ಈ ಹಳ್ಳಿಯಲ್ಲಿ ಇನ್ನೂ ಜೀವಂತವಾಗಿದೆ ಜೀತಪದ್ಧತಿ..! 30ಕ್ಕೂ‌ ಹೆಚ್ಚು ಕೂಲಿ ಕಾರ್ಮಿಕರ ರಕ್ಷಣೆ

ತುಮಕೂರು: ಜೀತ ಪದ್ದತಿ ‌ಜಿಲ್ಲೆಯಲ್ಲಿ ಇನ್ನೂ‌ ಜೀವಂತವಾಗಿದ್ದು, ಶುಂಠಿ ಕ್ಯಾಂಪ್ ಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದ 30ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಕೆಲವು ಪ್ರಭಾವಿ ವ್ಯಕ್ತಿಗಳು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮ, ಮಂಜುನಾಥ ಪುರ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರಿಂದ ನೂರಾರು ಎಕರೆ ಭೂಮಿಯನ್ನ ಗುತ್ತಿಗೆ ಆಧಾರದಲ್ಲಿ‌ ಬಾಡಿಗೆ ಪಡೆದು ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದಾರೆ.‌ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಬಡ ಕೂಲಿ‌ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ಓಟರ್ ಐಡಿ, ಮೊಬೈಲ್‌ ಇನ್ನಿತರೆ ವಸ್ತುಗಳನ್ನ ಕಿತ್ತುಕೊಂಡು ಹೆದರಿಸಿ ಶುಂಠಿ ಕ್ಯಾಂಪ್ (ಶೆಡ್)ನಲ್ಲಿರಿಸಿದ್ದಾರೆ ಎನ್ನಲಾಗಿದೆ. ಕಾರ್ಮಿಕರ ಕಾವಲಿಗೆ ಗೂಂಡಾಗಳನ್ನು ನೇಮಿಸಿ ಜೀತದಾಳುಗಳ‌ಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ| ರಸ್ತೆ ಬದಿಯಿಂದ ಹೋಟೆಲ್‌ಗೆ ನುಗ್ಗಿದ ಟಿಪ್ಪರ್‌ ಲಾರಿ; ಇಬ್ಬರು ಮೃತ

ಕಾರ್ಮಿಕರು ದಿನವಿಡೀ ನಿರಂತರವಾಗಿ ಹೊಲದಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಕೆಲಸ ಮಾಡದಿದ್ದರೆ ಕಾವಲುಗಾರರು ದೊಣ್ಣೆಗಳಿಂದ ಮೈ ಬರೆ ಬರುವ ಹಾಗೆ ಹೊಡೆದು ದೌರ್ಜನ್ಯ ಮಾಡುತ್ತಾರೆ ಎಂದು ಕಾರ್ಮಿಕರು ಅಳಲು ‌ತೋಡಿಕೊಂಡಿದ್ದಾರೆ.

ಇದುವೆರೆಗೂ ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಶುಂಠಿ ಕ್ಯಾಂಪ್ ಗಳಲ್ಲಿಟ್ಟು ಬೇರೆ ಬೇರೆ ಕಡೆ ದುಡಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇದೇ ರೀತಿ ದುಡಿಸಿಕೊಳ್ಳುತ್ತಿದ್ದು, ಇದುವರೆಗೂ ಒಂದು ರೂ. ಕೂಲಿಯನ್ನು ನೀಡಿಲ್ಲ, ಸಂಜೆ ಯಾದರೆ ಮದ್ಯ ನೀಡುತ್ತಾರೆ, ಕೂಲಿ ಕೇಳಿದರೆ ಹೊಡೆಯುತ್ತಾರೆ ಎಂದು ಕಾರ್ಮಿಕರು ಗದ್ಗದಿತರಾದರು.

ಸ್ಥಳೀಯರ ನೆರವಿನಿಂದ ಹೊನ್ನವಳ್ಳಿ ಪೋಲೀಸರು ಬುಧವಾರ ರಾತ್ರಿ ಶುಂಠಿ ಕ್ಯಾಂಪ್ ಗಳಲ್ಲಿದ್ದ 30 ಜನ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರನ್ನ ಸದ್ಯ ಹೊನ್ನವಳ್ಳಿ ಸಮುದಾಯ ಭವನದಲ್ಲಿರಿಸಲಾಗಿದೆ. ಸ್ಥಳಕ್ಕೆ ತಿಪಟೂರು ತಹಸಿಲ್ದಾರ್ ಹಾಗೂ ಕಾರ್ಮಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಭವ್ಯಾ ನರಸಿಂಹ ಮೂರ್ತಿ – ಕಾಂಗ್ರೆಸ್ ಯುವ ನಾಯಕರುJanashakthi Media

Donate Janashakthi Media

Leave a Reply

Your email address will not be published. Required fields are marked *