ಪ್ರಜಾಪ್ರಭುತ್ವದ ಉಳಿವು ಮತ್ತು ನಾಲ್ಕನೇ ಸಂಸ್ಥೆಗಳು

ಬಿ. ಶ್ರೀಪಾದ ಭಟ್

ಪೀಠಿಕೆ

ಇತ್ತೀಚಿನ ಎರಡು ವಿದ್ಯಾಮಾನಗಳು ಭಾರತದ ಪ್ರಸ್ತುತ ಸಂದರ್ಭ ಮತ್ತು ಭವಿಷ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ. ಮೊದಲನೆಯದಾಗಿ ಡಿಸೆಂಬರ್ 2022ರ ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ಮತ ಚಲಾಯಿಸಲು ತೆರಳಿದ ಪ್ರಧಾನಿ ಮೋದಿಯವರು ಸಾವಿರಾರು ಹಿಂಬಾಲಕರೊಂದಿಗೆ ರಾಜಾರೋಷದಿಂದ ರೋಡ್ ಶೋ ನಡೆಸುವುದರ ಮೂಲಕ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದರು. ನಾನು ಯಾರಿಗೂ ಕೇರ್ ಮಾಡಲ್ಲ ಎನ್ನುವಂತಹ ಧೋರಣೆ ವ್ಯಕ್ತಪಡಿಸಿದರು. ಆದರೆ ಚುನಾವಣಾ ಆಯೋಗವು ಮೂಕಪ್ರೇಕ್ಷಕನಂತೆ ಅಸಹಾಯಕತನವನ್ನೂ ಸಹ ಪ್ರದರ್ಶಿಸಲಿಲ್ಲ ಬದಲಿಗೆ ಧನ್ಯತ ಭಾವನೆಯನ್ನು ವ್ಯಕ್ತಪಡಿಸಿತು. ಇದು ಭಾರತ ಪ್ರಜಾಪ್ರಭುತ್ವದ ಪ್ರಸ್ತುತ ಪರಿಸ್ಥಿತಿ. ಎರಡನೆಯದಾಗಿ ಕಳೆದ ಒಂದು ತಿಂಗಳಿಂದ ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜೂ ಅವರು ನ್ಯಾಯಾಂಗ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಯನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಪ್ರತಿ ವೇದಿಕೆಯನ್ನು ಬಳಸಿಕೊಂಡು ನ್ಯಾಯಾಂಗ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಉಪ ರಾಷ್ಟ್ರಪತಿ ಜಗದೀಶ್ ಧನ್ಕರ್ ತಮ್ಮ ಹುದ್ದೆಯ ಘನತೆಯನ್ನು ಗಾಳಿಗೆ ತೂರಿ ಸಮಯ, ಸಂದರ್ಭ ನೋಡದೆ ಈ ಕೊಲಿಜಿಯಂನ್ನು ಟೀಕಿಸುತ್ತಿದ್ದಾರೆ. ಜನಸಾಮಾನ್ಯರು ಇದೇ ರೀತಿ ವರ್ತಿಸಿದ್ದರೆ ನೇರವಾಗಿ ನ್ಯಾಯಾಂಗ ನಿಂದನೆ ಅಡಿಯಲ್ಲಿ ಬಂಧಿಸಲ್ಪಡುತ್ತಿದ್ದರು. ಅದರೆ ಮೇಲಿನ ಗಣ್ಯರಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ರಕ್ಷ ಕವಚವಿದೆ. ಈ ವಿದ್ಯಾಮಾನಗಳ ಹಿಂದೆ ಸಂವಿಧಾನದ ಕುರಿತು ಅಸಹನೆಯಿರುವ ಆರ್‌ಎಸ್‌ಎಸ್‌ನ ಪ್ರಚೋದನೆ ಇದೆ ಎನ್ನುವುದು ಸಹ ಗುಟ್ಟಾಗಿ ಉಳಿದಿಲ್ಲ.

ನಿಜ ಕೊಲಿಜಿಯಂ ವ್ಯವಸ್ಥೆಯಲ್ಲಿ ದೋಷಗಳಿವೆ. ಅಲ್ಲಿನ ನೇಮಕಾತಿಯು ಸ್ವಜನಪಕ್ಷಪಾತದಿಂದ ಕೂಡಿದೆ. ಬಹುತೇಕ ಸಂದರ್ಭಗಳಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಮೇಲ್ಜಾತಿಯವರೇ ನ್ಯಾಯಮೂರ್ತಿಗಳಾಗಿ ಅಯ್ಕೆಯಾಗುತ್ತಿದ್ದಾರೆ. ಡಿಸೆಂಬರ್ 2021ರ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡುತ್ತಾ ಸಿಪಿಐ(ಎಂ) ಪಕ್ಷದ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ‘ಇದುವರೆಗಿನ ಭಾರತದ 47 ಮುಖ್ಯ ನ್ಯಾಯಮೂರ್ತಿಗಳಲ್ಲಿ 14 ಜನ ಬ್ರಾಹ್ಮಣರು. 1950-1970ರವರೆಗೆ 14 ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ ಗರಿಷ್ಠ ಸಂಖ್ಯೆಯಾಗಿತ್ತು. ಇವರ ಪೈಕಿ 11 ನ್ಯಾಯಮೂರ್ತಿಗಳು ಬ್ರಾಹ್ಮಣರು. 1971-89ರವರೆಗೆ 18 ನ್ಯಾಯಮೂರ್ತಿಗಳು ಬ್ರಾಹ್ಮಣರಾಗಿದ್ದರು’ ಎಂದು ಹೇಳಿದರು. ನ್ಯಾಯಾಂಗದ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವಿದೆ.

ಇದನ್ನು ಓದಿ: ಕೊಲಿಜಿಯಂ ಕುರಿತ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿಕೆ: ಸುಪ್ರೀಂ ಕೋರ್ಟ್‌ ತೀವ್ರ ಅತೃಪ್ತಿ

ಆದರೆ ಈ ತಪ್ಪುಗಳನ್ನು ಸರಿಪಡಿಸುವ ಬದಲು ನ್ಯಾಯಾಂಗ ನೇಮಕಾತಿಯ ಅಧಿಕಾರನ್ನು ಸಂಪೂರ್ಣವಾಗಿ ಪ್ರಭುತ್ವಕ್ಕೆ ವಹಿಸಿಕೊಡಬೇಕು ಎಂದು ಶಿಫಾರಸ್ಸು ಮಾಡುವ ಮೋದಿ ಸರಕಾರವು ಅದಕ್ಕಾಗಿ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ’ವನ್ನು ಶಿಫಾರಸ್ಸು ಮಾಡಿದೆ. ಆದರೆ ಇದರ ನೀತಿಗಳು ಕಾಯಿಲೆಯನ್ನು ಗುಣಪಡಿಸುವುದರ ಬದಲಿಗೆ ಮತ್ತಷ್ಟು ಉಲ್ಬಣಿಸಲು ಸಹಕಾರಿಯಾಗುವಂತಿವೆ. ಈ ಬದಲಿ ವ್ಯವಸ್ಥೆಯು ನ್ಯಾಯಾಂಗದ ನೇಮಕಾತಿಯನ್ನು ಪ್ರಭುತ್ವದ ಮರ್ಜಿಗೆ ಒಳಪಡಿಸುತ್ತದೆ, ಅದರ ಸ್ವಾಯತ್ತತೆಯನ್ನು ಅಂತ್ಯಗೊಳಿಸುತ್ತದೆ. ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡ ಮೋದಿ ಸರಕಾರದ  ಸರ್ವಾಧಿಕಾರಕ್ಕೆ ನ್ಯಾಯಾಂಗದ ಸ್ವಾತಂತ್ರ್ಯ ಅಡ್ಡಿಯಾಗಿತ್ತು. ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ‘ನ್ಯಾಯಾಂಗ ಸ್ವಾತಂತ್ರ್ಯವು ಸಂವಿಧಾನ ಮೂಲ ಸಂರಚನೆಯ ಭಾಗ, ಶಾಸನ ಮತ್ತು ತಿದ್ದುಪಡಿಯ ಮೂಲಕ ಅದರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಸರಕಾರವು ಕಿರಣ್‌ ರಿಜಿಜೂ, ಧನ್ಕರ್‌ರಂತಹ ಜವಬ್ದಾರಿಯುತ ಸ್ಥಾನದಲ್ಲಿರುವ ಗಣ್ಯರ ಮೂಲಕ ನ್ಯಾಯಾಂಗದ ಮೇಲೆ ಅಘಾತಕಾರಿ ದಾಳಿ ನಡೆಸುತ್ತಿದ್ದಾರೆ.

2018ರಲ್ಲಿ ಸುಪ್ರೀಂಕೋರ್ಟ್‌ ನ ಐವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ನಾಲ್ವರು ಬಹಿರಂಗ ಪತ್ರಿಕಾಗೋಷ್ಟಿ ನಡೆಸಿ ಕೇಂದ್ರ ಸರಕಾರದ ಹಸ್ತಕ್ಷೇಪ ಮತ್ತು ಆಗಿನ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಆದರೆ ಆ ಪತ್ರಿಕಾಗೋಷ್ಟಿಯ ಭಾಗವಾಗಿದ್ದ ರಂಜನ್ ಗೊಗೋಯ್ ನಂತರ ಕೇಂದ್ರ ಸರಕಾರದ ಪ್ರಭಾವಕ್ಕೆ ಒಳಗಾಗಿ ತೀರ್ಪು ಕೊಟ್ಟರು ಎನ್ನುವ ಆಪಾದನೆಗೆ ಒಳಗಾಗಬೇಕಾಯಿತು. 2018ರಲ್ಲಿ ‘ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಹಕ್ಕಿದೆ’ ಎಂದ ಸುಪ್ರೀಂಕೋರ್ಟ್‌ ನ ಮಹತ್ವದ ತೀರ್ಪನ್ನು ಜಾರಿಗೊಳಿಸಲು ಮುಂದಾದ ಅಲ್ಲಿನ ಕಮ್ಯೂನಿಸ್ಟ್‌ ಸರಕಾರಕ್ಕೆ ಆಗಿನ ಬಿಜೆಪಿ ಅದ್ಯಕ್ಷ ಅಮಿತ್ ಶಾ ನಿಮ್ಮ ಸರಕಾರವನ್ನು ಉರುಳಿಸುತ್ತೇವೆ ಎಂದು ಸಾರ್ವಜನಿಕವಾಗಿ ಧಮ್ಕಿ ಹಾಕಿದರು. ಬಿಜೆಪಿ ಪಕ್ಷವು ಸುಪ್ರೀಂಕೋರ್ಟ್‌ ನಿರ್ಧಾರದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ, ಹಿಂಸಾಚಾರ ನಡೆಸಿತು. ಆದರೆ ಈ ಪ್ರಕರಣವು ಎಲ್ಲಿಯೂ ನ್ಯಾಯಾಂಗ ನಿಂದನೆ ಎಂದು ದಾಖಲಾಗಲಿಲ್ಲ. ನಂತರ ಅಯೋಧ್ಯೆ, ರಫೇಲ್, ಯುಎಪಿಎ, ಚುನಾವಣಾ ಬಾಂಡ್ ಮುಂತಾದ ತೀರ್ಪುಗಳು ಬಿಜೆಪಿ ಪರವಾಗಿ ಬಂದಿರುವುದು ಕಾಕತಾಳೀಯವಂತೂ ಅಲ್ಲ. ಇದೆಲ್ಲದರ ಹಿನ್ನಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಪ್ರೀಂಕೋರ್ಟ್‌ ನ್ನು ಬಿಜೆಪಿ ಪಕ್ಷದ ಜಾರಿ ನಿರ್ದೇಶನಾಲಯದ ಮಟ್ಟಕ್ಕೆ ಇಳಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ರಂಜನ್ ಗೋಗೊಯ್, ಶರದ್ ಬೊಬ್ಡೆ ಅವರ ಕೊಡುಗೆಯೂ ಇದೆ. ಆದರೆ ನಂತರ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಎನ್‌.ವಿ. ರಮಣ, ಉದಯ್‌ ಉಮೇಶ್‌ ಲಲಿತ್ ಮತ್ತು ಈಗಿನ ಡಿ ವೈ ಚಂದ್ರಚೂಡ್ ಅವರು ತಮ್ಮದೇ ಇತಿಮಿತಿಯಲ್ಲಿ ನ್ಯಾಯಾಂಗದ ಘನತೆ ಮತ್ತು ಗೌರವವನ್ನು ಮರಳಿ ತರಲು ಶ್ರಮಿಸಿದ್ದಾರೆ ಎನ್ನುವದು ಸಹ ಸತ್ಯ.

ಸಂವಿಧಾನ ಮತ್ತು ನಾಲ್ಕನೇ ಸಂಸ್ಥೆಗಳು

ಭಾರತದ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಎನ್ನುವ ಮೂರು ಆಧಾರಸ್ತಂಭಗಳಿವೆ. (ಪತ್ರಿಕಾರಂಗ ನಾಲ್ಕನೇ ಆಧಾರಸ್ತಂಭವಲ್ಲ. ಅದು ನಮ್ಮ ಅಭಿಪ್ರಾಯವಷ್ಟೆ). ಸಂವಿಧಾನವು ಈ ಮೂರು ಅಂಗಗಳಿಗೆ ಅಧಿಕಾರವನ್ನು ಹಂಚಿಕೆ ಮಾಡಿದೆ. ಮತ್ತು ಈ ಅಂಗಗಳು ಪರಸ್ಪರರ ನಿರ್ಧಾರಗಳನ್ನು ಅನುಮೋದಿಸಬಹುದು ಅಥವಾ ಪ್ರಶ್ನಿಸಬಹುದು, ಆದರೆ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಕಳೆದ ಕೆಲ ದಶಕಗಳಿಂದಲೂ (ಎಮರ್ಜೆನ್ಸಿಯ ನಂತರ) ಈ ಮೂರು ಆಧಾರಸ್ತಂಭಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಕುರಿತು ಚರ್ಚೆಗಳು ನಡೆದಿವೆ, ವಾಗ್ವಾದಗಳಾಗಿವೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ  ವಹಿಸಿಕೊಂಡ ನಂತರ ಶಾಸಕಾಂಗವು ಈ ಮಿಕ್ಕೆರೆಡು ಆಧಾರಸ್ತಂಭಗಳನ್ನು ದುರ್ಬಳಕೆ ಮಾಡಿಕೊಂಡ ಹತ್ತಾರು ಉದಾಹರಣೆಗಳು ದಾಖಲಾಗಿವೆ. ಇದರ ಜೊತೆಗೆ ಸಾರ್ವಜನಿಕ ಸಂಸ್ಥೆಗಳಾದ ಸಿಬಿಐ, ಎನ್‌ಐಎ, ಕಾನೂನು ಜಾರಿ ನಿರ್ದೇಶನಲಯ, ಚುನಾವಣಾ ಆಯೋಗ, ವಿಜೆಲೆನ್ಸ್, ಮಾಹಿತಿ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ಆಯೋಗ ಮುಂತಾದವುಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಮೋದಿ ಸರಕಾರ ಅವುಗಳ ಮೇಲೆ ತನ್ನ ಸಂಪೂರ್ಣ ಹಿಡಿತ ಸಾಧಿಸಿದೆ. ವಿರೋಧ ಪಕ್ಷಗಳು, ಚಿಂತಕರು, ನ್ಯಾಯವಾದಿಗಳನ್ನು ಜೈಲಿಗೆ ತಳ್ಳಲು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಹ ದಾಖಲಾಗಿದೆ. ಈ ಸಾರ್ವಜನಿಕ ಸಂಸ್ಥೆಗಳನ್ನು ಕಬ್ಜಾ ಮಡಿಕೊಳ್ಳುವುದರ ಮೂಲಕ ಸಂವಿಧಾನವನ್ನೇ ಗೌಣಗೊಳಿಸಿರುವುದು ಮೋದಿ ಸರಕಾರದ ದೊಡ್ಡ ಸಾಧನೆಯಾಗಿದೆ.

ಇದನ್ನು ಓದಿ: “ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಮತೋಲಿತ ಪ್ರಾತಿನಿಧ್ಯ” – ವೈರಲ್ ಆಗುತ್ತಿದೆ ಕೇರಳ ಸಂಸದನ ಭಾಷಣ

ಪ್ರೊ. ತರುಣಾಬ್ ಖೈತಾನ್ ಅವರು ಹೇಳಿದಂತೆ ‘ಸಾವಿರ ಗಾಯಗಳ ಮೂಲಕ ಸಂವಿಧಾನವನ್ನೇ ಸಾಯಿಸಲಾಗುತ್ತಿದೆ’. 25, ನವೆಂಬರ್ 1949ರ ಸಂವಿಧಾನ ಸಮರ್ಪಣಾ ದಿನದಂದು ಅಂಬೇಡ್ಕರ್ ‘ಎಲ್ಲಾ ಹಕ್ಕಗಳನ್ನು ದೊಡ್ಡ ನಾಯಕನ ಕಾಲ ಬಳಿ ತಂದು ಪೊಡಮುಡಿಯವುದರಿಂದ ಪ್ರಜಾಪ್ರಭುತ್ವವೇ ನಾಶವಾಗುತ್ತದೆ’ ಎಂದು ಎಚ್ಚರಿಸಿದ್ದರು. ಇಂದು ಅದು ನಿಜವಾಗುತ್ತಿದೆ. ದೇಶದ ಬೀದಿಗಳಲ್ಲಿ ಸೇನಾ ಟ್ಯಾಂಕರ್‌ಗಳನ್ನು ನಿಯೋಜಿಸದೆಯೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗಿದೆ. ಪ್ರಭುತ್ವ ಮತ್ತು ಪಕ್ಷದ ನಡುವಿನ ಗೆರೆಯೇ ಅಳಸಿಹೋಗಿ ಪ್ರಭುತ್ವವು ಬಿಜೆಪಿ-ಆರ್‌ಎಸ್‌ಎಸ್‌ನೊಳಗೆ ಜೀರ್ಣಗೊಂಡಿದೆ. ಇಂದು ಸರಕಾರವೆಂದರೆ ಅದು ಬಿಜೆಪಿ-ಆರ್‌ಎಸ್‌ಎಸ್ ಪಕ್ಷದ ಕಛೇರಿಯಂತಾಗಿದೆ.

 

2014ರಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ ಹಲ್ಲೆ, ದೌರ್ಜನ್ಯದ ಮೂಲಕ ತಮ್ಮ ಸರ್ವಾಧಿಕಾರದ ಹೆಜ್ಜೆಗಳನ್ನು ಊರಲು ಆರಂಭಿಸಿದ ಬಿಜೆಪಿ ನಂತರ ಕ್ಷಿಪ್ರಗತಿಯಲ್ಲಿ ಚುನಾವಣಾ ಆಯೋಗವನ್ನು ವಶಪಡಿಸಿಕೊಂಡಿತು. ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಇಡಿ, ಸಿಬಿಐ, ಎನ್‌ಐಎ ಬಳಸಿಕೊಂಡಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಬಹುಮತವನ್ನೇ ನಗಣ್ಯಗೊಳಿಸಿತು. ರಾಜ್ಯಪಾಲರನ್ನು ಕೈಗೊಂಬೆಯಾಗಿಸಿಕೊಂಡು ವಿರೋಧ ಪಕ್ಷಗಳ ಸರಕಾರದ ಮೇಲೆ ನಿರಂತರ ದಾಳಿ ನಡೆಸಲಾಯಿತು. ಇದರ ಮುಂದುವರಿದ ಭಾಗವಾಗಿ 2022ರಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವಲ್ಲಿ ದಾಪುಗಾಲಿಟ್ಟಿದೆ. ಅದರ ಮುನ್ನುಡಿಯನ್ನು ಸಚಿವ ಕಿರಣ್‌ ರಿಜಿಜೂ ಮತ್ತು ಉಪರಾಷ್ಟ್ರಪತಿ ಧನ್ಕರ್ ಬರೆಯುತ್ತಿದ್ದಾರೆ. ಕತೆ ಪ್ರಾರಂಭವಾಗಲಿದೆ.

ಇದನ್ನು ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

ನ್ಯಾಯವಾದಿ ಗೌತಮ್ ಭಾಟಿಯಾ ಅವರು ‘ಆರೋಗ್ಯಪೂರ್ಣವಾದ ಸಂವಿಧಾನಿಕ ಪ್ರಜಾಪ್ರಭುತ್ವಗಳಿಗೆ ನಾಲ್ಕನೇ ಸಂಸ್ಥೆಗಳ (ವಿಶ್ವಾಸಾರ್ಹ ಸಂಸ್ಥೆಗಳು) ಅಗತ್ಯವಿದೆ. ನಮಗಿರುವ ಹಕ್ಕುಗಳನ್ನು ಜಾರಿಗೊಳಿಸಲು ಅವಶ್ಯಕವಾದ ಮೂಲಭೂತ ಸೌಕರ್ಯಗಳಿಲ್ಲದೇ ಹೋದರೆ ಆ ಹಕ್ಕುಗಳು ಪರಿಣಾಮಕಾರಿಯಾಗಿರುವುದಿಲ್ಲ. ಈ ಕಾರಣಕ್ಕೆ ಈ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆಗೆ ‘ನಾಲ್ಕನೇ ಸಂಸ್ಥೆಗಳ’ನ್ನು ಜೋಡಿಸಲಾಗುತ್ತದೆ. ‘ಮಾಹಿತಿ ಹಕ್ಕು ಕಾಯ್ದೆ’ಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಇದು ಕೇವಲ ಕಾಗಗದ ಮೇಲೆ ಉಳಿದುಕೊಳ್ಳದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಾಲ್ಕನೇ ಸಂಸ್ಥೆಯಾದ ‘ಮಾಹಿತಿ ಆಯೋಗ’ದ ಅವಶ್ಯಕತೆ ಇದೆ. ಈ ಆಯೋಗವು ಸಮರ್ಥವಾಗಿ ಕಾರ್ಯನಿರ್ವಹಿಸಲು ಅದು ಸ್ವತಂತ್ರ ಸಂಸ್ಥೆಯಾಗಿರಬೇಕಾಗುತ್ತದೆ. ಅಗತ್ಯವಿರುವ ಸಿಬ್ಬಂದಿ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ’ ಎಂದು ಬರೆಯುತ್ತಾರೆ. ಆದರೆ ಯಾವುದೇ ಬಗೆಯ ಪಾರದರ್ಶಕತೆಯನ್ನು ತಿರಸ್ಕರಿಸುವ ವರ್ತಮಾನದ ಪ್ರಭುತ್ವವು ತನ್ನ ಬಳಿಯಿರುವ ಮಾಹಿತಿಯನ್ನು ತನ್ನದೇ ಪ್ರಜೆಗಳೊಂದಿಗೆ ಹಂಚಿಕೊಳ್ಳಲು ಸಹ ಇಚ್ಚಿಸುವುದಿಲ್ಲ. ಇದರ ಪರಿಣಾಮವಾಗಿ ಮೋದಿ ಸರಕಾರವು ಈ ‘ಮಾಹಿತಿ ಆಯೋಗ’ಕ್ಕೆ ಅಧ್ಯಕ್ಷರನ್ನು ನೇಮಿಸಲು ವಿಳಂಬ ನೀತಿಯನ್ನು ಅನುಸರಿಸಿತು. ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಿಲ್ಲ ಮತ್ತು ಮುಖ್ಯವಾಗಿ ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಯಾವುದೇ ಬಗೆಯ ಸರಕಾರಿ ಮಾಹಿತಿಯನ್ನು ನೀಡಲು ನಿರಾಕರಿಸುತ್ತಿದೆ. ಇಂದು ನಾಲ್ಕನೇ ಸಂಸ್ಥೆ ‘ಮಾಹಿತಿ ಆಯೋಗ’ ದುರ್ಬಲ, ನಿಷ್ಪ್ರಯೋಜಕ ಸಂಸ್ಥೆಯಾಗಿದೆ. ಇತರ ನಾಲ್ಕನೇ ಸಂಸ್ಥೆಗಳಾದ ವಿಜಿಲೆನ್ಸ್ ಆಯೋಗ, ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ, ಸಿಎಜಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ, ಅಲ್ಪಸಂಖ್ಯಾತರ ಆಯೋಗ, ಮಹಿಳಾ ಆಯೋಗ ಮುಂತಾದವುಗಳ ವಸ್ತುಸ್ಥಿತಿಯೂ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಈ ಎಲ್ಲಾ ‘ಸಂವಿಧಾನದ ಕಾವಲು ಸಂಸ್ಥೆ’ಗಳನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರವು ಯಶಸ್ವಿಯಾಗಿ ನಿಷ್ಕ್ರಿಯೆಗೊಳಿಸಿದೆ.

ಇಲ್ಲೊಂದು ಆಶಾಕಿರಣ

ಇಂತಹ ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚುನಾವಣಾ ಆಯೋಗವನ್ನು ಹೇಗೆ ರಚಿಸಲಾಗುತ್ತದೆ ಮತ್ತು ಅದಕ್ಕೆ ಚುನಾವಣಾ ಆಯುಕ್ತರನ್ನು ಹೇಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎನ್ನುವುದರ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ನ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ. ಇದರ ಮುಂದುವರೆದ ಭಾಗವಾಗಿ 24, ನವೆಂಬರ್ 2022ರಂದು ವಿಚಾರಣೆಯ ಸಂದರ್ಭದಲ್ಲಿ ‘ಮುಖ್ಯ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರನ್ನು ಮಿಂಚಿನ ವೇಗದಲ್ಲಿ ನೇಮಕಾತಿ ಮಾಡಿಕೊಂಡಿರುವುದನ್ನು’ ಪ್ರಶ್ನಿಸಿದೆ. ನವೆಂಬರ್ 18ರ ಪ್ರಾರಂಭ ಮತ್ತು ಮುಕ್ತಾಯದ 24 ಗಂಟೆಗಳ ಒಳಗೆ ನೇಮಕಾತಿ ಆಗಿರುವ ನಿಗೂಢತೆಯನ್ನು ಸಹ ಪ್ರಶ್ನಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ನ್ಯಾಯವಾದಿ ಪ್ರಶಾಂತ ಭೂಷಣ್ ಅವರು ‘ಅರುಣ್ ಗೋಯಲ್ ನವೆಂಬರ್ 18ರಂದು ಸರಕಾರದ ಕಾರ್ಯದರ್ಶಿಯಾಗಿದ್ದರು. ಆ ದಿನದಂದೇ ಸ್ವಯಂ ನಿವೃತ್ತಿ ತೆಗೆದುಕೊಂಡರು. ನವೆಂಬರ್ 19ರಂದು ಅವರನ್ನು ಚುನಾವಣಾ ಆಯೋಗದ ಆಯುಕ್ತರಾಗಿ ನೇಮಕಾತಿ ಮಾಡಲಾಯಿತು. ನವೆಂಬರ್ 21ರಂದು ಅವರು ಅಧಿಕಾರ ಸ್ವೀಕರಿಸಿದರು’ ಎಂದು ವಿವರಿಸಿದರು. ನ್ಯಾಯಮೂರ್ತಿ ಕೆ.ಎಂ.ಜೊಸೆಫ್ ಇಡೀ ಪ್ರಕ್ರಿಯೆಯ ವಿಶ್ವಾಸರ್ಹತೆಯನ್ನು ಪ್ರಶ್ನಿಸಿದರು. ನ್ಯಾಯಮೂರ್ತಿ ಅಜಯ್ ರಸ್ತೋಗಿ ‘ಈ ಹುದ್ದೆಯು ಮೇ ತಿಂಗಳಿಂದಲೂ ಖಾಲಿಯಿತ್ತು. ಆಗ ಇರದ ತುರ್ತು ಈಗ ಯಾಕೆ? ಇದು ಯಾವ ಬಗೆಯ ಮೌಲ್ಯ ಮಾಪನ’ ಎಂದು ಖಾರವಾಗಿ ಪ್ರಶ್ನಿಸಿದರು. ನ್ಯಾಯಮೂರ್ತಿ ಅನಿರುದ್ಧ ಭೋಸ್ ‘ಅರುಣ್ ಗೋಯಲ್ ಸ್ವಯಂ ನಿವೃತ್ತಿ ಪಡೆದ ದಿನದಂದೇ ನೇಮಕಾತಿ ಮಾಡಿರುವಂತಹ ಘಟನೆ ಬೇರೆ ಎಲ್ಲಾದರೂ ನಡೆದಿದೆಯೇ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ‘ಅದು ಕಾಕತಾಳೀಯ’ ಎಂದು ಉತ್ತರಿಸಿದರು. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ‘ಕಾನೂನು ಮಂತ್ರಿ ಅಂತಿಮಗೊಳಿಸಿದ ನಾಲ್ಕು ಹೆಸರುಗಳ ಪೈಕಿ ಅರುಣ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಾಲ್ವರನ್ನು ಆಯ್ಕೆ ಮಾಡಲು ಕಾನೂನು ಮಂತ್ರಿ ಯಾವ ಮಾನದಂಡಗಳು ಮತ್ತು ವಿಧಾನಗಳನ್ನು ಅನುಸರಿಸಿದ್ದಾರೆ?… ಚುನಾವಣಾ ಆಯೋಗದ ಆಯುಕ್ತರ ಅವಧಿ ಆರು ವರ್ಷಗಳು. ಈ ಅವಧಿಯನ್ನು ಅವರು  ಸಂಪೂರ್ಣಗೊಳಿಸಬೇಕು. ಆದರೆ ಕಾನೂನು ಮಂತ್ರಿಗಳು ಆರಿಸಿದ ನಾಲ್ಕು ಅಭ್ಯರ್ಥಿಗಳ ವಯಸ್ಸು 62ರ ಆಸುಪಾಸಿದೆ. ಇವರು ಆರು ವರ್ಷಗಳ ಅವಧಿಯನ್ನು ಪೂರೈಸುವುದಿಲ್ಲ… ಅಂದರೆ ನಿವೃತ್ತಿಯ ಹಂತದಲ್ಲಿರುವವರನ್ನು ಮಾತ್ರ ಆಯ್ಕೆ ಮಾಡಿರುವ ನಿಮ್ಮ ಉದ್ದೇಶ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಬಾರದೆಂದಲ್ಲವೇ? ಇದು ಕಾನೂನಿನ ಉಲ್ಲಂಘನೆಯಲ್ಲವೇ?’ ಎಂದು ಪ್ರಶ್ನಿಸಿದರು. ಈ ಆಯುಕ್ತರ ನೇಮಕಾತಿ ಹಗರಣದ ವಿಚಾರಣೆಯ ವಿವರಗಳನ್ನು ವಿಶ್ಲೇಷಿಸಿದಾಗ ನ್ಯಾಯಂಗದ ಮೇಲೆ ಭರವಸೆ ಮೂಡುತ್ತದೆ. ಮೋದಿ ಸರಕಾರದ ಸರ್ವಾಧಿಕಾರಕ್ಕೆ ನಿಯಂತ್ರಣ ಹೇರುವ ರೀತಿಯಲ್ಲಿ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ವಿಚಾರಣೆ ನಡೆಸಿದೆ. ಮುಂದಿನ ವರ್ಷದ ಜನವರಿಯಲ್ಲಿ ತೀರ್ಪು ಕೊಡುವ ಸಾಧ್ಯತೆಯಿದೆ. ಕಾದು ನೋಡಬೇಕು.

ಉಪಸಂಹಾರ

ದೆಹಲಿಯಿಂದ ಫರ್ಮಾನು ಹೊರಡಿಸುವುದರ ಮೂಲಕ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಪ್ರಭುತ್ವದ ಅಡಿಯಾಗಿಸುವುದರ ಮೂಲಕ ನೆಹ್ರೂವಿಯನ್ ಆದರ್ಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ನಾಶ ಮಾಡಲಾಗುತ್ತಿದೆ. ಕಾನೂನು ಮಂತ್ರಿ ಕಿರಣ್‌ ರಿಜಿಜೂ, ಉಪ ರಾಷ್ಟ್ರಪತಿ ಜಗದೀಶ್‌ ಧನ್ಕರ್ ಅವರ ನ್ಯಾಯಾಂಗ ವ್ಯವಸ್ಥೆಯ ಕುರಿತಾದ ಟೀಕೆಗಳು ನ್ಯಾಯಾಂಗ ಕಬ್ಜಾದ ಮುನ್ಸೂಚನೆಯಂತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರವು ದೇಶದ ಆಧಾರಸ್ತಂಭಗಳನ್ನು, ನಾಲ್ಕನೇ ಸಂಸ್ಥೆಗಳನ್ನು ತಮ್ಮ ವಶಪಡಿಸಿಕೊಳ್ಳುವುದರ ಮೂಲಕ, ತನ್ನ ನಿರ್ದೇಶನಕ್ಕೆ ಅನುಗುಣವಾಗಿ ಪುನರಚಿಸುವುದರ ಮೂಲಕ ಸಂವಿಧಾನವನ್ನು ಬದಲಾಯಿಸದೆಯೇ ಪ್ರಜಾಪ್ರಭುತ್ವದ ಬುನಾದಿಯನ್ನು ಶಿಥಿಲಗೊಳಿಸುತ್ತಿದೆ. ಪ್ರಜಾಪ್ರಭುತ್ವದ ಭಾಗವಾದ ಚುನಾವಣೆಯ ಮೂಲಕ ಅಧಿಕಾರ ಪಡೆದುಕೊಂಡು ಅದೇ ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸುವ ಸರಕಾರ ಈ ಕಾರ್ಯನೀತಿಗಳು ನವ ಸರ್ವಾಧಿಕಾರದ ಮಾದರಿಗೆ ಉದಾಹರಣೆಯಾಗಿದೆ. ಜಾನ್ ಕೀನ್ ‘ಇಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಸರಕಾರವನ್ನು ಆಯ್ಕೆ ಮಾಡುವವರುʼ ʻʻಕಾಲ್ಪನಿಕ ಜನರುʼʼ ಎನ್ನುತ್ತಾನೆ. ಬಿಜೆಪಿ ಪಕ್ಷದ ಚುನಾವಣಾ ಗೆಲುವುಗಳು ಸಹ ಈ ಸಾರ್ವಜನಿಕ ಸಂಸ್ಥೆಗಳ ನಿರ್ನಾಮಕ್ಕೆ ಕುಮ್ಮಕ್ಕು ಕೊಡುತ್ತಿದೆ. ಈ ರೀತಿ ಶೋಷಕರನ್ನೇ ಆಯ್ಕೆ ಮಾಡುವುದರ ಮೂಲಕ ಆ ‘ಕಾಲ್ಪನಿಕ ಜನರು’ ಪ್ರಜಾತಾಂತ್ರಿಕವಾಗಿಯೇ ಸಂವಿಧಾನವನ್ನು ಅಪ್ರಸ್ತುತಗೊಳಿಸುತ್ತಿದ್ದಾರೆ. ಸದ್ಯಕ್ಕೆ ನ್ಯಾಯಾಂಗವೊಂದೇ ಉಳಿದುಕೊಂಡ ಆಶಾಕಿರಣ.

ಇದನ್ನು ಓದಿ: ಆಗಬೇಕಿದೆ ಚುನಾವಣಾ ಆಯೋಗದ್ದೇ ಸುಧಾರಣೆ

Donate Janashakthi Media

Leave a Reply

Your email address will not be published. Required fields are marked *