ರಾಹುಲ್, ಪ್ರಿಯಾಂಕಾ ವಿರೋಧದ ನಡುವೆಯೂ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಕ್ಷಣಕಾಲ ಒಪ್ಪಿಗೆ; ಬಳಿಕ ಮನಸ್ಸು ಬದಲಿಸಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ ಪ್ರಸಂಗವನ್ನು ಆತ್ಮಕಥನದಲ್ಲಿ ಬಿಚ್ಚಿಟ್ಟ ಸೋನಿಯಾ
ನವದೆಹಲಿ: 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಕೂಟ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ನಿರಾಕರಿಸುವ ಸೋನಿಯಾ ಗಾಂಧಿ ಅವರ ನಿರ್ಧಾರದ ಹಿಂದೆ ನಡೆದಿದ್ದ ಭಾವನಾತ್ಮಕ ಸಂಘರ್ಷ ಮತ್ತು ರಾಜಕೀಯ ಒತ್ತಡದ ಸಂಗತಿಗಳು ಇದೀಗ ಬಹಿರಂಗವಾಗಿವೆ. ಆರಂಭದಲ್ಲಿ ಪ್ರಧಾನಿ ಹುದ್ದೆ ವಹಿಸಿಕೊಳ್ಳಲು ಖಂಡಿತ ಒಪ್ಪುವುದಿಲ್ಲ ಎಂದಿದ್ದ ಸೋನಿಯಾ ಗಾಂಧಿ, ಮಿತ್ರಪಕ್ಷಗಳ ನಾಯಕರ ಒತ್ತಾಯಕ್ಕೆ ಒಂದು ಹಂತದಲ್ಲಿ ‘ಸರಿ’ (ಥೀಕ್ ಹೈ) ಎಂದಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ ಪ್ರಧಾನಿ ಹುದ್ದೆಯನ್ನು ತಿರಸ್ಕರಿಸಿದ್ದರು. ಈ ಸಂಪೂರ್ಣ ಘಟನೆಯನ್ನು ತಮ್ಮ ಆತ್ಮಕಥನ ‘Belonging: A Journey of Love’ನಲ್ಲಿ ಅವರು ವಿವರಿಸಿದ್ದಾರೆ. ಪ್ರಧಾನಿ
ಮಂಗಳವಾರ ಬಿಡುಗಡೆಯಾದ ಈ ಆತ್ಮಕಥನದಲ್ಲಿ, 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸುವ ಮುನ್ನ ತಮ್ಮ ಮನಸ್ಸಿನಲ್ಲಿ ನಡೆದಿದ್ದ ಸಂಘರ್ಷವನ್ನು ಮೊದಲ ಬಾರಿಗೆ ವಿವರವಾಗಿ ಹಂಚಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಮಿತ್ರಪಕ್ಷಗಳ ನಿರೀಕ್ಷೆಗಳನ್ನು ಈಡೇರಿಸಬೇಕೆಂಬ ಹೊಣೆಗಾರಿಕೆ ಒಂದೆಡೆಯಾದರೆ, ಪ್ರಧಾನಿ ಹುದ್ದೆ ಸ್ವೀಕರಿಸುವುದಕ್ಕೆ ತಮ್ಮ ಕುಟುಂಬದ ವಿರೋಧ ಮತ್ತೊಂದೆಡೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಪ್ರಧಾನಿಯಾಗುವುದು ಬೇಡ ಎಂದಿದ್ದ ಮಕ್ಕಳು
2004ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪ್ರಧಾನಿ ಹುದ್ದೆಯ ಸಾಧ್ಯತೆ ಕುರಿತು ಚರ್ಚಿಸಿದ್ದರು. ಆಗ ಮಕ್ಕಳಲ್ಲಿ ಒಬ್ಬರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆ ಸ್ವೀಕರಿಸುತ್ತೀರಾ ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಸೋನಿಯಾ ಗಾಂಧಿ, ‘ಖಂಡಿತ ಇಲ್ಲ’ ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಮತ್ತೆ ಖಚಿತವೇ ಎಂದು ಮಕ್ಕಳು ಕೇಳಿದಾಗ, ತಮ್ಮ ನಿರ್ಧಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದರು.
ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ತಾಯಿ ಪ್ರಧಾನಿಯಾಗುವುದನ್ನು ಬಯಸಿರಲಿಲ್ಲ. ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಮತ್ತು ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಆಘಾತವನ್ನು ಇಬ್ಬರೂ ಬಾಲ್ಯದಿಂದಲೇ ಅನುಭವಿಸಿದ್ದರು. ಪ್ರಧಾನಿ ಹುದ್ದೆಯೊಂದಿಗೆ ತಮ್ಮ ತಾಯಿಯ ಜೀವಕ್ಕೆ ಅಪಾಯದ ಸಾಧ್ಯತೆಯನ್ನೂ ಅವರು ತಳುಕು ಹಾಕಿಕೊಂಡಿದ್ದರು. ಹೀಗಾಗಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ಸ್ವೀಕರಿಸಬಾರದು ಎಂಬುದು ಮಕ್ಕಳ ನಿಲುವಾಗಿತ್ತು. ಪ್ರಧಾನಿ
ಇದನ್ನೂ ಓದಿ : ನಿಮಾನ್ಸ್ನಲ್ಲಿ ತೃತೀಯ ಲಿಂಗಿಗಳ ಬಗ್ಗೆ ತಾರತಮ್ಯ: ಅನುಚಿತವಾಗಿ ವರ್ತಿಸಿದ ವೈದ್ಯರ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಮಿತ್ರಪಕ್ಷಗಳ ಒತ್ತಡಕ್ಕೆ ಕ್ಷಣಕಾಲ ಒಪ್ಪಿಗೆ
2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಹೊರಹೊಮ್ಮಿ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಧಾನಿ ಯಾರು ಎಂಬ ಪ್ರಶ್ನೆ ಎದುರಾದಾಗ ಮಿತ್ರಪಕ್ಷಗಳ ನಾಯಕರು ಸೋನಿಯಾ ಗಾಂಧಿ ಅವರೇ ಆ ಹುದ್ದೆ ವಹಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ತಮ್ಮ 10 ಜನಪಥ್ ನಿವಾಸದಲ್ಲಿ ರಾಜೀವ್ ಗಾಂಧಿ ಅವರ ಹೆಸರಿನ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ಮಿತ್ರಪಕ್ಷಗಳ ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಸೋನಿಯಾ ಅವರನ್ನು ಒತ್ತಾಯಿಸಿದರು. ಆದರೆ ಅವರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದಾಗ ನಾಯಕರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.
‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’, ‘ನೀವು ಈ ನಿರ್ಧಾರ ತೆಗೆದುಕೊಳ್ಳುವಂತಿಲ್ಲ’ ಎಂದು ಕೆಲ ನಾಯಕರು ಒತ್ತಾಯಿಸಿದರು. ‘ನಿಮ್ಮ ನಿರಾಕರಣೆಯನ್ನು ನಾವು ಒಪ್ಪುವುದಿಲ್ಲ’ ಎಂಬ ಧಾಟಿಯಲ್ಲಿ ಮಾತುಕತೆ ಮುಂದುವರಿಯಿತು.
ಈ ಬೆಳವಣಿಗೆಯಿಂದ ವಿಚಲಿತರಾದ ಸೋನಿಯಾ ಗಾಂಧಿ, ಕೊನೆಗೆ ಬಹಳ ಮೆಲ್ಲಗೆ ‘ಥೀಕ್ ಹೈ’ (ಸರಿ) ಎಂದು ಹೇಳಿದ್ದರು. ಅವರು ಮಾತು ಮುಗಿಸುವ ಮೊದಲೇ ಮಿತ್ರಪಕ್ಷಗಳ ನಾಯಕರು ಅಭಿನಂದನೆ ಸಲ್ಲಿಸಲು ಆರಂಭಿಸಿದ್ದರು ಎಂದು ಆತ್ಮಕಥನದಲ್ಲಿ ವಿವರಿಸಿದ್ದಾರೆ.
ರಾಹುಲ್, ಪ್ರಿಯಾಂಕಾ ತೀವ್ರ ವಿರೋಧ
ಸಭೆಯ ಹೊರಗೆ ಕಾಯುತ್ತಿದ್ದ ಪ್ರಿಯಾಂಕಾ ಗಾಂಧಿ ಈ ಬೆಳವಣಿಗೆಯನ್ನು ತಿಳಿದು ತಕ್ಷಣ ರಾಹುಲ್ ಗಾಂಧಿ ಅವರನ್ನು ಹುಡುಕಿಕೊಂಡು ಹೋಗಿದ್ದರು. ಸೋನಿಯಾ ಪ್ರಧಾನಿ ಹುದ್ದೆ ಒಪ್ಪಿಕೊಂಡಿದ್ದಾರೆ ಎಂಬ ವಿಷಯ ತಿಳಿದ ರಾಹುಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
‘ನೀವು ಒಪ್ಪಿಕೊಂಡಿದ್ದೀರಾ?’ ಎಂದು ರಾಹುಲ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸೋನಿಯಾ, ‘ಅವರು ನನ್ನ ಮಾತು ಕೇಳಲಿಲ್ಲ. ನನಗೆ ಈ ಹುದ್ದೆ ಬೇಡವೆಂದು ನಿನಗೆ ಗೊತ್ತಿದೆ. ನನ್ನ ಮೇಲೆ ಒತ್ತಡ ಹೇರಿದರು’ ಎಂದು ಹೇಳಿದ್ದರು.
‘ನಿಮ್ಮ ಮೇಲೆ ಒತ್ತಡ ಹೇರಿದರಾ? ಹಾಗಾದರೆ ನಮ್ಮ ಬಗ್ಗೆ ಏನು?’ ಎಂದು ರಾಹುಲ್ ಪ್ರತಿಕ್ರಿಯಿಸಿದ್ದರು. ಪ್ರಿಯಾಂಕಾ ಕೂಡ ತಾಯಿಗೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವಂತೆ ಸಲಹೆ ನೀಡಿದ್ದರು. ಯಾರ ಒತ್ತಡಕ್ಕೂ ಮಣಿಯದೆ ನೀವು ಮೊದಲಿನಿಂದಲೂ ಹೊಂದಿದ್ದ ನಿಲುವಿನಂತೆ ನಡೆದುಕೊಳ್ಳಿ. ನಾವಿಬ್ಬರೂ ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದ್ದರು.
ರಾತ್ರಿಯ ಆತ್ಮಾವಲೋಕನ, ಕೊನೆಗೆ ಮನಮೋಹನ್ ಸಿಂಗ್ ಆಯ್ಕೆ
ಮಕ್ಕಳೊಂದಿಗಿನ ಮಾತುಕತೆಯ ಬಳಿಕ ಸೋನಿಯಾ ಗಾಂಧಿ ತಮ್ಮ ಕೊಠಡಿಗೆ ತೆರಳಿ ದೀರ್ಘವಾಗಿ ಆತ್ಮಾವಲೋಕನ ನಡೆಸಿದ್ದರು. ಒಂದು ಕಡೆ ಇಟಲಿಯಲ್ಲಿ ಜನಿಸಿ ಬೆಳೆದ ತಾನು ಒಂದು ಶತಕೋಟಿಗೂ ಹೆಚ್ಚು ಜನರಿರುವ ಭಾರತದ ಪ್ರಧಾನಿಯಾಗುವುದು ಸರಿಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಮತ್ತೊಂದೆಡೆ, ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲೇ ಕಳೆದಿರುವುದರಿಂದ ಮತ್ತು ದೇಶದ ಜನರು ಕಷ್ಟದ ಸಮಯದಲ್ಲಿ ತಮ್ಮನ್ನು ಸ್ವೀಕರಿಸಿ ಬೆಂಬಲಿಸಿರುವುದರಿಂದ ಅವರಿಗೆ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸರಿಯಲ್ಲ ಎಂಬ ಭಾವನೆಯೂ ಇತ್ತು.
ಈ ಎರಡು ಆಲೋಚನೆಗಳ ನಡುವಿನ ಸಂಘರ್ಷದ ಬಳಿಕ ಕೊನೆಗೆ ತಮ್ಮ ಅಂತರಾತ್ಮದ ಧ್ವನಿಗೆ ಬದ್ಧರಾಗಿರಲು ನಿರ್ಧರಿಸಿದರು. ಕೆಲವೇ ಗಂಟೆಗಳ ನಂತರ ರಾಹುಲ್ ಗಾಂಧಿ ಅವರ ಕೊಠಡಿಗೆ ತೆರಳಿ, ಪ್ರಧಾನಿ ಹುದ್ದೆ ಸ್ವೀಕರಿಸದಿರಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಇದಕ್ಕೆ ರಾಹುಲ್ ಕೂಡ ಸಂತಸ ವ್ಯಕ್ತಪಡಿಸಿ, ಇದು ಸರಿಯಾದ ನಿರ್ಧಾರ ಎಂದು ಬೆಂಬಲಿಸಿದ್ದರು.
ನಂತರ ಸಂಸತ್ತಿನಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಹಲವು ನಾಯಕರು ಮನವಿ ಮಾಡಿದರೂ ಸೋನಿಯಾ ಗಾಂಧಿ ತಮ್ಮ ನಿರ್ಧಾರ ಬದಲಿಸಲಿಲ್ಲ. ತಮ್ಮ ಅಂತರಾತ್ಮದ ಧ್ವನಿಯಂತೆ ಪ್ರಧಾನಿ ಹುದ್ದೆಯನ್ನು ವಿನಮ್ರವಾಗಿ ನಿರಾಕರಿಸುತ್ತಿರುವುದಾಗಿ ಘೋಷಿಸಿದರು. ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕತ್ವದಿಂದ ಹಿಂದೆ ಸರಿದು, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದರು.
ಈ ನಿರ್ಧಾರ ಪ್ರಕಟವಾದಾಗ ಸಂಸತ್ತಿನಲ್ಲಿ ಚಪ್ಪಾಳೆ ಮತ್ತು ಘೋಷಣೆಗಳು ಮೊಳಗಿದ್ದವು. ತಮ್ಮ ಮಕ್ಕಳು ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಸ್ಮರಿಸಿದ್ದಾರೆ. ಪ್ರಧಾನಿ ಹುದ್ದೆಯನ್ನು ನಿರಾಕರಿಸುವ ತಮ್ಮ ನಿರ್ಧಾರದ ಹಿಂದಿನ ಕೌಟುಂಬಿಕ ಆತಂಕ, ಮಿತ್ರಪಕ್ಷಗಳ ಒತ್ತಡ ಮತ್ತು ವೈಯಕ್ತಿಕ ಆತ್ಮಾವಲೋಕನದ ಸಂಪೂರ್ಣ ಅನುಭವವನ್ನು ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಇದನ್ನೂ ನೋಡಿ : ಬೆಲೆ ಏರಿಕೆ ಬರೆ: ಕಾಂಗ್ರೆಸ್ ಸರ್ಕಾರಕ್ಕೆ CPI(M) ಖಡಕ್ ಎಚ್ಚರಿಕೆ! Janashakthi Media
