ನಿರುದ್ಯೋಗ ಮತ್ತು ಹಣದುಬ್ಬರ ವಿಷಯಗಳು ಲೋಕಸಭೆ ಚುನಾವಣೆ 2024ರಲ್ಲಿ ಪ್ರಮುಖವಾಗಿ ಪ್ರತಿಧ್ವನಿಸುತ್ತಿವೆ. ಬೆಲೆ ಏರಿಕೆ ಮತ್ತು ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಬಗ್ಗೆ ಅರ್ಧಕ್ಕಿಂತ ಹೆಚ್ಚು ಜನರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸಿಎಸ್‌ಡಿಎಸ್-ಲೋಕನೀತಿ ಚುನಾವಣಾ ಪೂರ್ವ ಸಮೀಕ್ಷೆಯು ಹೇಳಿದೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದೂ ಶೇಕಡಾ 55ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆ
ಲೋಕಸಭೆ ಚುನಾವಣೆ ಪ್ರಕ್ರಿಯೆ ಈಗಾಗಲೇ ಭಾರತದಲ್ಲಿ ಆರಂಭವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮತ ಚಲಾಯಿಸುವ ವೇಳೆ ಬೆಲೆ ಏರಿಕೆ ಮತ್ತು ಉದ್ಯೋಗಕ್ಕೆ ಮತದಾರರು ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಏಳು ಹಂತದ ಲೋಕಸಭಾ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗಲಿದ್ದು, ಜೂನ್ 1 ರವರೆಗೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ಪ್ರತಿಪಕ್ಷ ‘ಇಂಡಿಯಾ’ ಬಣವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ಕೊನೆಗಾಣಿಸಲು ಸರ್ವಪ್ರಯತ್ನ ನಡೆಸುತ್ತಿದೆ.
ನಿರುದ್ಯೋಗ ಏರಿಕೆ
ಭಾರತದ ಸಾರ್ವತ್ರಿಕ ಚುನಾವಣೆ 2024ರಲ್ಲಿ ಪ್ರಮುಖವಾಗಿ ನಿರುದ್ಯೋಗ ಮತ್ತು ಹಣದುಬ್ಬರ ವಿಷಯಗಳು ಪ್ರತಿಧ್ವನಿಸುತ್ತಿವೆ. ಸಿಎಸ್‌ಡಿಎಸ್-ಲೋಕನೀತಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಬೆಲೆ ಏರಿಕೆ ಮತ್ತು ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯಿಸಿದವರಲ್ಲಿ ಶೇ. 62ರಷ್ಟು ಜನರು ಉದ್ಯೋಗವನ್ನು ಪಡೆಯುವುದು ಹೆಚ್ಚು ಕಷ್ಟಕರ ಎಂದು ಹೇಳಿದ್ದರೆ, ಶೇ. 12ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯುವುದು ಸುಲಭ ಎಂದು ಪ್ರತಿಕ್ರಿಯಿಸಿದ್ದಾರೆ.
ಸಮೀಕ್ಷೆಯ ಪ್ರಕಾರ ಶೇ. 67ರಷ್ಟು ಮುಸ್ಲಿಮರು ಉದ್ಯೋಗವನ್ನು ಪಡೆಯುವುದು ಕಷ್ಟ ಎಂದು ಹೇಳಿದ್ದರೆ, ಹಿಂದೂಗಳಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಶೇ. 63 ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಶೇ. 59ರಷ್ಟು ಜನರು ಸಹ ಇದೇ ಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಮೋದಿ ಫೋಟೋ ಬಿಟ್ಟು ಯಡಿಯೂರಪ್ಪ ಚುನಾವಣೆ ಎದುರಿಸಲೀ -ಕೆ.ಎಸ್.ಈಶ್ವರಪ್ಪ ಛಾಲೆಂಜ್
ಮೇಲ್ಜಾತಿಯಲ್ಲಿ ಶೇ. 57ರಷ್ಟು ಜನರು ಉದ್ಯೋಗಗಳನ್ನು ಪಡೆಯುವುದು ಕಷ್ಟ ಎಂದು ಹೇಳಿದ್ದರೆ, ಶೇ. 17ರಷ್ಟು ಜನರು ಉದ್ಯೋಗವನ್ನು ಹುಡುಕುವುದು ಸುಲಭ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ ಬಹುಪಾಲು ಮತದಾರರು ಬೆಲೆ ಏರಿಕೆಯು ತಮ್ಮ ಜೇಬಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಶೇ. 71ರಷ್ಟು ಜನರು ಸರಕುಗಳ ಬೆಲೆಗಳು ಹೆಚ್ಚಾಗಿದೆ ಎಂದು ಹೇಳಿದ್ದರೆ, ಶೇ. 76ರಷ್ಟು ಬಡವರು ಹಣದುಬ್ಬರ ತಮಗೆ ಹೊಡೆತ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಇದೇ ಪ್ರಮಾಣದ ಮುಸ್ಲಿಮರೂ ಇಂಥಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೀವನದ ಗುಣಮಟ್ಟದ ಬಗೆಗಿನ ಪ್ರಶ್ನೆಗೆ ಸುಮಾರು ಶೇ. 48ರಷ್ಟು ಜನರು ಉತ್ತಮವಾಗಿದೆ ಎಂದು ಹೇಳಿದ್ದರೆ, ಶೇ. 35ರಷ್ಟು ಜನರು ಕಳೆದ ಐದು ವರ್ಷಗಳಲ್ಲಿ ಜನ-ಜೀವನ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಕೇವಲ ಶೇ. 22ರಷ್ಟು ಜನರು ಮಾತ್ರ ತಮ್ಮ ಮನೆಯ ಆದಾಯದಿಂದ ಹಣವನ್ನು ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಲೋಕನೀತಿ-ಸಿಎಸ್‌ಡಿಎಸ್ 19 ರಾಜ್ಯಗಳ 10,019 ಜನರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.
ಇದನ್ನು ನೋಡಿ : ಲೋಕಸಭೆ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ನಿರುದ್ಯೋಗ ಮತ್ತು ಹಣದುಬ್ಬರ ವಿಷಯಗಳು