ಉಡುಪಿ: ಪ್ರವಾಸಕ್ಕೆ ಬಂದಿದ್ದ ಮುಸ್ಲಿಂ ಕುಟುಂಬವೊಂದು ಉಡುಪಿಯ ದೇವಸ್ಥಾನವೊಂದರ ಸಮೀಪ ಅಡುಗೆ ಮಾಡುತ್ತಿದ್ದಾಗ ಶ್ರೀರಾಮ ಸೇನೆಗೆ ಸೇರಿದ ಕಾರ್ಯಕರ್ತರ ಗುಂಪೊಂದು ಕಿರುಕುಳ ನೀಡಿದ್ದು, ಜಾಗ ಖಾಲಿ ಮಾಡುವಂತೆ ಸೂಚಿಸಿರುವುದಾಗಿ ʼದಿ ಕ್ವಿಂಟ್ʼ ವರದಿ ಮಾಡಿದೆ.
ಮಂಗಳೂರಿನಿಂದ ಮುಸ್ಲಿಂ ಕುಟುಂಬವು ಸೀತಾನದಿಯ ದಂಡೆಗೆ ಪ್ರವಾಸಕ್ಕೆ ಬಂದಿದ್ದು, ಊಟಕ್ಕೆಂದು ನದಿಯ ದಂಡೆಮೇಲೆ ಮೀನು ಬೇಯಿಸುತ್ತಿದ್ದರು. ಇದನ್ನ ತಿಳಿದು ಸ್ಥಳಕ್ಕೆ ಧಾವಿಸಿದ, ಬಲಪಂಥೀಯ ಹಿಂದೂ ಗುಂಪಿಗೆ ಸೇರಿದ ಶ್ರೀರಾಮ್ ಸೇನೆ ಕಾರ್ಯಕರ್ತರು, “ಕುಟುಂಬವು ಮೀನು ಬೇಯಿಸುವ ಮೂಲಕ ದೇವಾಲಯದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಕೋಮುವಾದದ ಕೊಚ್ಚೆ ತೊಳೆಯುವ ಕಾರ್ಯ ಆಗಬೇಕು
ಮಾಧ್ಯಮಗಳಿಗೆ ಲಭ್ಯವಾಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು, “ನಿಮಗೇನಾಗಿದೆ? ಮಸೀದಿಯ ಮುಂದೆ ಯಾರಾದರೂ ಹಂದಿಯನ್ನು ಕಡಿದರೆ ನೀವು ಸುಮ್ಮನಿರುತ್ತೀರಾ? ನಿಮಗೆ ಇಷ್ಟವಾದುದನ್ನ ನೀವು ತಿನ್ನಿರಿ. ನಮಗೆ ಯಾವುದೇ ತೊಂದರೆ ಇಲ್ಲ. ಆದರೆ, ಇಲ್ಲಿ ಅಡುಗೆ ಮಾಡಬೇಡಿ” ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.
ಈ ವಾಗ್ದಾಳಿಯ ನಂತರ, ಶ್ರೀರಾಮಸೇನೆ ಕಾರ್ಯಕರ್ತರನ್ನ ಮುಸ್ಲಿಂ ಕುಟುಂಬವು ಕ್ಷಮೆಯಾಚಿಸಿ. ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬರು “ನಮಗೆ ತಿಳಿದಿರಲಿಲ್ಲ, ದೇವಸ್ಥಾನವು ದೂರದಲ್ಲಿದೆ ಎಂದು ನಾವು ತಿಳಿದಿದ್ದೆವು” ಎಂದು ಹೇಳಿದ್ದಾರೆ. ಅದಕ್ಕೆ ಶ್ರೀರಾಮಸೇನೆ ಸದಸ್ಯರು “ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ? ಅಲ್ಲೊಂದು ದೇಗುಲವಿದೆ. ಇದು ಸಾಮಾನ್ಯ ಜ್ಞಾನ” ಎಂದು ವಾಗ್ದಾಳಿ ನಡೆಸಿದ್ದಾರೆ.