ಪ್ರತಿಪಕ್ಷಗಳ ಎಂಪಿಗಳ ಅಮಾನತ್ತು-ಮುಜುಗರದಿಂದ ಪಾರಾಗುವ ಸರಕಾರದ ಯತ್ನ: ಎಳಮಾರನ್‍ ಕರೀಮ್

ಬಿಜೆಪಿ ಸರಕಾರದ ಪುಕ್ಕಲುತನ ಮತ್ತು ಚರ್ಚೆಯ ಬಗ್ಗೆ ಅಸಹಿಷ್ಣುತೆ ರಾಜದ್ಯಸಭೆಯಲ್ಲಿ ಬಯಲಾಗಿದೆ. ಅದು ಸಂಸತ್ತನ್ನು ಪ್ರಜಾಪ್ರಭುತ್ವವನ್ನು ನಾಶಪಡಿಸುವ ವೇದಿಕೆಯಾಗಿ ಮಾಡುತ್ತಿದೆ. ಹಿಂದಿನ ಅಧಿವೇಶನದಲ್ಲಿ ಪ್ರತಿಪಕ್ಷಗಳ ಸಂಸತ್ ಸದಸ್ಯರು ಮಾಡಿರುವ ಆಪಾದನೆಗಳೆಲ್ಲವೂ ಈಗ ನಿಜವೆಂದು ಸಾಬೀತಾಗಿದೆ. ಪೆಗಸಸ್ ಮತ್ತು ಕೃಷಿ ಕಾಯ್ದೆಗಳನ್ನು ಕುರಿತಂತೆ ಸರಕಾರ ತನ್ನ ನಿಲುವುಗಳನ್ನು ಬದಲಿಸಲೇ ಬೇಕಾಗಿ ಬಂದಿದೆ. ಇದರಿಂದಾಗಿ ಜನಗಳಿಗೆ ಮುಖ ತೋರಿಸದಂತಾಗಿರುವ ಬಿಜೆಪಿ ಸರಕಾರ ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಅಮಾನತ್ತಿನ ಹುನ್ನಾರ ನಡೆಸಿದೆ ಎಂದು ಅಮಾನತ್ತಿಗೊಳಗಾಗಿರುವ ರಾಜ್ಯಸಭಾದಲ್ಲಿ  ಒಬ್ಬರಾದ ಎಳಮಾರನ್ ಕರೀಮ್ ಹೇಳಿದ್ದಾರೆ. ಇವರು ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದಾರೆ.

ಹಿಂದೆಂದೂ ಹಿಂದಿನ ಅಧಿವೇಶನದಲ್ಲಿನ ಕ್ರಿಯೆಗೆ ಪ್ರಸಕ್ತ ಅಧಿವೇಶನದಲ್ಲಿ ಕ್ರಮ ಕೈಗೊಂಡಿದ್ದಿಲ್ಲ. ಸರಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ ಎಂದು ಕರೀಂ ಹೇಳಿದ್ದಾರೆ.

ತನಿಖಾ ಸಮಿತಿಯ ವರದಿಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಪ್ರತಿಪಕ್ಷಗಳ ಸದಸ್ಯರೂ ತಮ್ಮ ಮೇಲೆ ಭದ್ರತಾ ಸಿಬ್ಬಂದಿ ಕೈಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಆದರೆ ಆ ದೂರುಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪ್ರತಿಪಕ್ಷಗಳು ಸರಕಾರದ ನಿಲುವಿನ ವಿರುದ್ಧ ಒಂದು ಬಲವಾದ ಪ್ರತಿಭಟನೆಯನ್ನು ಸಂಘಟಿಸುತ್ತಾರೆ, ಈ ಅಮಾನತ್ತು ಬಿಜೆಪಿ ನೇತೃತ್ವದ ಆಳ್ವಿಕೆಯನ್ನು ಬಯಲು ಮಾಡಲು ಒಂದು ಅವಕಾಶ ಎಂದು ಎಳಮಾರನ್ ಕರೀಂ ಹೇಳಿದ್ದಾರೆ.

ಪ್ರಜಾಪ್ರಭುತ್ವವಿರೋಧಿ ಕ್ರಮ: ಸಿಐಟಿಯು ಖಂಡನೆ

ಹಿಂದಿನ ಅಧಿವೇಶನದಲ್ಲಿ ಪುಂಡಾಟಿಕೆ ನಡೆಸಿದರೆಂದು ಈ ಅಧಿವೇಶನದಲ್ಲಿ ರಾಜ್ಯ ಸಭೆಯ 12 ಸದಸ್ಯರನ್ನು ಅಮಾನತ್ತು ಮಾಡಿರುವುದು ಅತ್ಯಂತ ಪ್ರಜಾಪ್ರಭುತ್ವ-ವಿರೋಧಿ ಕೃತ್ಯ ಎಂದು ಸಿಐಟಿಯು ಖಂಡಿಸಿದೆ.

ನಿಜಸಂಗತಿಯೆಂದರೆ ಗಲಭೆಯಾದ ದಿನ ಪ್ರತಿಪಕ್ಷಗಳ ಸದಸ್ಯರು ಸಾಮಾನ್ಯ ವಿಮಾ ತಿದ್ದುಪಡಿ ಮಸೂದೆಯ ಮೇಲೆ ಸಂರಚಿತ ಚರ್ಚೆ ನಡೆಯಬೇಕೆಂದು ಆಗ್ರಹಿಸುತ್ತಿದ್ದರು ಮತ್ತು ಮಸೂದೆಯ ಮೇಲೆ ಮತದಾನ ನಡೆಯಬೇಕು ಎಂದು ಕೇಳುತ್ತಿದ್ದರು. ಇದನ್ನು ಆಧಾರಹೀನ ಕಾರಣಗಳನ್ನೊಡ್ಡಿ ಅತ್ಯಂತ ಪ್ರಜಾಪ್ರಭುತ್ವ- ವಿರೋಧಿ ರೀತಿಯಲ್ಲಿ ನಿರಾಕರಿಸಲಾಯಿತು.

ಇದು ಮೂಲ ಪ್ರಜಾಪ್ರಭುತ್ವ ವಿಧಿ-ವಿಧಾನಗಳನ್ನು ಮತ್ತು ಸಂಸದೀಯ ಪ್ರಕ್ರಿಯೆಗಳನ್ನೇ ತುಳಿದು ಹಾಕುವ ಕ್ರಮ ಎಂದಿರುವ ಸಿಐಟಿಯು ಈ ಅಧಿವೇಶನದಲ್ಲಿ ಕೂಡ ಬ್ಯಾಂಕ್ ರಾಷ್ಟ್ರೀಕರಣ ಕಾಯ್ದೆ, ವಿದ್ಯುತ್ ಕಾಯ್ದೆ, ಪಿಎಫ್‌ಆರ್‌ಡಿಎ ಕಾಯ್ದೆ ಇತ್ಯಾದಿಗಳನ್ನು ಖಾಸಗೀಕರಣಕ್ಕೆ ಅನುವು ಮಾಡಿಕೊಡುವಂತೆ ತಿದ್ದುಪಡಿ ಮಾಡುವ ಮಸೂದೆಗಳನ್ನು ಸುಲಭವಾಗಿ ಪಾಸು ಮಾಡಿಕೊಳ್ಳಲಿಕ್ಕಾಗಿ ಈ ಹುನ್ನಾರ ನಡೆಸಿದೆ ಎಂದು ಸಿಐಟಿಯು ಹೇಳಿದೆ.

ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಇಂತಹ ಸರ್ವಾಧಿಕಾರಶಾಹಿ ದಾಳಿಗಳನ್ನು ಖಂಡಿಸುವುದಾಗಿ ಹೇಳಿರುವ ಸಿಐಟಿಯು, ಶ್ರಮಜೀವಿ ಜನಗಳು ಇಂತಹ ವಿನಾಶಕಾರಿ ಧೋರಣೆಗಳ ವಿರುದ್ಧ ಒಗ್ಗಟ್ಟಿನಿಂದ ದೇಶವ್ಯಾಪೀ ಪ್ರತಿರೋಧ ಹೋರಾಟವನ್ನು ನಡೆಸಬೇಕು ಎಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *