15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

ನವದೆಹಲಿ : ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್‌ ಸಿನ್ಹಾರನ್ನು ಭಾರೀ ಅಂತರದಿಂದ ಸೋಲಿಸಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ದ್ರೌಪದಿ ಮುರ್ಮು ಅವರಿಗೆ 5,121 ಮತಗಳು ಬಿದ್ದಿವೆ. ಈ ಮತಗಳ ಒಟ್ಟು ಮೌಲ್ಯ 5,77,777 ಆಗಿದೆ. ಇನ್ನು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ 1,058 ಮತಗಳು ಬಿದ್ದಿದ್ದು ಇದರ ಮೌಲ್ಯ 2,61,062 ಆಗಿದೆ.

ಹಾಲಿ ಚಲಾವಣೆಯಾಗಿರುವ ಮತಗಳ ಪೈಕಿ 15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಪಿಸಿ ಮೋದಿ ತಿಳಿಸಿದ್ದಾರೆ. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದೆ.

ದ್ರೌಪದಿ ಮುರ್ಮು ರಾಜಕೀಯ ಹಾದಿ : ಒಬ್ಬ ಬುಡಕಟ್ಟು ಜನಾಂಗದ ಸ್ಥಳೀಯ ನಾಯಕಿಯಾಗಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿ ಜಾರ್ಖಂಡ್ ನ ರಾಜ್ಯಪಾಲ ಹುದ್ದೆಗೇರಿ ಇದೀಗ ರಾಷ್ಟ್ರಪತಿ ಆಗುವವರೆಗೂ ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ಬಂದು ನಿಂತಿದೆ.

ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್ ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.

ಒಡಿಶಾದ ಹಿಂದುಳಿದ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಡ ಬುಡಕಟ್ಟು ಕುಟುಂಬದಿಂದ ಬಂದ ದ್ರೌಪದಿ ಮುರ್ಮು ಸವಾಲುಗಳ ನಡುವೆಯೂ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮಾಡಿದ್ದರು.

ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ : ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ರಾಷ್ಟ್ರಪತಿ ಚುನಾವಣೆ ಸೋಲಿನ ಬೆನ್ನಲೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದರು.

2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ ದ್ರೌಪದಿ ಮುರ್ಮು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಾರತದ 15ನೇ ರಾಷ್ಟ್ರಪತಿಯಾಗಿ ಅವರು ಭಯಪಡೆದೆ ಸಂವಿಧಾನದ ಪಾಲಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಜವಾಗಿ, ಪ್ರತಿಯೊಬ್ಬ ಭಾರತೀಯನೂ ಇದನ್ನೇ ಆಶಿಸುತ್ತಾರೆ. ನಾನು ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಈ ಚುನಾವಣೆಯಲ್ಲಿ ನನ್ನನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ವಿರೋಧ ಪಕ್ಷದ ರಾಜಕೀಯ ಪಕ್ಷಗಳ ನಾಯಕರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ನನಗೆ ಮತ ಹಾಕಿದ ಎಲೆಕ್ಟೋರಲ್ ಕಾಲೇಜಿನ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *