`ಪೊಸಿಶನ್ ಪೇಪರ್’ಗಳು: ಮುಂಬರುವ ಪಠ್ಯಗಳ ಟ್ರೈಲರ್ – ಪುಷ್ಪಕ ವಿಮಾನ, ಅಪಾಯಕಾರಿ ಮೊಟ್ಟೆ, ಹಿಂದೂಗಳ ಹತ್ಯಾಕಾಂಡ

ಪ್ರೊ. ರಾಜೇಂದ್ರ ಚೆನ್ನಿ

ಇತ್ತೀಚೆಗೆ ಹೊಸ National Curriculum Framework (NCF) ರಚನೆಗೆ ಸಂಬಂಧಿಸಿದ ಹಾಗೆ ಕರ್ನಾಟಕ ಸರಕಾರವು ವಿವಿಧ ಅಂಶಗಳ ಬಗ್ಗೆ Position Papers ಗಳನ್ನು NCERTಗೆ ಕಳಿಸಿದೆ. .. ..ಈ ಪೇಪರ್ಗಳಲ್ಲಿ ಈಗಾಗಲೇ ವಿವಾದಕ್ಕೆ ಗುರಿಯಾದ ಅಂಶಗಳಲ್ಲದೆ ಏನೂ ಹೊಸದಿಲ್ಲ. ಅದೇ ಸಾವರ್ಕರ್, ಗೊಳ್ವಲ್ಕರ್ ಪ್ರೇರಿತ ವಿಚಾರಗಳೇ ಇವೆ. ಪಶ್ಚಿಮದ ವಿಜ್ಞಾನವು ಫೇಕ್ ನ್ಯೂಸ್ಗಳಿಂದ ಕೂಡಿದೆ. ಈ ವಿಜ್ಞಾನದ ಅನೇಕ ಆವಿಷ್ಕಾರಗಳು ಸಿದ್ಧಾಂತಗಳು ಸಾವಿರಾರು ವರ್ಷ ಮೊದಲೇ ಭಾರತದಲ್ಲಿದ್ದವು. ಇದನ್ನು ನಮ್ಮ ಶಿಕ್ಷಣದಲ್ಲಿ ಹೇಳಿಕೊಡಬೇಕು. ಅದೇ ಹಳೆಯ ಪುಷ್ಪಕ ವಿಮಾನ, ಗಣಪತಿಯ ಪ್ಲಾಸ್ಟಿಕ್ ಸರ್ಜರಿ ಮಾದರಿಯ ವಾದಗಳಿವು. ..ಒಂದು ಪೇಪರ್ ನಲ್ಲಿ ಮಾಂಸಾಹಾರವು ದೇಹದ ಸಮತೋಲನವನ್ನು ಕೆಡಿಸುತ್ತದೆ. ಮೊಟ್ಟೆ ತಿನ್ನುವುದು ಅಪಾಯಕಾರಿ, ಇತ್ಯಾದಿ ಸಲಹೆಗಳನ್ನು ನೀಡಿದೆ. ಈ ಸಲಹೆ ನೀಡಿದ ಸಮಿತಿಯ ಅಧ್ಯಕ್ಷರು ಪ್ರತಿಷ್ಠಿತ NIMHANS ಸಂಸ್ಥೆಯ ಪ್ರಾಧ್ಯಾಪಕರು… ..ಇನ್ನೊಂದು ಪೇಪರ್ ಪ್ರಕಾರ ನಾವು ಇತಿಹಾಸದಲ್ಲಾದ ಅನ್ಯಾಯಗಳನ್ನು ಎದುರಿಸಬೇಕು, ಅರ್ಥಮಾಡಿಕೊಳ್ಳಬೇಕು. ಆ ಸತ್ಯಗಳಿಂದ ಓಡಿಹೋಗಬಾರದು. ಸೂಕ್ತವಾದ ಸಲಹೆ. ಆದರೆ ಸಮಿತಿಯು ನೀಡುವ ಉದಾಹರಣೆಯೆಂದರೆ ಹಿಂದೂಗಳ ಹತ್ಯಾಕಾಂಡಗಳನ್ನು ಪಠ್ಯಗಳಲ್ಲಿ ಸೇರಿಸಬೇಕು. ಗುಜರಾತಿನಲ್ಲಿ ನಡೆದ ಮುಸ್ಲಿಮ್ ಹತ್ಯಾಕಾಂಡವನ್ನಲ್ಲ. ಪ್ರತಿನಿತ್ಯ ನಡೆಯುವ ದಲಿತರ ಹತ್ಯೆಯನ್ನಲ್ಲ.

*****

ಇತ್ತೀಚೆಗೆ ಹೊಸ National Curriculum Framework (NCF) ರಚನೆಗೆ ಸಂಬಂಧಿಸಿದ ಹಾಗೆ ಕರ್ನಾಟಕ ಸರಕಾರವು ವಿವಿಧ ಅಂಶಗಳ ಬಗ್ಗೆ Position Papers ಗಳನ್ನು NCERTಗೆ ಕಳಿಸಿದೆ. Position Papers ಅಂದರೆ ಶಿಕ್ಷಣದ ಪಠ್ಯಕ್ರಮದ ರಚನೆಗೆ ಪೂರಕವಾಗುವಂತೆ ತಜ್ಞರ ಸಮಿತಿಗಳು ಒಂದು ಗಂಭೀರವಾದ ವರದಿಯನ್ನು ಸಲ್ಲಿಸುವ ಕ್ರಮ. ಅದು ಕೇವಲ ಅಭಿಪ್ರಾಯ ಸಂಗ್ರಹವಾಗಿರುವುದಿಲ್ಲ. ಗಂಭೀರ ಚಿಂತನೆಯ ಸುಸಂಗತ ಮಂಡನೆಯಾಗಿರುತ್ತದೆ. ಈ ಹಿಂದೆ ಈ ವರದಿಗಳು ಅಧ್ಯಯನಕ್ಕೆ ಲಾಯಕ್ಕಾದ ಬರಹಗಳಾಗಿರುತ್ತಿದ್ದವು. ಈಗ ಕರ್ನಾಟಕ ಸರಕಾರವು ವಿವಿಧ ಸಮಿತಿಗಳ ಮೂಲಕ ಸಿದ್ಧಪಡಿಸಿದ 27 ವರದಿಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿದೆ. ಈ ಕೆಲಸದ ಉಸ್ತುವಾರಿ ವಹಿಸಿದ್ದ ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀ ಮದನ್ ಗೋಪಾಲ್ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಮತ್ತು ಈಗಾಗಲೇ ಬಂದಿರುವ ಟೀಕೆ, ಆಕ್ಷೇಪಣೆಗಳಿಗೆ ತಾವೇ ಉತ್ತರಿಸಿದ್ದಾರೆ. ಅವರ ಪ್ರಕಾರ ಗಂಭೀರ ಚರ್ಚೆ, ಸಮಾಲೋಚನೆಯ ನಂತರ ಇವುಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಈ ಬಾರಿ ಅಧ್ಯಕ್ಷರಾಗಿದ್ದವರು ನಿಜವಾಗಿಯೂ I.I.T. Professor ಎಂದು ತಿಳಿಸಿದ್ದಾರೆ!

ಯೋಚನೆಗಳ ಶಕ್ತಿಯಿಂದ ನಡೆಯುವ `ಪುಷ್ಪಕ ವಿಮಾನ

ಸದ್ಯ ಕೋಚಿಂಗ್ ಕ್ಲಾಸ್ ಪ್ರೊಫೆಸರ್ ಅಲ್ಲವೆಂದು ಸಮಾಧಾನ ಪಟ್ಟುಕೊಂಡು ಇಂಟರ್ನೆಟ್ನಲ್ಲಿ ಅವರ ವೈಯಕ್ತಿಕ ವಿವರ ಹಾಗೂ ಪ್ರಕಟಣೆಗಳು ಮತ್ತು ವಿಡಿಯೋಗಳನ್ನು ನೋಡಿದೆ. ಅವರ ವಿಷಯವು ರಸಾಯನ ಶಾಸ್ತ್ರ. ಆ ಕ್ಷೇತ್ರದಲ್ಲಿ ಸಂಶೋಧನೆ ಇತ್ಯಾದಿಯನ್ನು ಮಾಡಿದ್ದಾರೆ. ಆದರೆ ಭಾರತದ ಅನೇಕ I.I.T. ಗಳಲ್ಲಿಯ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರಂತೆ ಅವರು ಬಲಪಂಥೀಯ ಚಿಂತನೆಗಳ ವಕ್ತಾರರಾಗಿದ್ದಾರೆ. Ideology ಯಲ್ಲಿ ಆಸಕ್ತರೂ ಆಗಿದ್ದಾರೆ. ನಾನು ನೋಡಿದ ಒಂದು ಚರ್ಚೆಯ ವಿಡಿಯೋನಲ್ಲಿ ವಿಜ್ಞಾನಿಗಳು, ಬುದ್ಧಿಜೀವಿಗಳು ಯಾಕೆ ಎಲ್ಲದಕ್ಕೂ ಮೋದಿಯವರನ್ನು ಟೀಕಿಸುತ್ತಾರೆ ಎಂದು ಚರ್ಚಿಸಿದ್ದಾರೆ. ಇನ್ನೊಂದು ಮಾತುಕತೆಯಲ್ಲಿ ಪ್ರಸಿದ್ಧ ಸಂಗೀತಕಾರ ಹಾಗೂ ಚಿಂತಕರಾದ ಟಿ.ಎಮ್. ಕೃಷ್ಣ ಅವರ “Sebastian and Sons: A Brief History of Mrdangam Makers” ಕೃತಿಯ ಬಗ್ಗೆ ಉಗ್ರವಾಗಿ ಟೀಕಿಸಿದ್ದಾರೆ. ಅವರು ಮತ್ತು ಚರ್ಚೆಯಲ್ಲಿದ್ದ ಇನ್ನೊಬ್ಬ ಬಲಪಂಥೀಯರ ಪ್ರಕಾರ ಟಿ.ಎಂ. ಕೃಷ್ಣ ಅವರು ಪವಿತ್ರವಾದ ಶ್ರೇಷ್ಠವಾದ ಕರ್ನಾಟಕ ಸಂಗೀತದ ಪರಂಪರೆಯನ್ನು ಅವಮಾನಿಸಿದ್ದಾರೆ. ಏಕೆಂದರೆ ಸಂಗೀತವು ಜಾತ್ಯಾತೀತ, ಕೃಷ್ಣ ಜಾತಿ ವ್ಯವಸ್ಥೆಯನ್ನು ಬಳಸಿಕೊಂಡು ಅದನ್ನು ಅಪವಿತ್ರಗೊಳಿಸಿದ್ದಾರೆ. ಹೀಗೆ ಚರ್ಚೆ ಸಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಿತ I.I.T. ಸಂಸ್ಥೆಗಳಲ್ಲಿ ಸಾಮಾಜಿಕ ರಾಜಕೀಯ ನಿಲುವುಗಳು ಬಲಪಂಥದ ಕಡೆಗೆ ವಾಲುತ್ತಿದೆ. ಪ್ರಸಿದ್ಧ ಅಮೇರಿಕನ್ ವಿದ್ವಾಂಸ ಶೆಲ್ಟನ್ ಪೋಲಾಕ್ ಬಿ.ಜೆ.ಪಿ.ಯ ರಾಜಕೀಯವನ್ನು ಟೀಕಿಸಿದ್ದಕ್ಕಾಗಿ 100ಕ್ಕಿಂತ ಹೆಚ್ಚು ಜನ ಅವರು ಸಂಪಾದನೆ ಮಾಡುತ್ತಿದ್ದ Moorthy Classics ಎನ್ನುವ ಯೋಜನೆಯಿಂದ ಅವರನ್ನು ಹೊರಹಾಕಬೇಕೆಂದು ಅಹವಾಲಿಗೆ ಸಹಿ ಮಾಡಿದರು. ಇದರಲ್ಲಿ ಬಹುಪಾಲು ಜನ ಐ.ಐ.ಟಿ.ಗಳ ಪ್ರಾಧ್ಯಾಪಕರು. ಇತ್ತೀಚೆಗೆ ಖರಗಪೂರ ಐ.ಐ.ಟಿ.ಯಿಂದ ಭಾರತೀಯ ಜ್ಞಾನಪರಂಪರೆಯ ಹೆಸರಿನಲ್ಲಿ ಅವೈಜ್ಞಾನಿಕ ಸಂಗತಿಗಳನ್ನು ಪ್ರಕಟಿಸಲಾಯಿತು. ಇದು ಭಾರತೀಯ ವಿಜ್ಞಾನಿಗಳಿಗೆ ಹೊಸದಲ್ಲ. ಅವರು ತಮ್ಮ ವಿಜ್ಞಾನ ವೃತ್ತಿಯನ್ನು ಸಾಮಾಜಿಕ ಸಾಂಪ್ರದಾಯಿಕತೆಯನ್ನು ವಿರುದ್ಧವಾಗಿ ನೋಡುವುದಿಲ್ಲ.

ಹೀಗಾಗಿ ಈ Position Paper ಗಳ ಸಮಿತಿಯ ಅಧ್ಯಕ್ಷನಾಗಿರುವ ವ್ಯಕ್ತಿಗೂ ನಾಗೇಶ್ ಅವರ ಐ.ಐ.ಟಿ. ಪ್ರೊಫೆಸರ್ಗೂ ಬಲಪಂಥೀಯ ನಂಬಿಕೆಗಳಲ್ಲಿ ವ್ಯತ್ಯಾಸವಿಲ್ಲ. ಈ ಪೇಪರ್ಗಳಲ್ಲಿ ಈಗಾಗಲೇ ವಿವಾದಕ್ಕೆ ಗುರಿಯಾದ ಅಂಶಗಳಲ್ಲದೆ ಏನೂ ಹೊಸದಿಲ್ಲ. ಅದೇ ಸಾವರ್ಕರ್, ಗೊಳ್ವಲ್ಕರ್ ಪ್ರೇರಿತ ವಿಚಾರಗಳೇ ಇವೆ. ಪಶ್ಚಿಮದ ವಿಜ್ಞಾನವು ಫೇಕ್ ನ್ಯೂಸ್ಗಳಿಂದ ಕೂಡಿದೆ. ಈ ವಿಜ್ಞಾನದ ಅನೇಕ ಆವಿಷ್ಕಾರಗಳು ಸಿದ್ಧಾಂತಗಳು ಸಾವಿರಾರು ವರ್ಷ ಮೊದಲೇ ಭಾರತದಲ್ಲಿದ್ದವು. ಇದನ್ನು ನಮ್ಮ ಶಿಕ್ಷಣದಲ್ಲಿ ಹೇಳಿಕೊಡಬೇಕು. ಅದೇ ಹಳೆಯ ಪುಷ್ಪಕ ವಿಮಾನ, ಗಣಪತಿಯ ಪ್ಲಾಸ್ಟಿಕ್ ಸರ್ಜರಿ ಮಾದರಿಯ ವಾದಗಳಿವು.

ಭಾರತೀಯ ಜ್ಞಾನ ಪರಂಪರೆಗಳನ್ನು ನಾವು ಮುನ್ನೆಲೆಗೆ ತರಬೇಕು ಎನ್ನುವುದು ಇನ್ನೊಂದು ವಾದ. ಆದರೆ ಭಾರತೀಯವೆಂದರೆ ವೈದಿಕ-ಬ್ರಾಹ್ಮಣ ಕೇಂದ್ರಿತ ಪರಂಪರೆಯೆಂದು ಇಲ್ಲಿಯ ನಿಲುವು. ಹಲವು ದಶಕಗಳಿಂದ ಈ ನಿಲುವನ್ನು ಬಲಪಂಥೀಯ ವಿದ್ವಾಂಸರು ಪ್ರಬಲವಾಗಿ ಮಂಡಿಸುತ್ತಿದ್ದಾರೆ. ಇದಕ್ಕಾಗಿ ಅವರು ಬಳಸಿಕೊಳ್ಳುತ್ತಿರುವುದು ವಸಾಹತೋತ್ತರ ಚಿಂತನೆಯ ಕೆಲವು ಅಂಶಗಳನ್ನು. ವಸಾಹತುಶಾಹಿಯು ಕೇವಲ ವಸಾಹತುಗಳ ಆರ್ಥಿಕ, ರಾಜಕೀಯ ವ್ಯವಸ್ಥೆಗಳನ್ನು ವಶಪಡಿಸಿಕೊಳ್ಳಲಿಲ್ಲ. ಇಲ್ಲಿಯ ಜ್ಞಾನ ಪರಂಪರೆಗಳನ್ನು ಅಂಚಿಗೆ ತಳ್ಳಿತು. ಅವುಗಳ ಸ್ಥಾನಪಲ್ಲಟಗೊಳಿಸಿ ಪಶ್ಚಿಮದ ಜ್ಞಾನವನ್ನು ಅಧಿಕಾರದ ನೆಲೆಯಲ್ಲಿ ತಂದಿರಿಸಿತು. ತನ್ನದೇ ಆದ ಇತಿಹಾಸ ರಚನೆಯ ಮಾದರಿಯನ್ನು ಅಧಿಕೃತವೆಂದು ವಾದಿಸಿತು. ಅಲ್ಲದೆ ಈ ನಿಲುವು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅನುಷ್ಠಾನಗೊಂಡು ನಮ್ಮ ಶಿಕ್ಷಣ ಹಾಗೂ ಜ್ಞಾನ ಪರಂಪರೆಗಳು ವಸಾಹತೀಕರಣಗೊಂಡವು. ಸ್ವಾತಂತ್ರ್ಯದ ನಂತರವೂ ಈ ಪರಿಸ್ಥಿತಿಯು ಬದಲಾಗಿಲ್ಲ. ಹೀಗಾಗಿ ನಾವು ಈ ನೆಲದ ಪರಂಪರೆಗಳನ್ನು ಮರು ಶೋಧಿಸಬೇಕು. ವಸಾಹತೋತ್ತರ ಚಿಂತನೆಯ ಈ ವಾದಗಳು ಸರಿಯಾಗಿಯೇ ಇವೆ.

ಪೊಸಿಶನ್ ಪೇಪರ್ ಸಿದ್ಧಪಡಿಸಿದ ಪರಿಣತರಿಗೆ ಸನ್ಮಾನ ಸಮಾರಂಭ ಜೂನ್ 3, 2022

ಆದರೆ ಬಲಪಂಥವು ಇದನ್ನು ತನ್ನ ಸಾಂಸ್ಕೃತಿಕ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಬಗೆಯನ್ನು ಗಮನಿಸಬೇಕು. ಅದು ಪಶ್ಚಿಮ ಕೇಂದ್ರಿತ ಚಿಂತನೆಗಳನ್ನು ಧಿಕ್ಕರಿಸಿ ಅನುಷ್ಠಾನಗೊಳಿಸಲು ಬಯಸುವ ಭಾರತೀಯ ಜ್ಞಾನವೆಂದರೆ ವೈದಿಕ ಪರಂಪರೆ, ಅಷ್ಟು ಮಾತ್ರವಲ್ಲ ವಿಜ್ಞಾನ ಹಾಗೂ ತರ್ಕ ವಿರೋಧಿಯಾದ ವೈದಿಕ ಚಿಂತನೆ… ಉದಾಹರಣೆಗೆ ಇನ್ನೊಂದು Position Paper ಮಾಂಸಾಹಾರವು ದೇಹದ ಸಮತೋಲನವನ್ನು ಕೆಡಿಸುತ್ತದೆ. ಮೊಟ್ಟೆ ತಿನ್ನುವುದು ಅಪಾಯಕಾರಿ, ಇತ್ಯಾದಿ ಸಲಹೆಗಳನ್ನು ನೀಡಿದೆ. ಈ ಸಲಹೆ ನೀಡಿದ ಸಮಿತಿಯ ಅಧ್ಯಕ್ಷರು ಪ್ರತಿಷ್ಠಿತ NIMHANS ಸಂಸ್ಥೆಯ ಪ್ರಾಧ್ಯಾಪಕರು. ಹೀಗಾಗಿ ಈಗ ‘Save NIMHANS’ ಎನ್ನುವ ಪ್ರತಿರೋಧ ಆರಂಭವಾಗಿದೆ. NIMHANS ಸಂಸ್ಥೆಯು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಕೊಡುವ ಸಂಸ್ಥೆಯೆಂದು ಭಾರತದಲ್ಲಿ ಖ್ಯಾತಿ ಪಡೆದಿದೆ. ಅದು ಅವರಿಗೆ ಶಿಕ್ಷಕ ಹುದ್ದೆ (ಕಾಯಿಲೆ ವಾಸಿಯಾಗುವ ಮೊದಲು) ಕೊಡುತ್ತದೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಇನ್ನೂ ಒಂದು ವಿಶಿಷ್ಟವಾದ ಸಲಹೆಯೆಂದರೆ ಒಂದು ಪೇಪರ್ ಪ್ರಕಾರ ನಾವು ಇತಿಹಾಸದಲ್ಲಾದ ಅನ್ಯಾಯಗಳನ್ನು ಎದುರಿಸಬೇಕು, ಅರ್ಥಮಾಡಿಕೊಳ್ಳಬೇಕು. ಆ ಸತ್ಯಗಳಿಂದ ಓಡಿ ಹೋಗಬಾರದು. ಸೂಕ್ತವಾದ ಸಲಹೆ. ಆದರೆ ಸಮಿತಿಯು ನೀಡುವ ಉದಾಹರಣೆಯೆಂದರೆ ಹಿಂದೂಗಳ ಹತ್ಯಾಕಾಂಡಗಳನ್ನು ಪಠ್ಯಗಳಲ್ಲಿ ಸೇರಿಸಬೇಕು. ಗುಜರಾತಿನಲ್ಲಿ ನಡೆದ ಮುಸ್ಲಿಮ್ ಹತ್ಯಾಕಾಂಡವನ್ನಲ್ಲ. ಪ್ರತಿನಿತ್ಯ ನಡೆಯುವ ದಲಿತರ ಹತ್ಯೆಯನ್ನಲ್ಲ. ನೇರವಾಗಿ ಹೇಳುವುದಾದರೆ ಪಠ್ಯಗಳಲ್ಲಿ ಇತಿಹಾಸವನ್ನು ಸೈದ್ಧಾಂತಿಕ ಆಯುಧವನ್ನಾಗಿ ಬಳಸಿಕೊಂಡು ದ್ವೇಷದ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದು.

ಪ್ರಶ್ನೆ ಏನೆಂದರೆ ಈ ಸಲಹೆಗಳು ಕರ್ನಾಟಕದಿಂದ ಏಕೆ NCERT ಗೆ ಹೋಗಬೇಕು? ಕನ್ನಡದ ಚಿಂತನ ಪರಂಪರೆ ಎನ್ನುವುದು ಇದೆಯಲ್ಲವೆ? ಇದು ಮಾನವ ಪರವಾಗಿರುವುದು, ಸಮಾನತೆಯ ಪರವಾಗಿರುವುದು. ಪಂಪನಿಂದ ಕುವೆಂಪುವರೆಗೆ ಈ ಪರಂಪರೆಯು ಕನ್ನಡ ಮನಸ್ಸನ್ನು ತಿದ್ದಿದೆ. ಈಗ ಸಿದ್ಧವಾಗಿರುವ Position Paper ಗಳು ಉತ್ತರ ಪ್ರದೇಶದಿಂದ ಬಂದಿದ್ದರೆ ಆಶ್ಚರ್ಯವಾಗುತ್ತಿರಲಿಲ್ಲ. ಪರಿಸ್ಥಿತಿಗೆ ಕಾರಣವಾಗಿರುವುದು ಇಷ್ಟೆ. ರಾಜಕೀಯವಾಗಿ ಅತ್ಯಂತ ದುರ್ಬಲರಾಗಿರುವ ಮುಖ್ಯಮಂತ್ರಿ ಶ್ರೀ ಬೊಮ್ಮಾಯಿಯವರು ಕರ್ನಾಟಕದ ಶಿಕ್ಷಣ ಹಾಗೂ ಸಂಸ್ಕೃತಿಗಳನ್ನು ಆರ್.ಎಸ್.ಎಸ್.ಗೆ ಬಿಟ್ಟು ಕೊಟ್ಟಿದ್ದಾರೆ. ಸ್ವಂತ ಯೋಚನೆ ಹಾಗೂ ನಿಷ್ಕರ್ಷೆಗೆ ಅಸಮರ್ಥರಾಗಿರುವ ಅವರು ಬಸವ ಪರಂಪರೆಗೆ ದ್ರೋಹ ಮಾಡಿ ಶ್ರೇಷ್ಠವಾದ ವಚನ ಪರಂಪರೆಯ ಮೌಲ್ಯಗಳನ್ನು ಕಡೆಗಣಿಸಿ ದೇಶದಲ್ಲಿ ರಾಜ್ಯವು ತಲೆತಗ್ಗುವಂತೆ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಏನೂ ಗೊತ್ತಿರದ ಯಾರಾದರೂ ಈ Position Paper ಗಳನ್ನು ಓದಿದರೆ ಕರ್ನಾಟಕವು ಯಾವ ಶ್ರೀಮಂತ ಸಂಸ್ಕೃತಿಯೂ ಇಲ್ಲದ ವೈಚಾರಿಕತೆಯೂ ಇಲ್ಲದ ಬಲಪಂಥೀಯ ಆಶ್ರಯ ತಾಣವೆಂದುಕೊಳ್ಳಬಹುದು. ಹಾಗೆಂದು ಕೊಳ್ಳುವುದು ವಾಸ್ತವವೇ ಆಗುವ ದಿನಗಳು ದೂರವಿಲ್ಲ.

Donate Janashakthi Media

One thought on “`ಪೊಸಿಶನ್ ಪೇಪರ್’ಗಳು: ಮುಂಬರುವ ಪಠ್ಯಗಳ ಟ್ರೈಲರ್ – ಪುಷ್ಪಕ ವಿಮಾನ, ಅಪಾಯಕಾರಿ ಮೊಟ್ಟೆ, ಹಿಂದೂಗಳ ಹತ್ಯಾಕಾಂಡ

Leave a Reply

Your email address will not be published. Required fields are marked *