ಮೈಸೂರು: ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರತಾಪ್ ಸಿಂಹ ಒಬ್ಬ ಮಿನಿ ಕಂಟ್ರ್ಯಾಕ್ಟರ್, ನಿನ್ನ ಕೆಲಸ ಏನು ? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು ? ರಸ್ತೆ ಕಾಮಗಾರಿಗೆ ಸಾಮಾಗ್ರಿಗಳನ್ನು ಸಾಗಿಸಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೈವೇಯಲ್ಲಿ ನಿಂತು ಫೇಸ್ಬುಕ್ ಪ್ರಸಾರ ಮಾಡುತ್ತೀಯಾ, ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನು ಹೋಗಿ ನೋಡಪ್ಪ, ಅಲ್ಲಿಯೂ ಪತ್ರಿಕಾಗೊಷ್ಟಿ ಮಾಡಪ್ಪ ಎಂದು ಟೀಕಿಸಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ದರ ಸಂಗ್ರಹಿಸುತ್ತಿರುವ ನೀತಿ ಮತ್ತು ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ವಿರೋಧಿಸಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಹೆದ್ದಾರಿ ನಿರ್ಮಾಣಕ್ಕೆ 12 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದ್ದು, ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ಮಾಡಿಲ್ಲ. ಹೆಚ್ಚು ಟೋಲ್ ದರ ನಿಗದಿ ಮಾಡಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೂಡಲೇ ಟೋಲ್ ದರವನ್ನು ಪರಿಶೀಲನೆ ಬೇಕುʼʼ ಎಂದು ಆಗ್ರಹಿಸಿದರು.
ಇದನ್ನು ಓದಿ: ಬೆಂ-ಮೈ ಎಕ್ಸ್ ಪ್ರೆಸ್ ವೇ: ಹೆಚ್ಚುವರಿ ಟೋಲ್ ಸಂಗ್ರಹ ವಿರೋಧಿಸಿ ನಿಖಿಲ್ ಪ್ರತಿಭಟನೆ
ಹೆದ್ದಾರಿ ನಿರ್ಮಾಣಕ್ಕಾಗಿ 2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿದ್ದು, ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದೀರಿ. ಇಲ್ಲಿ ನಾಲ್ಕು ಪಥನೇ ಸಾಕಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ, ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ. ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದರು ಪ್ರಶ್ನಿಸಿದರು.
ಅವನ್ಯಾರೋ ಶ್ರೀಧರ್ ಅನ್ನೋ ಅಧಿಕಾರಿ ಸರ್ವಿಸ್ ರಸ್ತೆ ಮಾಡವ ಕಾನೂನು ಎಲ್ಲಿದೆ ಅಂತಾ ಕೇಳ್ತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿಶಾಹಿ ಆಡಳಿತ ನಡೆಯುತ್ತಿದೆಯಾ? ಎಂದ ವಿಶ್ವನಾಥ್, ಏ ಮೋದಿ ಏನಪ್ಪಾ ನಿಂದು ಕುರುಡು ದರ್ಬಾರು ಎಂದು ವಾಗ್ದಾಳಿ ನಡೆಸಿದರು.
ಈ ದಶಪಥ ಹೆದ್ದಾರಿಯನ್ನು ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿದ್ದು, ಪ್ರತಾಪ್ ಸಿಂಹ ನಾನು ಮಾಡಿದ್ದು, ನಮ್ಮ ಸರ್ಕಾರ ಮಾಡಿದ್ದು ಎಂದು ಹೇಳುವುದು ಸರಿಯಲ್ಲ. ಸಾರ್ವಜನಿಕರು ದುಬಾರಿ ಬೆಲೆಯ ಹೆದ್ದಾರಿ ಬೇಕೆಂದು ಕೇಳಲಿಲ್ಲ. ಅದರೂ, ಹಗಲು ದರೋಡೆಗಾಗಿ ಈ ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಹೆದ್ದಾರಿಯಲ್ಲಿ ಯಾವುದೇ ಭದ್ರತೆ ಇಲ್ಲ. ಈಗಾಗಲೇ ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಯಾರು ಹೊಣೆ, ಹೆದ್ದಾರಿಯಲ್ಲಿ ಯಾವುದೇ ತುರ್ತು ಚಿಕಿತ್ಸಾ ಕೇಂದ್ರಗಳು ಇಲ್ಲ ಹಾಗೂ ಹೆದ್ದಾರಿ ಪಕ್ಕದಲ್ಲಿ ಎಲ್ಲಿಯೂ ಸಹ ವಿಶ್ರಾಂತಿ ಕೊಠಡಿಗಳಾಗಲೀ, , ಹೋಟೇಲುಗಳಾಗಿ ಇಲ್ಲʼʼ ಎಂದು ವಿಶ್ವನಾಥ್ ಆರೋಪಿಸಿದರು.
ಇದನ್ನು ಓದಿ: ಬೆಂ-ಮೈ ಎಕ್ಸ್ಪ್ರೆಸ್ ವೇ ಟೋಲ್ ಸಂಗ್ರಹವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ; ವಿವರಣೆ ಸಲ್ಲಿಸುವಂತೆ ಖಡಕ್ ಆದೇಶ
ಮೋದಿ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯೆ ಎಂದು ಪ್ರಶ್ನಿಸಿದ ವಿಶ್ವನಾಥ್, ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡುತ್ತಿದ್ದೀರಾ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ ಎಂದರು.
ಮೈಸೂರು-ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆಯ ಹತ್ತಿರ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಒಂದು ಗಂಟೆಗಳ ಕಾಲ ಶಾಂತಿಯುತ ಪ್ರತಿಭಟನೆಯಲ್ಲಿ ಕುಳಿತು ಕೈಗೆ ಕಪ್ಪು ಪಟ್ಟಿ ಧರಿಸಿ, ಘೋಷಣಾ ಫಲಕಗಳನ್ನು ಹಿಡಿದು ಎಚ್ ವಿಶ್ವನಾಥ್ ವಿರೋಧವನ್ನು ವ್ಯಕ್ತಪಡಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ