ಪ್ರಸಕ್ತ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕೆಂದು ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ (ಫಲಾನುಭವಿಗಳ) ಮಕ್ಕಳ ವಿದ್ಯಾಭ್ಯಾಸಕ್ಕೆ ೨೦೨೨-೨೩ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಇದುವರೆಗೂ ಅರ್ಜಿ ಆಹ್ವಾನ ನೀಡದಿರುವುದನ್ನು ಖಂಡಿಸಿ  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಹಾಗೂ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ಅರ್ಜಿ ಸಲ್ಲಿಸಲು ಅವಕಾಶ ನೀಡದೇ, ವಿಳಂಬ ಮಾಡುತ್ತಿರುವುದನ್ನು ಮಂಡಳಿಯ ಕ್ರಮವನ್ನು ಖಂಡಿಸಿರುವ  ಸಂಘಟನೆ ಈ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದರೂ ಶೈಕ್ಷಣಿಕ ಧನಸಹಾಯ ಪಡೆಯಲು ಅರ್ಜಿ ಆಹ್ವಾನಿಸದೇ ಇರುವುದು ಕೂಲಿ ಕಾರ್ಮಿಕರಿಗೆ ಮಾಡುವ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಮಂಡಳಿ ಕಾರ್ಯದರ್ಶಿಯೊಂದಿಗೆ ಸಂಘಟನೆಯ ಮುಖಂಡರು ಅನೇಕ ಬಾರಿ ಚರ್ಚಿಸಿದ್ದಾರೆ. ಆದರೆ, ಸಮಸ್ಯೆಗಳು ಬಗೆಹರಿಸುತ್ತೇವೆ. ಸದ್ಯದಲ್ಲೇ ಅರ್ಜಿ ಕರೆಯಲಾಗುವುದು ಎಂದು ಭರವಸೆಯ ಮಾತುಗಳು ಬಂದಿವೆ ಹೊರತು, ಕೊಟ್ಟ ಭರವಸೆಯಂತೆ ಜಾರಿಯಾಗಿಲ್ಲ. ಸರ್ಕಾರದ ನೀತಿಗಳಿಂದಾಗಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಎಸ್.ಎಸ್.ಪಿ. ಪೋರ್ಟಲ್‌ ನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಳಂಬವಾಗುತ್ತಿದ್ದು, ಅದನ್ನು ಪರಿಹರಿಸುವ ಕಾರ್ಯ ನಡೆದಿದೆ. ಆದರೆ ವಿಳಂಬ ಮಾಡಲಾಗುತ್ತಿದೆ ವಿನಃ ಶೀಘ್ರವೇ ಬಗೆಹರಿಯಲಿದೆ ಎಂಬ ಆಶ್ವಾಸನೆಯೂ ಪೂರ್ಣಗೊಂಡಿಲ್ಲ. ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು ಇತ್ತೀಚೆಗೆ ‘ಬೋಗಸ್ ಕಾರ್ಡುಗಳ ಹಾವಳಿಯನ್ನು ತಪ್ಪಿಸಬೇಕಿದೆ, ಅಲ್ಲಿಯವರೆಗೆ ಅರ್ಜಿ ಆಹ್ವಾನಿಸುವುದು ಕಷ್ಟ’ ಎಂದು ಮೌಖಿಕವಾಗಿ ಹೇಳಿದ್ದಾರೆ. ಬೋಗಸ್ ಕಾರ್ಡುಗಳಿಗೆ ಕಡಿವಾಣ ಹಾಕಬೇಕೆಂಬುದು ನಮ್ಮ ಒತ್ತಾಯವೂ ಆಗಿದೆ. ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಮಂಡಳಿಗೆ ಮನವಿ ಮಾಡಿದ್ದೇವೆ. ಆದರೆ ಬೋಗಸ್ ಕಾರ್ಡುಗಳನ್ನು ತಡೆಗಟ್ಟುವ ನೆಪವೊಡ್ಡಿ ನೈಜ ಕಾರ್ಮಿಕರಿಗೆ ಸೌಲಭ್ಯಗಳನ್ನು ನಿರಾಕರಿಸುವುದು ಖಂಡನೀಯ ಎಂದು ಪ್ರತಿಭಟಿಸಿದರು.

ಹೀಗಾಗಿ ಬೋಗಸ್ ಕಾರ್ಡುದಾರರನ್ನು ನಿಯಂತ್ರಿಸಲು ಶೈಕ್ಷಣಿಕ ಸಹಾಯಧನವನ್ನು ತಡೆಹಿಡಿಯಲಾಗಿದೆ ಅಥವಾ ವಿಳಂಬ ಮಾಡಲಾಗುತ್ತಿದೆ ಎಂಬ ಕಲ್ಯಾಣ ಮಂಡಳಿಯ ಮಾನ್ಯ ಕಾರ್ಯದರ್ಶಿಗಳ ವಾದದಲ್ಲಿ ಗಟ್ಟಿತನವಿಲ್ಲ.  ಆದ್ದರಿಂದ ೨೦೨೨-೨೩ನೇ ಸಾಲಿನ ಶೈಕ್ಷಣಿಕ ಧನಸಹಾಯ ಪಡೆಯಲು ಈ ಕೂಡಲೇ ಅರ್ಜಿ ಆಹ್ವಾನಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

 

ಕಲ್ಯಾಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ೨೦೨೧-೨೨ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ೬೦ ಸಾವಿರ ಜನ ಅರ್ಜಿದಾರ ಫಲಾನುಭವಿಗಳಿಗೆ ಶೈಕ್ಷಣಿಕ ಸಹಾಯಧನ ಪಾವತಿ ಆಗಿಲ್ಲ. ಇದಕ್ಕೂ ಎಸ್.ಎಸ್.ಪಿ. ಪೋರ್ಟಲ್‌ ನಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಹಣ ಪಾವತಿಯಾಗಿಲ್ಲ, ಆದರೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಹಾಯಧನ ದೊರೆಯಲಿದೆ ಎಂಬ ಭರವಸೆ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ.

ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ‌ಅವರ‌ ಮಕ್ಕಳು ಕಾರ್ಮಿಕ ಕಚೇರಿಗಳು ಹಾಗೂ ಬೆಂಗಳೂರಿನ ಕಲ್ಯಾಣ‌ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿ ಕಟ್ಟಡ ಕಾರ್ಮಿಕ ಕಲ್ಯಾಣ ‌ಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯದ‌ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ, ಕಲಬುರಗಿ, ಮೈಸೂರು, ‌ಬೆಳಗಾವಿ, ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲೂಕುಗಳ ಕಾರ್ಮಿಕ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆದಿದೆ.

ಬೆಂಗಳೂರಿನ ಕಲ್ಯಾಣ ಮಂಡಳಿಯ ಎದುರು ನಡೆದ ಪ್ರತಿಭಟನೆ ತರುವಾಯ, ಮಂಡಳಿ ಜಂಟಿ ಕಾರ್ಯದರ್ಶಿ ಶಿವಪುತ್ರ ಬಾಬುರಾವ್ ಅವರನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಖಜಾಂಚಿ ಲಿಂಗರಾಜ್ ನೇತೃತ್ವದ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿತು. ನಿಯೋಗದೊಂದಿಗೆ ಮಾತನಾಡಿದ ಮಂಡಳಿ ಜಂಟಿ ಕಾರ್ಯದರ್ಶಿಗಳು ಎಂಟರಿಂದ ಹತ್ತು ದಿನಗಳ ಒಳಗಾಗಿ ಕಲಿಕಾ ಭಾಗ್ಯ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *