪಿ ಪಸರಿಸಿದೆ. ಬಿಲ್ಕಿಸ್ ಬಾನುವಿನ ಪ್ರಕರಣವೇ ಇದಕ್ಕೆ ಜ್ವಲಂತ ನಿದರ್ಶನವಾಗಿದೆ‌. ಸರ್ಕಾರದ ಈ ಮಹಿಳಾ ವಿರೋಧಿ ನಡೆಯನ್ನು ವೇದಿಕೆ ಖಂಡಿಸುತ್ತದೆ ಎಂದರು.

ಈ ಹೋರಾಟದಲ್ಲಿ ಚಂದಮ್ಮ ಗೋಳಾ ಬಿ. ಪದ್ಮಿನಿ ಕಿರಣಗಿ. ಪದ್ಮಾ ಪಾಟೀಲ. ಶಹನಾಜ್. ನಾಗೇಶ್. ಸಂಜೀವ ಕುಮಾರ್. ಬೀರಲಿಂಗ. ದಿಲ್ಶಾದ್. ಸುಜಾತಾ ಇನ್ನಿತರ ಇದ್ದರು.

ವರದಿ : ಪ್ರಿಯಾಂಕಾ ಮಾವಿನಕರ್

Donate Janashakthi Media

Leave a Reply

Your email address will not be published. Required fields are marked *