ಕಲಬುರಗಿ: ಗೋ ರಕ್ಷಣೆ ಎಂಬ ಹೆಸರಿನಲ್ಲಿ ದಳ, ಸೇನೆ ಎಂದು ಹೇಳಿ ಶಾಲು ಹಾಕಿಕೊಂಡು ಕಾನೂನು ಕೈಗಿತ್ತಿಕೊಂಡರೆ ಅವರನ್ನು ಒದ್ದು ಒಳ ಹಾಕಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪೊಲೀಸ್ ಅಧಿಕಾರಿಗಳಿಗೆ ಖಡಖ್ ಸೂಚನೆ ನೀಡಿದ್ದಾರೆ. ನಿಮ್ಮ ಕೆಲಸವನ್ನು ಅವರ ಕೈಯ್ಯಲ್ಲಿ ಕೊಟ್ಟು ನೀವು ಸ್ಟೇಷನ್ ಅಲ್ಲಿ ಇರಬಾರದು ಎಂದು ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೋಮು ಹೆಸರಿನಲ್ಲಿ ವಿಷ ಬೀಜ ಬಿತ್ತುವವರಿಗೆ ಕಡಿವಾಣ ಹಾಕಬೇಕು. ಅನಾವಶ್ಯಕವಾದ ಕೋಮುಗಲಭೆ ನಮಗೆ ಬೇಡ. ಬಕ್ರೀದ್ ಬರುತ್ತಿದ್ದು, ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಗೋ ರಕ್ಷಣೆ ಹೆಸರಿನಲ್ಲಿ ಕೆಲವರು ಆ ದಳ, ಈ ದಳ ಎಂದು ತೊಂದರೆ ನೀಡುತ್ತಿದ್ದಾರೆ. ಅವರಿಂದಾಗಿ ರೈತರಿಗೆ ತೊಂದರೆ ಆಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಐಟಿ ಸೆಲ್ ಅಧ್ಯಕ್ಷ ವಿರುದ್ಧ ದೂರು ದಾಖಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
“ಯಾರಾದರೂ ಶಾಲು ಹಾಕಿಕೊಂಡು ನಾವು ಈ ದಳ – ಆ ದಳ, ಈ ಸಂಘಟನೆ – ಆ ಸಂಘಟನೆ ಎಂದು ಹೇಳಿಕೊಂಡು ಕಾನೂನು ಕೈಗೆ ತೆಗೆದುಕೊಂಡರೆ ಒದ್ದು ಒಳಗೆ ಹಾಕಿ. ನಗರ ಪ್ರದೇಶವಾಗಿರಬಹುದು ಅಥವಾ ಗ್ರಾಮೀಣ ಪ್ರದೇಶವಿರಬಹುದು, ಜಾನುವಾರಗಳ ಸಾಗಾಣಿಕೆ ಕಾನೂನು ತುಂಬಾ ಸ್ಪಷ್ಟವಾಗಿದೆ. ನಿಮ್ಮ ಕೆಲಸ ಅವರಿಗೆ ಕೊಟ್ಟು, ನೀವು ಸ್ಟೇಷನ್ ಅಲ್ಲಿ ಕೂರಬಾರದು.” ಎಂದು ಹೇಳಿದ್ದಾರೆ.
ಕಳೆದ ಸರ್ಕಾರದ ಸಮಯದಿಂದ ಇಂತದ್ದೊಂದು ರೂಡಿ ಮಾಡಿಕೊಂಡಿದ್ದಾರೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಪ್ರಕಾರ ನಡೆದುಕೊಳ್ಳಬೇಕು. ರಾತ್ರೋ ರಾತ್ರಿ ಹುಟ್ಟುವ ಸೇನೆಗಳು ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾರಾದರೂ ಕಾನೂನು ವಿರೋಧಿ ಜಾನುವಾರು ಸಾಗಾಣಿಕೆ ನಡೆಸುತ್ತಿದ್ದರೆ ಅವರನ್ನು ಒಳಗೆಹಾಕಿ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.