ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ನವದೆಹಲಿ : ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ನಾವು ಹೇಳುತ್ತಲೇ ಇದ್ದೆವು. ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ನಮ್ಮ ಆರೋಪ ತಿರಸ್ಕರಿಸುತ್ತಾ ಬಂದಿತ್ತು. ಇದು 40% ಸರ್ಕಾರ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಲಾಗುತ್ತಿದ್ದು, ಇದು ನಿನ್ನೆ ಸಾಬೀತಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಅಮಿತ್ ಶಾ ಅವರು ಸಂಡೂರಿನಲ್ಲಿ ಮಾತನಾಡುತ್ತಾ ಮೋದಿ ಮುಖ ನೋಡಿ ಮತ ನೀಡಿ ನಾವು ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವ ಆಡಳಿತ ನೀಡುತ್ತೇವೆ ಎಂದರು. ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಕೇಂದ್ರ ಸಚಿವರೇ ಈ ರೀತಿ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮೂಡಿತ್ತು. ಕಾರಣ ಈಗ ತಿಳಿದಿದೆ. ರಾಜ್ಯದಲ್ಲಿರುವ ಬಿಜೆಪಿ ಶಾಸಕರು ಹಾಗೂ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರದ ಬಕಾಸುರರು ಇವರು ಎಷ್ಟು ತಿಂದರೂ ಸಾಲುತ್ತಿಲ್ಲ ಎಂದು ಅಮಿತ್ ಶಾ ಹಾಗೂ ಪ್ರಾಧಿ ಮೋದಿ ಅವರಿಗೆ ಅರಿವಾಗಿದೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡುತ್ತಿದ್ದಾರೆ  ಎಂದರು.

ಮುಂದುವರಿದು, ಕಾಂಗ್ರೆಸ್ ಪಕ್ಷ ದಾಖಲೆ ಸಮೇತ ಭ್ರಷ್ಟಾಚಾರದ ಆರೋಪ ಮಾಡಿದರೆ, ಆ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿದ್ದರೂ ಸಿಎಂ ಹಾಗೂ ಮಂತ್ರಿಗಳು ದಾಖಲೆ ಕೇಳುತ್ತಾರೆ. ಮಠಾಧೀಶರೊಬ್ಬರು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮಠಕ್ಕೆ ಹಣ ನೀಡಬೇಕಾದರೆ 30% ಹಣ ನೀಡಬೇಕು ಎಂದು ಕೇಳಿದರು. ಆಗ ಸರ್ಕಾರ ಮೌನವಾಗಿತ್ತು. ಶ್ರೀನಿವಾಸ್ ಪ್ರಸಾದ್ ಅವರು ಆಪರೇಷನ್ ಕಮಲದಲ್ಲಿ 25 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದಾಗ ದಾಖಲೆ ಕೇಳಲಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯಾ ಪತ್ರದಲ್ಲಿ ಸಚಿವ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಸಾಯುತ್ತಾನೆ. ಇದಕ್ಕಿಂತ ದಾಖಲೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗರು ಯಡಿಯೂರಪ್ಪ ಅವರಿಲ್ಲದೆ ಚುನಾವಣೆ ನಡೆಯುವುದಿಲ್ಲವೆಂದು ಬಿಂಬಿಸುತ್ತಿದ್ದಾರೆ : 
ಇತ್ತೀಚೆಗೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಹಿರಂಗ ಪತ್ರ ಬರೆದು ನೀರಾವರಿ ಟೆಂಡರ್ ನಲ್ಲಿ 22 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದರು. ಈ ಬಗ್ಗೆ ದಾಖಲೆ ಕೇಳಿದರಾ? ಯತ್ನಾಳ್ ಅವರು 2500 ಕೋಟಿ ಕೊಟ್ಟು ಸಿಎಂ ಕುರ್ಚಿ ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಇದಕ್ಕೆ ದಾಖಲೆ ಕೇಳಿದರಾ? ಈಗ ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿ ತೋರುತ್ತಿರುವ ಬಿಜೆಪಿಗರು ಯಡಿಯೂರಪ್ಪ ಅವರಿಲ್ಲದೇ ಚುನಾವಣೆ ನಡೆಯುವುದಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಆದರೆ ಯತ್ನಾಳ್ ಅವರು ಯಡಿಯೂರಪ್ಪ ಅವರು ಭ್ರಷ್ಟಾರು, ಅವರ ಪುತ್ರ ವಿಜಯೇಂದ್ರ ಪಿಎಸ್ಐ ಹಗರಣದಲ್ಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದರು. ಈ ಬಗ್ಗೆ ಸರ್ಕಾರ ದಾಖಲೆ ಕೇಳಿತಾ? ಕನಕಗಿರಿ ಶಾಸಕರು ಶಾಸಕರ ಭವನದಲ್ಲಿ ಡೀಲ್ ಮಾಡಿರುವಬಗ್ಗೆ ಹೇಳಿದಾಗ ಆ ಆಡಿಯೋ ಪರೀಕ್ಷೆ ಮಾಡಿಸಿದರಾ? ಇನ್ನು ನೆಹರೂ ಓಲೇಕರ್ ಅವರು ಅಪರಾಧಿಯಾದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರು ಭ್ರಷ್ಟಾಚಾರದಲ್ಲಿ ಅಪರಾಧಿ ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ. ಅವರ ರಾಜೀನಾಮೆ ಏನಾದರೂ ಕೇಳಿದರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.

ಬೊಮ್ಮಾಯಿ ಹಾಗೂ ಕಟೀಲ್ ಅವರೇ ಎಲ್ಲಿದ್ದೀರಿ? ಈಗ ನಿಮ್ಮ ಬಾಯಿಗೆ ಹೊಲಿಗೆ ಬಿದ್ದಿದೆಯಾ?
ಗುತ್ತಿಗೆದಾರರ ಸಂಘದ ಅಧ್ಯಕ್ಷರು ನೇರವಾಗಿ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಲಿಲ್ಲ. ದೇಶದುದ್ದಕ್ಕೂ ನಾ ಖಾವೂಂಗಾ ನಾ ಖಾನೇದೂಂಗ ಎನ್ನುವ ಮೋದಿ ಅವರು ರಾಜ್ಯದಲ್ಲಿ ಮೇ ಬಿ ಖಾವೂಂಗಾ, ತುಮ್ ಕೋ ಬಿ ಖಿಲಾವೂಂಗಾ ನಡೆಯುತ್ತಿದೆ. ಈ ಪ್ರಕರಣದಲ್ಲಿ ದಾಖಲೆ ಕೇಳಿದಾಗ, ನ್ಯಾಯಾಂಗ ತನಿಖೆಗೆ ಆದೇಶ ನೀಡಿದರೆ ದಾಖಲೆ ನೀಡುವುದಾಗಿ ಹೇಳಿದರು. ನ್ಯಾಯಂಗ ತನಿಖೆ ಮಾಡಿಸಿದರಾ? ಗುತ್ತಿಗೆದಾರರ ಸಂಘ ನೋಂದಾಯಿತ ಸಂಸ್ಥೆ ಎಂಬ ಕನಿಷ್ಠಪರಿಜ್ಞಾನ ಬಿಜೆಪಿಯವರಿಗೆ ಇಲ್ಲವೇ? ರುಪ್ಸಾ ಸಂಸ್ಥೆಯಲ್ಲಿ 13 ಸಾವಿರ ಶಾಲೆಗಲು ನೋಂದಣಿಯಾಗಿದ್ದು ಪ್ರಧಾನಿಗೆ ಪತ್ರ ಬರೆದು 40% ಭ್ರಷ್ಟಾಚಾರ ಆರೋಪ ಮಾಡಿದರು. ಕೋವಿಡ್ ಸಮಯದಲ್ಲಿ ಕಲಿಕೆಗೆ ತೊಂದರೆ ಆದಾಗ ಸರ್ಕಾರ ಇದೇ ಸಂಸ್ಥೆ ಜತೆ ಸಭೆ ಮಾಡುತ್ತಿದ್ದರು ಎಂದರು.

ಇದನ್ನು ಓದಿ ಬಿಟ್‌ ಕಾಯಿನ್‌ ಹಗರಣದ ಬಗ್ಗೆ ಸಾಕಷ್ಟು ದಾಖಲೆಗಳಿವೆ, ಸುಪ್ರಿಂ ಕೋರ್ಟ್‌ಗೆ ಹೋಗಲು ಸಿದ್ದ – ಪ್ರಿಯಾಂಕ್‌ ಖರ್ಗೆ

ಭ್ರಷ್ಟಾಚಾರಕ್ಕೆ ಇನ್ನೆಷ್ಟು ಗುತ್ತಿಗೆದಾರರು ಬಲಿಯಾಗಬೇಕು ? 
ಈ ಸರ್ಕಾರದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಗುತ್ತಿಗೆದಾರರು ಬಲಿಯಾಗಬೇಕು. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ದಾಖಲೆ ಸಮೇತ ಆರೋಪ ಮಾಡಿದರೆ, ಉಡಾಫೆ ಮಾತು ಎನ್ನುತ್ತಾರೆ. ನಾವು ಇದುವರೆಗೂ ಮಾಡಿರುವ ಎಲ್ಲ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿವೆ. ಗಂಗಾಕಲ್ಯಾಣ ಯೋಜನೆ ಹಗರಣ, ಸಿಐಡಿ ತನಿಖೆ, ಪಿಎಸ್ಐ, ಪಿಡಬ್ಲ್ಯೂಡಿ ನೇಮಕಾತಿ, ಬೋವಿ ಅಭಿವೃದ್ಧಿ ನಿಗಮ ಹಗರಣ, ಬಿಟ್ ಕಾಯಿನ್ ಹಗರಣದಲ್ಲಿ ನಮ್ಮ ಒತ್ತಡದ ನಂತಪರ ಎಫ್ಐಆರ್ ದಾಖಲಾಯಿತು. ನಂತರ ತನಿಖೆ ನಿಲ್ಲಿಸಿದ್ದಾರೆ. ಕಾಕಂಬಿ ವಿಚಾರವಾಗಿ, ಕಾರ್ಮಿಕ ಇಲಾಖೆ ಹಗರಣದ ಬಗ್ಗೆ ತನಿಖೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಟೀಲ್ ಅವರು ಈಗ ಎಲ್ಲಿ ಅವಿತು ಕುಳಿತಿದ್ದಾರೆ? ಪರೇಶ್ ಮೆಸ್ತಾ ಸತ್ತಾಗ ರಾಜಾರೋಷವಾಗಿ ಬಂದಿದ್ದೀರಿ, ಅಮಾಯಕರ ಬಲಿ ತೆಗೆದುಕೊಂಡು ಚುನಾವಣೆಗೆ ಹೋಗುತ್ತೀರಿ. ಸಿ.ಟಿ ರವಿ, ರವಿ ಕುಮಾರ್ ಅವರು ಎಲ್ಲಿ ಅವಿತು ಕುಳಿತಿದ್ದಾರೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

 ಭ್ರಷ್ಟೋತ್ಸವಕ್ಕಾಗಿ ರಾಜ್ಯಕ್ಕೆ ಶಾ, ನಡ್ಡಾ ಬರುತ್ತಿದ್ದಾರೆ :
ಅಮಿತ್ ಶಾ, ನಡ್ಡಾ ಅವರು ರಾಜ್ಯಕ್ಕೆ ವಿಜಯ ಸಂಕಲ್ಪ ಯಾತ್ರೆ ಮಾಡಲು ಬರುತ್ತಿಲ್ಲ. 40-50% ಕಮಿಷನ್ ಹೆಚ್ಚಳಕ್ಕೆ ಲಂಚ ಸಂಕಲ್ಪ ಯಾತ್ರೆ, ಭ್ರಷ್ಟೋತ್ಸವಕ್ಕಾಗಿ ಬರುತ್ತಿದ್ದಾರೆ. ಕನ್ನಡಿಗರಿಗೆ ಒಳ್ಳೆಯದು ಮಾಡಲು ಬರುತ್ತಿಲ್ಲ. ಬಿಜೆಪಿ ಶಾಸಕರ ಕಚೇರಿಯಲ್ಲಿ ಅವರ ಪುತ್ರ 1.72 ಕೋಟಿ ಹಣ ಸಿಕ್ಕಿದೆ. ಇದು ಎಲ್ಲಿಂದ ಬಂದಿದೆ. ಇವರು ನೋಟು ರದ್ದು ಮಾಡುವಾಗ ಕಪ್ಪು ಹಣ ನಿರ್ಮೂಲನೆ ಮಾಡುತ್ತೇವೆ ಎಂದರು. ಆದರೆ ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಮುಂದುವರಿದ ದಾಳಿಯಲ್ಲಿ 6 ಕೋಟಿ ಹೆಚ್ಚುವರಿಯಾಗಿ ಸಿಕ್ಕಿದೆ. ಇವರ ಬಳಿಯೇ ಇಷ್ಟು ಸಿಗಬೇಕಾದರೆ, ಇವರಿಗಿಂತ ಉನ್ನತ ಮಟ್ಟದಲ್ಲಿರುವವರ ಬಳಿ ಎಷ್ಟಿರಬೇಡ. ನಾವು ಪೇಸಿಎಂ ಅಭಿಯಾನ ನಡೆಸಿದ್ದು ತಪ್ಪಾ? ಎಂದರು.

ಪ್ರಧಾನಿ ಮೋದಿ ಶಾ, ನಡ್ಡಾ ಅವರನ್ನು ಕೂರಿಸಿಕೊಂಡು ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡಲಿ :
ಎಲೆಕ್ಷನ್ ಗೆ ಕಲೆಕ್ಷನ್ ಮಾಡಲು ಈ ಖರೀದಿ ಮಾಡಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಾ ಖಾವೂಂಗಾ, ನಾ ಖಾನೇದೂಂಗ ಎಂಬ ಘೋಷಣೆ ಮೂಲಕ ಚುನಾವಣೆ ಪ್ರಚಾರ ಮಾಡಿದ್ದರು. ಈಗ ಅವರು ಈ ಘೋಷಣೆ ಇಟ್ಟುಕೊಂಡು ಭಾಷಣ ಮಾಡುತ್ತಾರಾ? ಮಾಡಲಿ ನೋಡೋಣ. ಅಮಿತ್ ಶಾ ಅವರು ಐಟಿ, ಇಡಿ, ಸಿಬಿಐ ಅವರನ್ನು ನಿಮ್ಮ ಜತೆಯಲ್ಲೇ ಕರೆದುಕೊಂಡು ಬನ್ನಿ. ನಮ್ಮ ಜನರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ. ನಮ್ಮ ರಾಜ್ಯದ ಚುನಾವಣೆ ಮುಗಿಯುವ ಹೊತ್ತಿನಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಕೂರಿಸಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡಲಿ. ಕಳೆದ 9 ವರ್ಷಗಳಲ್ಲಿ ಅವರ ಸಾಧನೆ ಏನು ಎಂದು ನಮ್ಮ ಮಾಧ್ಯಮ ಸ್ನೇಹಿತರಿಗೆ ತಿಳಿಸಲಿ. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲು ಮುಕ್ತ ಅವಕಾಶ ಇರಬೇಕು. ರಾಜ್ಯ ಬಿಜೆಪಿ ಅವರಿಗೆ ಇಂತಹ ಪತ್ರಿಕಾಗೋಷ್ಠಿ ಆಯೋಜಿಸಲು ಆಗದಿದ್ದರೆ, ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಅಧ್ಯಕ್ಷನಾಗಿ ನಾನು ಪತ್ರಿಕಾಗೋಷ್ಠಿ ನಡೆಸುತ್ತೇವೆ. ಅದಕ್ಕಾಗುವ ಖರ್ಚು ನಾವೇ ನೋಡಿಕೊಳ್ಳುತ್ತೇವೆ ಎಂದರು.

ಟೆಂಡರ್ ಗಳನ್ನು ರದ್ದುಗೊಳಿಸಬೇಕು :
ಕಳೆದ ಆರು ತಿಂಗಳಲ್ಲಿ ಮಾಡಿರುವ ಟೆಂಡರ್ ಗಳನ್ನು ರದ್ದುಗೊಳಿಸಬೇಕು. ಈ ಟೆಂಡರ್ ಗಳು ಎಲೆಕ್ಷನ್ ಗಾಗಿ ಮಾಡುತ್ತಿರುವ ಕಲೆಕ್ಷನ್ ಆಗಿದೆ. ಸೋಪ್ ಅಂಡ್ ಡಿಟರ್ಜೆಂಟ್ ಕಾರ್ಪೊರೇಷನ್ ಅಧ್ಯಕ್ಷರ ಬಳಿ ಇಷ್ಟು ಅಕ್ರಮ ಹಣವಿದ್ದರೆ, ಸರ್ಕಾರದಲ್ಲಿರುವವರ ಬಳಿ ಎಷ್ಟಿರಬಹುದು? ಈ ಅಕ್ರಮ ಹಣದ ಧೈರ್ಯದಿಂದ ನೀವು ಪ್ರತಿ ಮತಕ್ಕೆ 6 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ನಿಮ್ಮ ಪ್ರಾಮಾಣಿಕತೆ ಜನ ತೀರ್ಮಾನಿಸುತ್ತಾರೆ. ರಾಜ್ಯದಲ್ಲಿ ಶಾಸಕರೇ ಕೈಗೆ ಸಿಗುತ್ತಿಲ್ಲ. ಆದರೂ ಅರಗ ಜ್ಞಾನೇಂದ್ರ ಅವರು ತಾನು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದಕ್ಷ ಗೃಹ ಸಚಿವ ಎಂದು ಹೇಳಿಕೊಳ್ಳುತ್ತಾರೆ ಎಂದರು.


ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬುರವರು ಮಾತನಾಡಿ ನಿನ್ನೆ ವಿರೂಪಾಕ್ಷಪ್ಪ ಅವರ ಮಗನ ಬಳಿ ಸಿಕ್ಕಿದ್ದು 40 ಲಕ್ಷ, ನಂತರ ಅದು 7.50 ಕೋರ್ಟಿಗೆ ಹೋಗಿದೆ. ಈ ಸರ್ಕಾರಕ್ಕೂ 40% ಗೆ ಬಹಳ ಅವಿನಾಭಾವ ಸಂಬಂಧವಿದೆ. ಬಿಜೆಪಿ ಸಚಿವರು ಶಾಸಕರು, ಸಿಎಂಗೆ ಬಹಳ ಉತ್ತಮ ,ಸಂಬಂಧವಿದೆ. ನಿನ್ನೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಶಾಸಕರ ಮಗನನ್ನು ಬಂಧಿಸಿದ್ದಾರೆ. ಅವರ ಕಚೇರಿ ಹಾಗೂ ಮನೆಯಲ್ಲಿ ದಾಳಿ ಮಾಡಿ ಹಣ ಜಪ್ತಿ ಮಾಡಿದ್ದು, ಶಾಸಕರ ರಕ್ಷಣೆಗೆ ಸಿಎಂ, ಗೃಹ ಸಚಿವರು, ಸಚಿವ ನಿರಾಣಿ ಅವರು ರಕ್ಷಣೆಗೆ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಸೋಪ್ ಮತ್ತು ಡಿಟರ್ಜೆಂಡ್ ಕಾರ್ಪೋರೇಷನ್ ಬೃಹತ್ ಕೈಗಾರಿಕಾ ಸಚಿವಾಲಯ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಶಾಸಕರು ಪ್ರಮುಖ ಆರೋಪಿಯಾಗಿದ್ದು, ಇವರು ಪುತ್ರನ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಈ ಅಕ್ರಮ ಹಣ ಶಾಸಕರ ಮನೆಯಲ್ಲಿ ಸಿಕ್ಕಿದೆ. ಹೀಗಾಗಿ ಈ ಪ್ರಕರಣದಲ್ಲಿ ಶಾಸಕರು ಎ1 ಆಗಿದ್ದು, ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಶಾಸಕರನ್ನು ಎ1 ಆಗಿ ಮಾಡಬೇಕು ಎಂದು ಕಾಂಗ್ರೆಸ್ ಮನವಿ ಮಾಡುತ್ತದೆ ಎಂದರು.

ಅನೇಕ ಪ್ರಕರಣಗಳಲ್ಲಿ ಕ್ಲೀನ್‌ಚೀಟ್‌ ಪಡೆದಿದ್ದೇವೆ : ಲೋಕಾಯುಕ್ತ ಸಂಸಅಥೆ ಮುಚ್ಚಿಹಾಕಿದ್ದು ಕಾಂಗ್ರೆಸ್ ಎಂಬ ಸಿಎಂ ಮಾತಿನ ಬಗ್ಗೆ ಕೇಳಿದಾಗ, ‘ಅಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ ಅಥವಾ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಡ್ವಕೇಟ್ ಜೆನರಲ್ ಎಸಿಬಿ ಪರವಾಗಿ ವಾದ ಮಾಡಿದ್ದು ಮರೆತಿದ್ದಾರಾ? ಅವರು ತಮ್ಮ ವಾದದಲ್ಲಿ ಎಸಿಬಿ ಉತ್ತಮ ಸಂಸ್ಥೆ ಇದರ ಆರಂಭದಿಂದ ಲೋಕಾಯುಕ್ತ ಸಂಸ್ಥೆಗೆ ತೊಂದರೆ ಆಗಿಲ್ಲ, ಬಹಳ ರಾಜ್ಯಗಳಲ್ಲಿ ಈ ಎರಡು ಸಂ,ಸ್ಥೆಗಳು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೂ ಈ ರೀತಿ ಎರಡು ನಾಲಿಗೆ ಯಾಕೆ? ಯಾವುದೇ ಏಜೆನ್ಸಿ ದಾಳಿ ಮಾಡಿದರೂ ಸಿಕ್ಕಿಬೀಳುತ್ತಿರುವುದು ಕೇವಲ ಬಿಜೆಪಿಗರು ಮಾತ್ರವೇ?  ಕಾಂಗ್ರೆಸ್ ನಾಯಕರು ಸಿಕ್ಕಿಬೀಳುತ್ತಾರೆ ಎನ್ನುವುದಾದರೆ ಎಲ್ಲ ಪ್ರಕರಣ ನ್ಯಾಯಾಂಗ ತನಿಖೆ ನೀಡಿ. ಕಾಂಗ್ರೆಸ್ ನಾಯಕರ ರಕ್ಷಣೆ ಯಾಕೆ ಮಾಡುತ್ತಿದ್ದಾರೆ?  ನಾವು ವಿರೋಧ ಪಕ್ಷವಾಗಿ ನಮ್ಮ ಗಮನಕ್ಕೆ ಬಂದ ವಿಚಾರ ಪ್ರಸ್ತಾಪಿಸಿದ್ದೇವೆ. ಇವರು ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತಿದ್ದರೂ. ಇವರು ಹೇಳಿದ ಪ್ರಕರಣವನ್ನು ಸಿಬಿಐಗೆ ನೀಡಿದ್ದೇವೆ. ನಾವು ಅನೇಕ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದೇವೆ’ ಎಂದರು.

ಶಾಸಕರ ಮನೆಯಲ್ಲಿ ಸಿಕ್ಕ ಹಣ ಯಾರದು ಎಂಬ ದಾಖಲೆ ಕೇಳಿದ ಕಾನೂನು ಸಚಿವರ ಬಗ್ಗೆ ಕೇಳಿದಾಗ ‘ಹಣ ಸಿಕ್ಕ ಮೇಲೂ ಇವರು ದಾಖಲೆ ನೀಡುತ್ತಿದ್ದಾರಾ? ಲೋಕಾಯುಕ್ತ ದಾಳಿ ಬಗ್ಗೆ ಕಾನೂನು ಸಚಿವರು ದಾಖಲೆ ಕೇಳುತ್ತಿದ್ದಾರೆಯೇ? ಈ ಹಣ ಬಿಜೆಪಿ ಶಾಸಕರ ಮನೆಯಲ್ಲಿ ಸಿಕ್ಕ ನಂತರ ಈ ಹಣ ಯಾರದು ಎಂಬ ದಾಖಲೆ ಎಲ್ಲಿಂದ ನೀಡಬೇಕು? ಕಾನೂನು ಸಚಿವರು ನಮಗಿಂತ ಪ್ರಬುದ್ಧರು ಅವರನ್ನೇ ಈ ಬಗ್ಗೆ ಕೇಳಬೇಕು’ ಎಂದು ಟೀಕಿಸಿದರು.

Donate Janashakthi Media

Leave a Reply

Your email address will not be published. Required fields are marked *