ಬೆಂಗಳೂರು: ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರ ಮೇಲೆ ಅವರ ಕೆಲಸದ ಸ್ಥಳಗಳಲ್ಲಿ, ಮನೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಕಿರುಕುಳ, ಶೋಷಣೆಗಳು ನಡೆಯುತ್ತಲೇ ಇವೆ. ಇದಕ್ಕೆ ಪ್ರಮುಖ ಕಾರಣ ನಮ್ಮ ದೇಶದಲ್ಲಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಬಹಳ ಕಡಿಮೆ ಪ್ರಮಾಣದಲ್ಲಿರುವುದು. ಪ್ರಸ್ತುತ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿದ್ದು, ಈ ಪರಿಸ್ಥಿತಿಯನ್ನು ಉತ್ತಮಪಡಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಜನನಿ ವತ್ಸಲ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಪರ ಕಾಳಜಿಯುಳ್ಳ ಪ್ರಾಮಾಣಿಕ, ಅರ್ಹ, ಸ್ವತಂತ್ರ ಮನೋಭಾವದ, ವಿದ್ಯಾವಂತ ಮಹಿಳೆಯರು ರಾಜ್ಯದಲ್ಲಿ ಪುರುಷರಿಗೆ ಸಂಖ್ಯಾಬಲದಲ್ಲಿ ಸಮವಾಗಿದ್ದರೂ, ಸ್ವತಂತ್ರವಾಗಿ, ಪ್ರಾಮಾಣಿಕತೆಯಿಂದ ಮತ್ತು ಘನತೆಯಿಂದ ರಾಜಕಾರಣ ಮಾಡಬಯಸುವ ಮಹಿಳೆಯರಿಗೆ ಇದ್ದ ಅವಕಾಶಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಿದೆ ಎಂದರು.
ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಮಾತನಾಡುತ್ತ ಕಾಲಹರಣ ಮಾಡುತ್ತಿವೆಯೇ ಹೊರತು, ಅವರಿಗೆ ನೀಡಬೇಕಾದ ಅವಕಾಶಗಳನ್ನು ನೀಡದೆ ಅವುಗಳನ್ನೇ ಕಿತ್ತುಕೊಳ್ಳಲು ವ್ಯವಸ್ಥಿತ ಜಾಲವನ್ನು ನಿರ್ಮಿಸಿಕೊಂಡಿವೆ. ತೃತೀಯ ಹಂತದ ಸರ್ಕಾರಗಳಾದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೇ ಕಳೆದರೂ ಪುರುಷರದೇ ಪಾರಮ್ಯ ನಡೆಯುತ್ತಿದೆ. ಕೇವಲ ಹೆಸರಿಗೆ ಮಾತ್ರ ಮಹಿಳಾ ಚುನಾಯಿತ ಪ್ರತಿನಿಧಿಗಳಿದ್ದು, ನಿಜವಾದ ಅಧಿಕಾರ ಅವರ ಪತಿ/ತಂದೆ/ಮಕ್ಕಳು ಚಲಾಯಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷೆ ಇಂದಿರಾ ರೆಡ್ಡಿ ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತದೆ. ಕನಿಷ್ಠ ಪಕ್ಷ ಮೇಲ್ಮನೆ ಚುನಾವಣೆಗಳಲ್ಲಿ, ನಿಸ್ಸಂದೇಹವಾಗಿ ಗೆಲ್ಲುವ ಕ್ಷೇತ್ರಗಳಲ್ಲೂ, ಅದರಲ್ಲೂ ನಾಮ ನಿರ್ದೇಶನ ಮಾಡುವಂತಹ ಸಂದರ್ಭಗಳಲ್ಲೂ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದ ಮೂರು ಭ್ರಷ್ಟ ಪಕ್ಷಗಳು ಎಂದಿಗೂ ಮಹಿಳೆಯರಿಗೆ, ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನವನ್ನು ನೀಡುವುದಿಲ್ಲ. ಆ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಆದ್ಯತೆಯೆ ಹೊರತು, ಮಹಿಳೆಯರ ಸಬಲೀಕರಣ ಅಲ್ಲ ಎಂದು ತಿಳಿಸಿದರು.
ಸ್ವಾಭಿಮಾನಿ ಕನ್ನಡದ ಹೆಣ್ಣೇ, ರಾಜಕಾರಣಕ್ಕೆ ಮುಂದಾಗು
ಧಾರವಾಡ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷೆ ಸುಮಿತ್ರಾ ಹಳ್ಳಿಕೇರಿ ಮಾತನಾಡಿ, ನಾಯಕತ್ವ ಗುಣವುಳ್ಳ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷ ಮೂರನೇ ಒಂದರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷವೇ ಚುನಾವಣಾ ವೆಚ್ಚವನ್ನು ಭರಿಸಲಿದೆ ಎಂದರು.
ಕೆಆರ್‌ಎಸ್ ಪಕ್ಷವು, ಕನ್ನಡ ನಾಡಿನ ಮಹಿಳೆಯರಿಗೆ ತಿಳಿಸಲು ಮತ್ತು ಪ್ರಾಮಾಣಿಕ ರಾಜಕಾರಣವನ್ನು ಮಾಡಬಯಸುವ ಅರ್ಹ, ಜನಪರ ಕಾಳಜಿಯುಳ್ಳ ಮಹಿಳೆಯರನ್ನು ರಾಜಕೀಯಕ್ಕೆ ಆಹ್ವಾನಿಸಲು, ಇದೇ ಡಿಸೆಂಬರ್ 12 ರಿಂದ “ಸ್ವಾಭಿಮಾನಿ ಕನ್ನಡದ ಹೆಣ್ಣೇ, ರಾಜಕಾರಣಕ್ಕೆ ಮುಂದಾಗು” ಎನ್ನುವ ರಾಜ್ಯವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಮೊದಲ ಹಂತದಲ್ಲಿ ಐದು ದಿನಗಳು ಅಂದರೆ, ಡಿಸೆಂಬರ್ 12ರಂದು ರಾಮನಗರ ಮತ್ತು ಚನ್ನಪಟ್ಟಣ, ಡಿಸೆಂಬರ್ 13ರಂದು ಮಂಡ್ಯ ಜಿಲ್ಲೆ, ಡಿಸೆಂಬರ್ 14ರಂದು ಮೈಸೂರು ಜಿಲ್ಲೆ, ಡಿಸೆಂಬರ್ 15ರಂದು ಹಾಸನ ಜಿಲ್ಲೆ, ಡಿಸೆಂಬರ್ 16ರಂದು ಗುಬ್ಬಿ, ತುಮಕೂರು ಭಾಗದಲ್ಲಿ ಸಂಚರಿಸಲಿದೆ. ಈ ಮೂಲಕ ಪತ್ರಿಕಾಗೋಷ್ಠಿಗಳು, ಸಾರ್ವಜನಿಕ ಸಭೆಗಳು, ಮಹಿಳಾ ಗುಂಪುಗಳೊಂದಿಗೆ ಸಂವಾದ, ಪಕ್ಷದ ಸದಸ್ಯರೊಂದಿಗೆ ಸಭೆ, ಸದಸ್ಯತ್ವ ನೋಂದಣಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಭಾಗಿಯಾದ ಬೆಂಗಳೂರು ಮಹಾನಗರ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಕ್ಷ್ಮೀ ಚನ್ನಕೇಶವ ಮಾತನಾಡಿ, ಮಹಿಳೆಯರಿಗೂ ಅವರ ಸಾಮರ್ಥ್ಯ ಮತ್ತು ಜನಪರ ಕಾಳಜಿಯ ಆಧಾರದ ಮೇಲೆ ರಾಜಕೀಯ ನಾಯಕತ್ವ ನೀಡುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕನ್ನಡ ನಾಡಿನ ವನಿತೆಯರು ಸದುಪಯೋಗಪಡಿಸಿಕೊಂಡು ರಾಜಕಾರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವೇಶಿಸಬೇಕೆಂದು ಕರೆ ನೀಡಿದರು.