ಪ್ರಧಾನಿ ಮೋದಿ ರಾಜ್ಯ ಭೇಟಿ: ಹೆಚ್ಚಿದ ಭದ್ರತೆ-ಎಲ್ಲೆಲ್ಲೂ ಪೊಲೀಸರೇ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೂನ್‌ 20-21ರಂದು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚಿನ ಭದ್ರತೆ ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎರಡು ನಗರದ ಎಲ್ಲೆಲ್ಲೂ ಪೊಲೀಸರು ಭದ್ರತ್ರೆ ಕೈಗೊಂಡಿದ್ದಾರೆ.

ಪ್ರಧಾನಿ ಮೋದಿ ನಿಗದಿಯಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಕಾರಣ ಪ್ರವಾಸಿ ತಾಣಗಳಿಗೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಅರಮನೆ ನಗರಿ ಮೈಸೂರಿಗೆ ಭೇಟಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಭಾರಿ ಪೊಲೀಸ್​ ಭದ್ರತೆ ಮಾಡಲಾಗುತ್ತಿದೆ. ಅವರು ಸಂಚರಿಸುವ ರಸ್ತೆಯಲ್ಲಿ ಪೊಲೀಸ್​ ಬಂದೋಬಸ್ತ್‌ ಮಾಡಲಾಗುತ್ತಿದೆ. ಕೇಂದ್ರ ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಯೋಗಾ ತಾಲೀಮು

ವಿಶ್ವ ಯೋಗ ದಿನದಂದು ಪ್ರಧಾನ ಮಂತ್ರಿ ಮೋದಿ ಭಾಗವಹಿಸಲಿರುವ ಕಾರ್ಯಕ್ರಮದ ಅಂತಿಮ ಹಂತದ ತಾಲೀಮು ಮೈಸೂರಿನಲ್ಲಿ ಭಾನುವಾರ ನಡೆಯಿತು. ಅರಮನೆ ಆವರಣದಲ್ಲಿ ಇಂದು ಬೆಳಗ್ಗೆ 6.30ಕ್ಕೆ ಸಾವಿರಾರು ಮಂದಿ ಯೋಗಪಟುಗಳಿಂದ ತಾಲೀಮು ನಡೆಯಿತು.

ಮೈಸೂರು ಅರಮನೆ ಪ್ರವೇಶ ನಿಷೇಧ

ಇಂದಿನಿಂದ(ಜೂನ್ 19) ಮೂರು ದಿನಗಳ ಕಾಲ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಜೂನ್ 20ರ ಸಂಜೆ ಮೈಸೂರಿಗೆ ಆಗಮಿಸಲಿದ್ದಾರೆ. ಭದ್ರತೆಯ ಕಾರಣದಿಂದಾಗಿ ಮೈಸೂರು ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜೂನ್ 21ರಂದು ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಜೂನ್‌ 20ರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.ಸಾರ್ವಜನಿಕ ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದಕ್ಕೂ ನಿಷೇಧ ಹೇರಲಾಗಿದೆ. ಪ್ರವೇಶ ನಿಷೇಧಿತ ಅವಧಿಯಲ್ಲಿ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

ಪ್ರಧಾನಿ ಮೋದಿ ರ‍್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿರುವ ಕಾರಣದಿಂದಾಗಿ ಮೈಸೂರಿನಲ್ಲಿರುವ ಮಾಲ್​ಗಳನ್ನು ಎರಡು ದಿನ ಮುಚ್ಚಬೇಕೆಂದು ಆದೇಶಿಸಲಾಗಿದೆ. ಮೋದಿ ಸಂಚರಿಸುವ, ಆಗಮಿಸುವ ಎಲ್ಲಾ ಕಾರ್ಯಕ್ರಮ ಸ್ಥಳಗಳಲ್ಲಿಯೂ ಭದ್ರತೆ ಏರ್ಪಡಿಸಲಾಗಿದೆ.

ಹೋಟೆಲ್‌ ಗ್ರಾಹಕರು ಖಾಲಿ

ಮೋದಿ ಆಗಮನ ಹಿನ್ನಲೆ ರ‍್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ಪ್ರವೇಶಾತಿ ನಿರ್ಬಂಧಿಸಲಾಗಿದೆ. ಇದರೊಂದಿಗೆ ಭದ್ರತಾ ಪಡೆಯು ಇಡೀ ಹೋಟೆಲ್ ಅನ್ನು ಖಾಲಿ ಮಾಡಿಸುತ್ತಿದೆ. ಇತರ ಗ್ರಾಹಕರಿಗೆ ಬೇರೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಹೋಟೆಲ್​ ಒಟ್ಟು 141 ಕೊಠಡಿಗಳನ್ನು ಹೊಂದಿದೆ.

ವಾಹನ ಸಂಚಾರ ಮಾರ್ಗ ಬದಲು

ಮೈಸೂರು ಅರಮನೆಯಲ್ಲಿ ಯೋಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಸ್ಸುಗಳ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಮೈಸೂರು ನಗರಕ್ಕೆ ಆಗಮಿಸುವ ಬಸ್ಸುಗಳ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಿದೆ. ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ಸುಗಳ ನಿಲುಗಡೆಯಲ್ಲೂ ಬದಲಾವಣೆಯಾಗಿದೆ.

ಬೆಂಗಳೂರು ಕೆಲವು ಶಾಲೆಗಳಿಗೆ ರಜೆ

ಬಿಗಿಭದ್ರತೆಯ ದೃಷ್ಟಿಯಿಂದ  ಮೋದಿ ಸಂಚರಿಸಲಿರುವ ಮಾರ್ಗದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕೆಂಗೇರಿ ಉಪನಗರದಿಂದ ಕೊಮ್ಮಘಟ್ಟದವರೆಗೆ ಹಾಗೂ ಪಟ್ಟಣಗೆರೆ ವಾರ್ಡ್, ಜ್ಞಾನಭಾರತಿ ವಾರ್ಡ್ ಮತ್ತು ಕುಂಬಳಗೋಡು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಜೂನ್‌ 20ರಂದು ರಜೆ ಘೋಷಿಸಲಾಗಿದೆ. ಪ್ರಸ್ತುತ ಈ ವ್ಯಾಪ್ತಿಯಲ್ಲಿ ಬರುವ ಒಟ್ಟು 22 ಸರಕಾರಿ/ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ.

ಅಲ್ಲದೆ, ಪ್ರಧಾನಿ ಮೋದಿ ಹಾದು ಹೋಗಲಿರುವ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆಯನ್ನು ಘೋಷಿಸಿದೆ.

ರಸ್ತೆ ಮಾರ್ಗ ಸಂಚಾರ ರದ್ದು

ಹಲವು ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ, ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಜೊತೆಗೆ ಒಂದು ಹೆಚ್ಚುವರಿ ಕಾರ್ಯಕ್ರಮವನ್ನು ಇದೀಗ ಸೇರ್ಪಡೆ ಮಾಡಲಾಗಿದೆ. ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್​ ವರೆಗೆ ನಡೆಯಬೇಕಿದ್ದ ರಸ್ತೆ ಮಾರ್ಗ ರದ್ದುಗೊಂಡಿದೆ.

ಭದ್ರತೆಯ ಕಾರಣದಿಂದಾಗಿ ರಸ್ತೆ ಮಾರ್ಗದಲ್ಲಿ ಸಂಚಾರಕ್ಕೆ ಎಸ್​ಜಿಪಿ ಅನುಮತಿ ನೀಡಿಲ್ಲ. ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ವಾಯುಮಾರ್ಗದಲ್ಲೇ ತೆರಳಲು ಎಸ್‌ಜಿಪಿ ವ್ಯವಸ್ಥೆ ಮಾಡಿದೆ. ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕವೇ ಪ್ರಯಾಣಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *