ಬೆಂಗಳೂರು: ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಹಾಗು ಅಕ್ರಮ ನಿರ್ಮಾಣ ಕುಸಿದು ಇದುವರೆಗೆ 9 ಅಮಾಯಕ ವಲಸೆ ಕಾರ್ಮಿಕರು ಜೀವ ಕಳೆದುಕೊಂಡಿರುವುದು ಹಾಗು ಹತ್ತಕ್ಕೂ ಅಧಿಕ ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅನಧಿಕೃತ ಹಾಗು ಅಕ್ರಮ ಕಟ್ಟಡ ನಿರ್ಮಾಣ ನಿಗ್ರಹಿಸಲು ಮತ್ತು ಕಟ್ಟಡ ಕಾರ್ಮಿಕರಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಒತ್ತಾಯಿಸುತ್ತದೆ ಎಂದು ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ.
ಬದಕಲು ಕೂಲಿ ಅರಿಸಿ ಬಂದಿದ್ದ ಬಿಹಾರದ ಐವರು, ಉತ್ತರಪ್ರದೇಶದ ಒಬ್ಬರು ಹಾಗೂ ಕರ್ನಾಟಕ ತಮಿಳುನಾಡಿನ ತಲಾ ಎರಡು ಜನ ಬಡ ಕಾರ್ಮಿಕರು ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ.
ನಮ್ಮ ರಾಜ್ಯದ ಭ್ರಷ್ಟ ರಾಜಕೀಯ ಹಾಗೂ ಅಧಿಕಾರ ಶಾಹಿಯ ಶಾಮೀಲಾತಿಯ ಕಾರಣದಿಂದ ಇಂತಹ ನಿರ್ಮಾಣಗಳು ಹಾಗು ಕಾರ್ಮಿಕರ ಕೊಲೆಗಳು ಆಗಿಂದಾಗ್ಗೆ ನಡೆಯುತ್ತಿರುವುದು ವೇದ್ಯವಿದೆ. ಈ ದುರ್ಘಟನೆಯಲ್ಲೂ ಕೂಡಾ, ನಿರ್ಮಾಣವಾಗುತ್ತಿರುವ ಕಟ್ಟಡವು ಅನಧಿಕೃತವಾದುದಾಗಿದೆ. ಕೇವಲ ಮೂರು ಮಹಡಿಗಳ ಸಾಮಾರ್ಥ್ಯ ಹೊಂದಿರುವ ತಳಹದಿಯ ಮೇಲೆ ಆರು ಮಹಡಿಗಳನ್ನು ನಿರ್ಮಿಸಿರುವುದು ಹಾಗೂ ಅದಕ್ಕೆ ಬೇಕಾದ ಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳನ್ನು ಬಳಸದೇ ನಿರ್ಮಾಣ ಮಾಡುತ್ತಿರುವುದು ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮೇಲ್ಸೇತುವೆ ತಕ್ಷಣ ಮುಗಿಸಿ, ಸರ್ವೀಸ್ ರಸ್ತೆ ದುರಸ್ಥಿಗೆ ಸಿಪಿಐ(ಎಂ) ಆಗ್ರಹ
ಬಿಬಿಎಂಪಿ ಅಧಿಕಾರಿಗಳೂ ಕಟ್ಟಡದ ಮಾಲೀಕರಿಗೆ ಮೂರುಬಾರಿ ನೋಟೀಸ್ ನೀಡಿದ್ದರೂ, ಅದಕ್ಕೆ ಅವರು ಸೂಕ್ತವಾಗಿ ಸ್ಪಂದಿಸದೆ, ಬೇಜವಾಬ್ದಾರಿಯಿಂದಲೆ, ಕಳಪೆ ನಿರ್ಮಾಣವನ್ನು ಮುಂದುವರೆಸಿದ್ದೂ ಈ ದುರ್ಘಟನೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಇದಲ್ಲದೆ, ಬಿಬಿಎಂಪಿಯಲ್ಲಿ ಮತ್ತು ಬೆಂಗಳೂರಿನ ಹೊರ ಪ್ರದೇಶಗಳಲ್ಲಿ ಇಂತಹ ಅನಧಿಕೃತ ಸಾವಿರಾರು ಕಟ್ಟಡ ನಿರ್ಮಾಣಗಳು ಯಾವುದೇ ನಿಯಂತ್ರಣವಿಲ್ಲದೆ ಮುನ್ನಡೆದಿವೆ. ಇದಕ್ಕೆ, ಇಂತಹ ಅನಧಿಕೃತ ಬಡಾವಣೆಗಳ ವಾರಸುದಾರರು, ರಿಯಲ್ ಎಸ್ಟೇಟ್ ಭೂಮಾಪಿಯಾಗಳು ಮತ್ತು ಭ್ರಷ್ಠ ರಾಜಕಾರಣಿಗಳು ಹಾಗೂ ಅವರ ಜೊತೆ ಶಾಮೀಲಾದ ಅಧಿಕಾರಿಗಳ ಕುಮ್ಮಕ್ಕು ಇದೆ. ಇಂತಹ ದುಷ್ಠಕೂಟದಿಂದಲೆ, ಭೂ ಕಬಳಿಕೆ, ಅಕ್ರಮ ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಬಡ ಕಾರ್ಮಿಕರ ಸಾವುಗಳು ಮತ್ತು ವ್ಯಾಪಕ ಭ್ರಷ್ಠಾಚಾರದ ಪ್ರಕರಣಗಳು ಬೆಳೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಈ ಕೆಳಗಿನ ಹಕ್ಕೊತ್ತಾಯಗಳನ್ನು ಜಾರಿ ಮಾಡಬೇಕು ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
1)ಈ ಕೂಡಲೆ ಒಟ್ಟು ಬಿಬಿಎಂಪಿ ವ್ಯಾಪ್ತಿಯ ನಿರ್ಮಾಣ ಹಂತಹ ಚಟುವಟಿಕೆಯಲ್ಲಿ ನಡೆದಿರುವ ಅನಧಿಕೃತತೆ ಮತ್ತು ಅಕ್ರಮವನ್ನು ನ್ಯಾಯಾಂಗ ತನಿಖೆಗೊಳಪಡಿಸಿ ಅಗತ್ಯ ಬಿಗಿ ಕ್ರಮವಹಿಸಬೇಕು,
2) ಈ ನಿರ್ಮಾಣ ಕುಸಿತದಲ್ಲಿ ಸಾವನಪ್ಪಿರುವ ಅಮಾಯಕ ಕುಟುಂಬಗಳಿಗೆ ತಲಾ ಕನಿಷ್ಟ 25 ಲಕ್ಷ ರೂ ಪರಿಹಾರ ನೀಡಬೇಕು. ಅವರ ಮಕ್ಕಳ ಉಚಿತ ವಿದ್ಯಾಭ್ಯಾಸ ಹಾಗು ಉದ್ಯೋಗ ನೀಡಿಕೆಯ ಜವಾಬ್ದಾರಿ ಹೊರಬೇಕು.
3) ತೀವ್ರವಾಗಿ ಗಾಯಗೊಂಡವರಿಗೆ ಕನಿಷ್ಟ10 ಲಕ್ಷ ಹಾಗೂ ಅವರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸರ್ಕಾರ ಮುಂದಾಗಬೇಕು. ಅವರುಗಳಿಗೆ ತಲಾ ಕನಿಷ್ಢ 7000 ರೂ ಪಿಂಚಣಿ ನೀಡಬೇಕು
4) ಈ ಸಾವುಗಳಿಗೆ ಕಾರಣವಾದ ಮಾಲೀಕ,ಗುತ್ತಿಗೆ ದಾರರನ್ನು ಮತ್ತು ಭ್ರಷ್ಠ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕು ಹಾಗು ಅವರ ಮತ್ತು ಶಾಮೀಲಾದ ಭ್ರಷ್ಠ ಅಧಿಕಾರಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
5) ಈ ಅನಧಿಕೃತ ನಿರ್ಮಾಣಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಮತ್ತು ಅಂತಹ ಸ್ಥಳಗಳಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲದೆ ಅಮಾನವೀಯವಾಗಿ ಹಾಗೂ ಗುಲಾಮರಂತೆ ಜೀವನಸಾಗಿಸುತ್ತಿರುವ ಶ್ರಮಜೀವಿಗಳಿಗೆ ಮೂಲಭೂತ ಸೌಲಭ್ಯಗಳು ಹಾಗು ಸುರಕ್ಷತೆ ಒದಗಿಸದ ಮಾಲೀಕರು ಹಾಗೂ ಸಂಬಂದಿಸಿದ ಇಲಾಖೆಗಳ ಮುಖ್ಯಸ್ಥರನ್ನು ಬಾಧ್ಯಸ್ಥರನ್ನಾಗಿಸಬೇಕು ಹಾಗೂ ವಲಸೆ ಕಾರ್ಮಿಕರು ಸೇರಿ ನೈಜ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸದಸ್ಯತ್ವ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು.
ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ Janashakthi Media