ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಐಟಿ ಸೆಲ್ ಅಧ್ಯಕ್ಷ ವಿರುದ್ಧ ದೂರು ದಾಖಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್​ಗಳನ್ನು ಹಾಕಿದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ , ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಚಂಡಿಗಢ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸೂದ್ ವಿರುದ್ಧ ಬೆಂಗಳೂರು ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ದೂರು ನೀಡಿದ್ದಾರೆ.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೂನ್ 17ರಂದು ಅಮಿತ್ ಮಾಳವಿಯಾ ಅವರು ತಮ್ಮ ಖಾತೆಯಲ್ಲಿ ಅನಿಮೇಟೆಡ್ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ. ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋಗಿ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಬಿಜೆಪಿ ಐಟಿ ಸೆಲ್ ನ ಸುಳ್ಳಿನ ಫ್ಯಾಕ್ಟರಿಯನ್ನು ರಾಜ್ಯದಲ್ಲಿ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಅವರು ಸದಾ ಕೋಮು ವಿಷಬೀಜ ಬಿತ್ತಿ, ಸುಳ್ಳನ್ನು ನೀಜ ಎಂದು ಬಿಂಬಿಸುವುದು, ಸಮಾಜದಲ್ಲಿ ಭೀತಿ ಸೃಷ್ಟಿಸುವುದು ಇವರ ಕೆಲಸವಾಗಿದೆ. ಕಳೆದ ಸರ್ಕಾರದಲ್ಲಿ ಇವರ ಆಟ ನಡೆದಿತ್ತು. ನಮ್ಮ ಸರ್ಕಾರದಲ್ಲಿ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಿ ತೋರಿಸುತ್ತೇವೆ. ಸುಳ್ಳು ಮಾಹಿತಿ ನೀಡಿ, ಶಾಂತಿ, ಕಾನೂನು ಸುವ್ಯವಸ್ಥೆ ಕದಡಲು ಪ್ರಯತ್ನಿಸುವವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ : ಪ್ರಿಯಾಂಕ್ ಖರ್ಗೆ

ಇವರು ತಮ್ಮ ವಿಡಿಯೋದಲ್ಲಿ ಕಾಂಗ್ರೆಸ್ ಭಯೋತ್ಪಾದನೆಗಿಂತ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಮುಂದೆ ನಿಂತು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ನಡ್ಡಾ, ಮಾಳವಿಯಾ ಹಾಗೂ ಸೂದ್ ಅವರು ಅಧಿಕೃತವಾಗಿ ತಪ್ಪು ಮಾಹಿತಿ ನೀಡುವಾಗ ನಾವು ಸುಮ್ಮನೆ ಕೂರುವುದಿಲ್ಲ. ಅವರು ನಮ್ಮ ವಿರುದ್ಧ ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳಬೇಕು. ಬೇಕಾದರೆ ಅವರು ನಮ್ಮ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಿ. ಈದರೆ ಸುಳ್ಳು ಪ್ರಚಾರ ನಡೆಸುತ್ತಿರುವ ಅವರ ವಿರುದ್ಧ ಸೆಕ್ಷನ್ 505(2), 553 (ಎ), 120(ಬಿ), 34 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ದೂರು ನೀಡಿದ್ದೇವೆ. ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆ ತರಲು, ಸಂವಿಧಾನದ ಪರವಾಗಿ, ಬಡವರ ಏಳಿಗೆಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇಂತಹ ಸುಳ್ಳು ಮಾಹಿತಿ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಇವರನ್ನು ಕಾನೂನು ಮೂಲಕ ಎದುರಿಸುತ್ತೇವೆ.

ಅಮಿತ್ ಮಾಳವಿಯ ಅವರು ಬೆಂಗಳೂರಿಗೆ ಆಗಮಿಸಿ ಕಾಂಗ್ರೆಸ್ ಪಕ್ಷ ಹೇಗೆ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದೆ ಎಂದು ಹೇಳಲಿ. ಇಲ್ಲದಿದ್ದರೆ, ಕ್ಷಮೆ ಕೇಳಿ, ಮುಂದೆ ಇಂತಹ ಸುಳ್ಳು ಪ್ರಚಾರ ಮಾಡುವುದಿಲ್ಲ ಎಂದು ಪತ್ರ ಬರೆದುಕೊಡಬೇಕು. ಸುಳ್ಳು ಸುದ್ದಿ, ಕೋಮು ಸೌಹಾರ್ದತೆಗೆ ಧಕ್ಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಜಾಲತಾಣ ಸುಧಾರಣೆಗೆ ಕ್ರಮ ಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ, ‘ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ಪರಿಶೋಧನೆ ಇದೆ. ಹಿಂದಿನ ಸರ್ಕಾರದಲ್ಲಿ ಸರ್ಕಾರವೇ ಸುಳ್ಳು ಸುದ್ದಿ ಹರಡುತ್ತಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳ ಜತೆ ಚರ್ಚೆ ಮಾಡಿದ್ದು, ಐಟಿ ಕಾಯ್ದೆ ಅಡಿಯಲ್ಲಿ ಗೃಹ ಸಚಿವಾಲಯ ಸಲಹೆ ಪಡೆದು ಇವರನ್ನು ಹೇಗೆ ನಿಯಂತ್ರಿಸಬಹುದು ಎಂದು ತೀರ್ಮಾನ ಮಾಡುತ್ತೇವೆ. ನೀವು ಸರ್ಕಾರದ ನೀತಿ, ಕೆಲಸದ ಬಗ್ಗೆ ವಿಮರ್ಷೆ, ಟೀಕೆ ಮಾಡಿ ತೊಂದರೆ ಇಲ್ಲ. ಆದರೆ ಜನರಲ್ಲಿ ಆತಂಕ ಸೃಷ್ಟಿಸಿ ಕೋಮುಗಲಭೆಗೆ ಪ್ರೋತ್ಸಾಹ ನೀಡುವುದು ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಇತ್ತೀಚೆಗೆ ಸರ್ಕಾರ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಬಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು, ಇಂತಹ ವಿಚಾರಗಳನ್ನು ನಿಯಂತ್ರಣ ಮಾಡಬೇಕು, ಮಾಡುತ್ತೇವೆ’ ಎಂದು ತಿಳಿಸಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಗೊಂದಲವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಬಿಜೆಪಿ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ಬಗ್ಗೆ ಆಲೋಚಿಸುವುದನ್ನು ಬಿಡಿ. ಜನ ಕಾಂಗ್ರೆಸ್ ಪಕ್ಷ ಆರಿಸಿದ್ದು, ನಾವು ಉತ್ತಮ ಆಡಳಿತ ನೀಡುತ್ತೇವೆ. ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಮಂತ್ರಿಗಳ ನೇಮಕ ಮಾಡಿ, ಐದು ಗ್ಯಾರಂಟಿ ಜಾರಿಯ ರೂಪುರೇಷೆ ಸಿದ್ಧ ಮಾಡಿ ಶಕ್ತಿ ಯೋಜನೆ ಜಾರಿಯಾಗಿದೆ. ಬಿಜೆಪಿಯವರು ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲಿ. ಅವರು ಕೇವಲ ಒಂದು ಆತ್ಮಾವಲೋಕನ ಸಭೆ ಮಾಡಿ ಗೊಂದಲ ಸೃಷ್ಟಿಸಿಕೊಂಡು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಸಿ.ಟಿ ರವಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ದಿನನಿತ್ಯ ಟಿವಿಗಳ ಮುಂದೆ ಅಳುತ್ತಿದ್ದಾರೆ. ಮೊದಲು ಅವರನ್ನು ಸಮಾಧಾನ ಮಾಡಿ. ಅದನ್ನು ಬಿಟ್ಟು ಇವರು ನಮಗೆ ಯಾಕೆ ಪಾಠ ಮಾಡುತ್ತಿದ್ದಾರೆ?’ ಎಂದು ತಿರುಗೇಟು ನೀಡಿದರು.

Donate Janashakthi Media

Leave a Reply

Your email address will not be published. Required fields are marked *