ಜನವಾದಿ ಮಹಿಳಾ ಸಂಘಟನೆಯ ಅಭಿನಂದನೆ
ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) 22 ವರ್ಷದ ಮಹ್ಸಾ ಅಮೀನಿ ಇರಾನಿನ “ನೈತಿಕತೆ ಪೋಲೀಸ್”ನ ಕಸ್ಟಡಿ ಸಾವನ್ನು ಪ್ರತಿಭಟಿಸಿ ಕಳೆದ ಮೂರು ತಿಂಗಳಿಂದ ಬೀದಿಗಿಳಿದಿರುವ ಇರಾನಿನ ವೀರ ಮಹಿಳೆಯರು ಮತ್ತು ಎಲ್ಲ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಮಹ್ಸಾ ಅಮಿನಿ. ಹಿಜಾಬ್‌ನಿಂದ ತಲೆಯನ್ನು ಸರಿಯಾಗಿ ಮುಚ್ಚಿರಲಿಲ್ಲ ಎಂದು ಆರೋಪಿಸಿ ಆಕೆಯನ್ನು “ನೈತಿಕತೆ ಪೊಲೀಸ್” ಎನಿಸಿಕೊಂಡ ಪಡೆ ಬಂಧಿಸಿತ್ತು.
ಇರಾನಿನ ಮಹಿಳೆಯರು ಹಿಜಾಬ್ ಅನ್ನು ಸುಟ್ಟು ಮತ್ತು ಸಾರ್ವಜನಿಕವಾಗಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸುವ ಮೂಲಕ ಈ ಕೊಲೆಯನ್ನು ಪ್ರತಿಭಟಿಸಿದರು. ಅವರೊಂದಿಗೆ ಇರಾನಿನ ಅನೇಕ ಪ್ರಗತಿಪರ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ಕಲಾವಿದರು ಮತ್ತು ನಾಗರಿಕರು ದಬ್ಬಾಳಿಕೆಯ ಆಡಳಿತದ ಕೋಪವನ್ನು ಧಿಕ್ಕರಿಸಿ ನಿಂತರು ಮತ್ತು ಲಾಠಿ, ಗುಂಡುಗಳನ್ನು ಎದುರಿಸಿದರು. ಮಹಿಳೆಯರು ತಮ್ಮ ಉಡುಪನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಸಾರ್ವಜನಿಕವಾಗಿ ಮುಕ್ತವಾಗಿ ಚಲಿಸುವ ಹಕ್ಕಿಗಾಗಿ ಈ ಅವಿರತ ಮತ್ತು ಒಗ್ಗಟ್ಟಿನ ಹೋರಾಟವು ಇರಾನ್ ಸರ್ಕಾರ ಈ “ನೈತಿಕತೆ ಪೊಲೀಸ”ನ್ನು ಹಿಂತೆಗೆದುಕೊಳ್ಳುವಂತೆ ಬಲವಂತಪಡಿಸಿದೆ. ಇರಾನಿನ ಅಟಾರ್ನಿ ಜನರಲ್ ಅವರು “ನೈತಿಕತೆ ಪೊಲೀಸ್” ದೇಶದ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿಲ್ಲ ಎಂದು ಘೋಷಿಸಿದರು. ಸ್ವಾಯತ್ತತೆ ಮತ್ತು ಸಮಾನತೆಗಾಗಿ ಒಗ್ಗಟ್ಟಿನ ಹೋರಾಟ ಏನು ಮಾಡಬಹುದು ಎಂಬುದಕ್ಕೆ ಇರಾನಿನ ಮಹಿಳೆಯರು ಉಜ್ವಲ ಉದಾಹರಣೆ ನೀಡಿದ್ದಾರೆ ಎಂದು ಎಐಡಿಡಬ್ಲ್ಯುಎ ಹೇಳಿದೆ.
ಇದು ಇರಾನಿನ ಮಹಿಳೆಯರಿಗೆ ಮತ್ತು ಪ್ರಪಂಚದಾದ್ಯಂತ ವಿವಿಧ ರೀತಿಯ ದಬ್ಬಾಳಿಕೆ ಮತ್ತು ಧಾರ್ಮಿಕ ಉಗ್ರವಾದವನ್ನು ವಿರೋಧಿಸುವ ಮಹಿಳೆಯರಿಗೆ ಕೂಡ ಒಂದು ಮಹಾನ್ ವಿಜಯವಾಗಿದೆ. ವಿಶ್ವದಾದ್ಯಂತ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲು ಧರ್ಮವನ್ನು ಬಳಸುವ ನಿರಂಕುಶ ಪ್ರಭುತ್ವಗಳಿಗೆ ಇದು ಪಾಠವಾಗಿದೆ. ಎಂದು ಅದು ಹೇಳಿದೆ.
ಬಂಧಿತರಾಗಿರುವ ಪ್ರತಿಭಟನಾಕಾರರೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ ಎಐಡಿಡಬ್ಲ್ಯುಎ, ಈಗ “ನೈತಿಕತೆ ಪೋಲೀಸ”ನ್ನು ಹಿಂಪಡೆದಿರುವುದರಿಂದ ರೈಸಿ ಆಡಳಿತವು ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತದೆ ಮತ್ತು ಈ ಪ್ರತಿಭಟನೆಗಳ ಸಮಯದಲ್ಲಿ ಜೈಲು ಪಾಲಾದ ಎಲ್ಲರನ್ನು ಬಿಡುಗಡೆ ಮಾಡುತ್ತದೆ ಎಂದು ತಾನು ನಿರೀಕ್ಷಿಸುವುದಾಗಿ ಹೇಳಿದೆ.