– ಪ್ರೊ. ಪ್ರಭಾತ್ ಪಟ್ನಾಯಕ್
ಅನುವಾದ : ಕೆ.ಎಂ.ನಾಗರಾಜ್
ನಮ್ಮ ಮುಂದೆ ಇಂದು ಸಂಭವಿಸುತ್ತಿರುವ ವೈಜ್ಞಾನಿಕ ಆವಿಷ್ಕಾರಗಳ ವಿಚಾರಶೂನ್ಯ ಅಳವಡಿಕೆಯ ಸಂಬಂಧವಾಗಿ ಎದ್ದು ಕಾಣುವ ಉದಾಹರಣೆಯು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದೆ. ಕೃತಕ ಬುದ್ಧಿಮತ್ತೆಯು ಸೃಷ್ಟಿಸುವ ಬೃಹತ್ ನಿರುದ್ಯೋಗದ ಸಮಸ್ಯೆಗೆ ಮಾತ್ರ ನನ್ನ ಕಾಳಜಿ ಸೀಮಿತಗೊಂಡಿದೆ. ಯಂತ್ರಗಳ ಬಳಕೆಯ ನಂತರವೂ ಮೆಟ್ರೊಪಾಲಿಟನ್ ದೇಶಗಳಲ್ಲಿ ಬೃಹತ್ ಪ್ರಮಾಣದ ನಿರುದ್ಯೋಗವು ಐತಿಹಾಸಿಕವಾಗಿ ಉಂಟಾಗದಿರುವ ಕಾರಣದಲ್ಲಿ ಎರಡು ಭಾಗಗಳಿವೆ: ಮೊದಲನೆಯದು, ವಸಾಹತು ಮಾರುಕಟ್ಟೆಗಳು ಸುಲಭವಾಗಿ ಒದಗುತ್ತಿದ್ದುದರಿಂದಾಗಿ, ತಾಂತ್ರಿಕ ಬದಲಾವಣೆಗಳ ಪರಿಣಾಮವಾಗಿ ಉಂಟಾದ ನಿರುದ್ಯೋಗವನ್ನು ವಸಾಹತುಗಳಿಗೆ ವರ್ಗಾಯಿಸಲಾಯಿತು. ಎರಡನೆಯದು, ತಾಂತ್ರಿಕ ಬದಲಾವಣೆಗಳ ಪರಿಣಾಮವಾಗಿ, ..ಉದ್ಯೋಗ ಕಳೆದುಕೊಂಡವರು ಅಥವಾ ಉದ್ಯೋಗ ಹುಡುಕುವವರು ವಿದೇಶಗಳಿಗೆ ವಲಸೆ ಹೋದರು. “ದೀರ್ಘ ಹತ್ತೊಂಬತ್ತನೇ ಶತಮಾನ”ದ ಉದ್ದಕ್ಕೂ (1789-1919), ಸುಮಾರು 5 ಕೋಟಿ ಯುರೋಪಿಯನ್ನರು ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಂತಹ ಪ್ರದೇಶಗಳಿಗೆ ವಲಸೆ ಹೋದರು. ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ವಸಾಹತುಶಾಹಿಯು ಇನ್ನೂ ಅಸ್ತಿತ್ವದಲ್ಲಿದೆ. ಆದರೆ ಮೂರನೇ ಜಗತ್ತಿನ ದೇಶಗಳ ಮಾರುಕಟ್ಟೆಗಳು ಮೆಟ್ರೊಪಾಲಿಟನ್ ದೇಶಗಳ ಒಟ್ಟಾರೆ ಬೇಡಿಕೆಯಲ್ಲಿ ಉದ್ಭವವಾಗುವ ಯಾವುದೇ ಕೊರತೆಯನ್ನು ಕಡಮೆ ಮಾಡುವಲ್ಲಿ ಅಸಮರ್ಪಕವಾಗಿವೆ. ಅಂತೆಯೇ, ಪ್ರಭುತ್ವವು ದೇಶದ ಒಟ್ಟಾರೆ ಬೇಡಿಕೆಯ ಕೊರತೆಯನ್ನು ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ.
ಕಳೆದ ಒಂದು ಸಾವಿರ ವರ್ಷಗಳ ಅವಧಿಯಲ್ಲಿ ಸಂಭವಿಸಿದ ವಿಜ್ಞಾನದ ಪೂರ್ಣ ಅರಳುವಿಕೆಯ ಅಂತಸ್ಸಾರದಲ್ಲಿ ಒಂದು ವಿರೋಧಾಭಾಸವಿದೆ. ವಿಜ್ಞಾನದ ಪೂರ್ಣ ಅರಳುವಿಕೆಯು ಸಾರಭೂತವಾಗಿ ಮಾನವ ಸ್ವಾತಂತ್ರ್ಯವನ್ನು ಅಗಾಧವಾಗಿ ಹೆಚ್ಚಿಸುವ ಸಾಧ್ಯತೆಯನ್ನು ಹೊಂದಿದೆ ಮತ್ತು ಮನುಷ್ಯ-ಪ್ರಕೃತಿಯ ದ್ವಂದ್ವದಲ್ಲಿ ವಿಜ್ಞಾನವು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದೇ ಸತ್ಯ/ಅಂತಿಮ ಎಂಬ ನಿಲುವು ತಳೆಯದೆ ನಿರಂತರವಾಗಿ ಸ್ವಯಂ-ಪ್ರಶ್ನೆ ಮಾಡಿಕೊಳ್ಳುವ ಮೂಲಕ ವೈಜ್ಞಾನಿಕ ಆಚರಣೆಯು ಈಗಾಗಲೇ “ತಿಳಿದಿರುವುದನ್ನು” ಮೀರಿ ಹೋಗುವ ಗುರಿಯನ್ನು ಸದಾ ಕಾಲವೂ ಹೊಂದಿರುತ್ತದೆ. ಹಾಗಾಗಿ ಅದು ಮನುಷ್ಯರು ವಿಮೋಚನೆಗಾಗಿ ಕೈಗೊಳ್ಳುವ ಒಂದು ಸಾಮೂಹಿಕ ಕ್ರಿಯೆಯಾಗುವ ಸಾಧ್ಯತೆಯನ್ನು ಹೊಂದಿರುತ್ತದೆ. ಆದರೆ, ಈ ಸ್ವಾತಂತ್ರ್ಯದ ಭರವಸೆಯು ಇನ್ನೂ ಒಂದು ಗಮನಾರ್ಹ ಮಟ್ಟದಲ್ಲಿ ಈಡೇರಿಲ್ಲ. ಇದನ್ನು ಪೂರ್ಣವಾಗಿ ಸಿದ್ಧಿಸಿಕೊಳ್ಳುವುದು ಇನ್ನೂ ದೂರದ ಮಾತೇ ಸರಿ. ಆದರೆ, ಈವರೆಗಿನ ವಿಜ್ಞಾನದ ಪೂರ್ಣ ಅರಳುವಿಕೆಯನ್ನು ಕೆಲವು ವ್ಯಕ್ತಿಗಳು ಉಳಿದವರ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ಕೆಲವು ದೇಶಗಳು ಉಳಿದವರ ಮೇಲೆ ಅಧಿಪತ್ಯ ಸಾಧಿಸಲು ಬಳಸಿಕೊಂಡಿವೆ ವಿರೋಧಾಭಾಸವೆಂದರೆ, ಮಾನವ ಸ್ವಾತಂತ್ರ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವ ವೈಜ್ಞಾನಿಕ ಆಚರಣೆಯನ್ನೂ ಸಹ ಮಾನವರ ಮೇಲಿನ ಅಧಿಪತ್ಯವನ್ನು ಹೆಚ್ಚಿಸಿಕೊಳ್ಳಲು, ಅಂದರೆ, ಮಾನವ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲು ಬಳಸಿಕೊಳ್ಳಲಾಗಿದೆ.
ಈ ವಿರೋಧಾಭಾಸದ ಬೇರುಗಳು, ವೈಜ್ಞಾನಿಕ ಪ್ರಗತಿಯು ಮುಕ್ತವಾಗಿ ಸಾಗಲು ಸಮಾಜದ ಮೇಲೆ ಚರ್ಚ್ ಹೊಂದಿರುವ ಬಿಗಿ ಹಿಡಿತವನ್ನು ಸಡಿಲಿಸುವುದು ಅತ್ಯಗತ್ಯ ಎಂಬ ಅಂಶದಲ್ಲಿದೆ (ಸೂರ್ಯನೇ ಬ್ರಹ್ಮಾಂಡದ ಕೇಂದ್ರ; ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುತ್ತವೆ ಎಂಬ ಕೊಪರ್ನಿಕಸ್ ಸಿದ್ಧಾಂತವನ್ನು ಸಮರ್ಥಿಸಿದ ಗೆಲಿಲಿಯೊಗೆ ಚರ್ಚ್ ವಿಶಪ್ರಾಶನ ಮಾಡಿಸಿತು). ಸಮಾಜದ ಮೇಲಿನ ಈ ಬಿಗಿ ಹಿಡಿತದ ಸಡಿಲಿಕೆಯು ಊಳಿಗಮಾನ್ಯ ಪದ್ಧತಿಯಿಂದ ಬದಲಾಗುವ ಪ್ರಕ್ರಿಯೆಯ ಭಾಗವಾಗಿ ಸಂಭವಿಸುತ್ತದೆ. ಅಂದರೆ, ಈ ಸಡಿಲಿಕೆಯು ಬೂರ್ಜ್ವಾ ಕ್ರಾಂತಿಯ ಭಾಗವಾಗಿ ಸಂಭವಿಸುತ್ತದೆ. ಇದಕ್ಕೆ 1640ರ ಇಂಗ್ಲಿಷ್ ಕ್ರಾಂತಿಯು ಒಂದು ಪ್ರಮುಖ ಉದಾಹರಣೆಯಾಗಿದೆ (ಬ್ರಿಟನ್ನಿನಲ್ಲಿ ಅಳಿದುಳಿದ ಊಳಿಗಮಾನ್ಯದ ವಿಭಾಗವನ್ನು ಬೂರ್ಜ್ವಾ ವರ್ಗ ಮತ್ತು ಅದರ ಬೆಂಬಲಿಗರು 1640-1660ರ ಅವಧಿಯಲ್ಲಿ ನಾಶಪಡಿಸಿದ ಘಟನಾವಳಿಯನ್ನು ಇಂಗ್ಲಿಷ್ ಕ್ರಾಂತಿ ಎಂದು ಕರೆಯಲಾಗಿದೆ). ಹಾಗಾಗಿ, ಯುರೋಪಿನಲ್ಲಿ ಉಂಟಾದ ಆಧುನಿಕ ವಿಜ್ಞಾನದ ಅಭಿವೃದ್ಧಿಯು ಆರಂಭದಿಂದಲೂ ಬಂಡವಾಳಶಾಹಿಯ ಬೆಳವಣಿಗೆಯೊಂದಿಗೆ ಒಂದು ರೀತಿಯ ಸಂಕೀರ್ಣ ಸಂಬಂಧವನ್ನು ಹೊಂದಿದೆ. ಈ ಸಂಬಂಧವು ವಿಜ್ಞಾನದ ಮುನ್ನಡೆಯನ್ನು ಯಾವ ಉದ್ದೇಶಕ್ಕೆ ಬಳಕೆಮಾಡಿಕೊಳ್ಳಲಾಯಿತು ಎಂಬುದರ ಮೇಲೆ ಅಳಿಸಲಾಗದ ಮುದ್ರೆಯನ್ನೊತ್ತಿದೆ.
ಬೂರ್ಜ್ವಾಗಳು ಒತ್ತಿದ ಈ ಮುದ್ರೆಯ ಜ್ಞಾನಸಿದ್ಧಾಂತದ ಮೇಲಿನ ಪರಿಣಾಮ ಜಿಜ್ಞಾಸೆಗೊಳಗಾಯಿತು. ಪ್ರಕೃತಿಯನ್ನು “ಜಡ” ಎಂದು ಪರಿಭಾವಿಸುವುದು ಮತ್ತು ಅದರ ಮೇಲೆ ಮೇಲುಗೈ ಸಾಧಿಸುವುದನ್ನು ಯೂರೋಪಿಯನ್ನರ ಸಮರ್ಥನೆ ಮತ್ತು ಅದೇ ರೀತಿಯಲ್ಲಿ ವಿಶ್ವದ ದೂರ ದೂರದ ವಿಶಾಲ-ವಿಸ್ತಾರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಸ್ಥಳೀಯ ಜನರ ಮೇಲೆ “ಜಡತೆ”ಯನ್ನು ಆರೋಪಿಸಿ ಅವರ ಮೇಲೆ ಮೇಲುಗೈ (ಯಜಮಾನಿಕೆ) ಸಾಧಿಸಿದ ಬಗ್ಗೆ ಮತ್ತು ಆ ಮೂಲಕ ಸಾಮ್ರಾಜ್ಯಶಾಹಿ ವಿದ್ಯಮಾನವನ್ನು “ಸಮರ್ಥನೆ” ಮಾಡಿದ ಬಗ್ಗೆ ಅಕೀಲ್ ಬಿಲ್ಗ್ರಾಮಿಯಂತಹ ತತ್ವಜ್ಞಾನಿಗಳು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ವಿಜ್ಞಾನವು ಸ್ವಾತಂತ್ರ್ಯ-ವರ್ಧನೆಯ ಪಾತ್ರವನ್ನು ಬಂಡವಾಳಶಾಹಿಯನ್ನು ಮೀರುವ ಮೂಲಕ ಮಾತ್ರವೇ ಪೂರ್ಣವಾಗಿ ನಿರ್ವಹಿಸಬಲ್ಲದು ಎಂಬುದನ್ನು ತೀಕ್ಷ್ಣವಾಗಿ ಅರಿತಿದ್ದ ಮತ್ತು ಅಂತಹ ಒಂದು ಸನ್ನಿವೇಶವು ಚಾರಿತ್ರಿಕ ಕಾರ್ಯಸೂಚಿಗೆ ಬಂದ ಯುಗದ ಶ್ರೇಷ್ಠ ವಿಜ್ಞಾನಿಗಳು ಸಮಾಜವಾದದ ಹೋರಾಟದಲ್ಲಿ ಸೇರಿಕೊಂಡರು. ವಿಜ್ಞಾನದ ದುರುಪಯೋಗವನ್ನು ತಡೆಗಟ್ಟುವುದು ನಾಗರಿಕರಾದ ಅವರಿಗೆ ಅದು ಕೇವಲ ಒಂದು ಅಗತ್ಯವಾಗಿರಲಿಲ್ಲ; ಅದು ವಿಜ್ಞಾನಿಗಳಾಗಿ ಅವರಿಗೆ ಒಂದು ನೈತಿಕ ಅನಿವಾರ್ಯವೂ ಆಗಿತ್ತು: ವೈಜ್ಞಾನಿಕ ಪ್ರಗತಿಯನ್ನು ಉಂಟುಮಾಡಿದ ತಮ್ಮ ಪ್ರಾಯೋಗಿಕ ಆಚರಣೆಯ ದುರುಪಯೋಗದ ವಿರುದ್ಧ ಹೋರಾಡುವುದು ಅವರಿಗೆ ಒಂದು ಪರಮ ಪ್ರಾಮುಖ್ಯದ ವಿಷಯವಾಗಿತ್ತು.
ಇದನ್ನೂ ಓದಿ : ಬರ್ಬರತೆಯ ಪ್ರಪಾತಕ್ಕೆ ಬಂಡವಾಳಶಾಹಿ
ಸಮಾಜವಾದಕ್ಕಾಗಿ ಹೋರಾಡುವ ವಿಷಯದಲ್ಲಿ ಆಲ್ಬರ್ಟ್ ಐನ್ಸ್ಟೈನ್ರ ಉದಾಹರಣೆಯು ಸುಪ್ರಸಿದ್ಧವಾದುದು. ಅವರು ಒಬ್ಬ ಕೇವಲ ಸ್ವಯಂ-ಘೋಷಿತ ಸಮಾಜವಾದಿಯಾಗಿರಲಿಲ್ಲ. ರಾಜಕೀಯ ಚಟುವಟಿಕೆಗಳು ಮತ್ತು ಸಭೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದರು. ಈ ಕಾರಣದಿಂದಾಗಿ ಅಮೇರಿಕದ ಎಫ್ಬಿಐ ಬೇತಾಳನಂತೆ ಅವರ ಬೆನ್ನು ಹತ್ತಿತ್ತು ಮತ್ತು ಅವರ ಪ್ರತಿಯೊಂದು ಚಲನವಲನವನ್ನೂ ದಾಖಲಿಸುತ್ತಿತ್ತು. ಈ ದಾಖಲೆಗಳನ್ನು ಈಗ ಸಾರ್ವಜನಿಕಗೊಳಿಸಲಾಗಿದೆ. ವಾಸ್ತವವಾಗಿ, ಸಮಾಜವಾದದ ಮೇಲೆ ಅವರು ಹೊಂದಿದ್ದ ನಂಬಿಕೆಗಳ ಕಾರಣದಿಂದಾಗಿಯೇ ಪರಮಾಣು ಬಾಂಬ್ ಅನ್ನು ಅಭಿವೃದ್ಧಿ ಪಡಿಸಿದ ಮನ್ಹಾಟನ್ ಯೋಜನೆಯಲ್ಲಿ ಭಾಗವಹಿಸಲು ಅವರಿಗೆ ಭದ್ರತಾ ಸರ್ಟಿಫಿಕೇಟ್ ನೀಡಲಿಲ್ಲ. ಅಂತೆಯೇ ಬ್ರಿಟನ್ನಲ್ಲಿ, ಇಪ್ಪತ್ತನೇ ಶತಮಾನದ ಶ್ರೇಷ್ಠ ವಿಜ್ಞಾನಿಗಳು – ಜೆ.ಡಿ. ಬರ್ನಾಲ್, ಜೋಸೆಫ್ ನೀಧಮ್, ಜೆ.ಬಿ.ಎಸ್. ಹಾಲ್ಡೇನ್, ಹೈಮನ್ ಲೆವಿ, ಜಿ.ಹೆಚ್. ಹಾರ್ಡಿ, ಡೊರೊಥಿ ಹಾಡ್ಗ್ಕಿನ್ ಮುಂತಾದ ಅನೇಕ ವಿಜ್ಞಾನಿಗಳು ಎಡಪಂಥದ ಭಾಗವಾಗಿದ್ದರು.
ಆದರೆ, ನವ-ಉದಾರವಾದದ ಬಿರುಸಿನ ಆರಂಭದೊಂದಿಗೆ ಒಂದು ಮೂಲಭೂತ ಬದಲಾವಣೆಯೂ ಕಂಡು ಬಂತು. ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಸಂಶೋಧನೆಗಳಿಗೆ ಧನ ಸಹಾಯ ಮಾಡುವ ಜವಾಬ್ದಾರಿಯು ಪ್ರಭುತ್ವದಿಂದ ಖಾಸಗಿ ಸಂಸ್ಥೆಗಳಿಗೆ, ಅದರಲ್ಲೂ ಮುಖ್ಯವಾಗಿ ಕಾರ್ಪೊರೇಟ್ ದಾನಿಗಳಿಗೆ ವರ್ಗಾಯಿಸಲ್ಪಟ್ಟಿದೆ ಮತ್ತು ವಿಜ್ಞಾನವು “ಸರಕೀಕರಣ”ಗೊಂಡಿರುವುದು ಕಂಡುಬರುತ್ತದೆ. ಇದರ ಪರಿಣಾಮವಾಗಿ ಬಂಡವಾಳಶಾಹಿಯನ್ನು ಮೀರುವ ಅಗತ್ಯವನ್ನು ಒತ್ತಿಹೇಳುವ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಿಜ್ಞಾನಿಗಳ ಸ್ವಾತಂತ್ರ್ಯವು ಬಹಳವಾಗಿ ಮೊಟಕುಗೊಂಡಿದೆ. ವಿಜ್ಞಾನಿಯೊಬ್ಬರು ಸಂಶೋಧನಾ ಯೋಜನೆಯೊಂದರಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ, ಅವನು ಅಥವಾ ಅವಳು ಖಾಸಗಿ ದಾನಿಗಳಿಗೆ ಒಪ್ಪಿಗೆ ಆಗುವಂಥವರೇ ಆಗಿರಬೇಕು. ಒಂದು ವೇಳೆ ಒಬ್ಬ ವಿಜ್ಞಾನಿಯು ಸಮಾಜವಾದಿ ನಂಬಿಕೆಗಳನ್ನು ಹೊಂದಿರುವುದು ಗೊತ್ತಾದರೆ ಅದು ಅವನಿ/ಳಿಗೆ ಮುಳುವಾಗುತ್ತದೆ. ವಿಜ್ಞಾನಿಗಳನ್ನು ವಿಶ್ವವಿದ್ಯಾನಿಲಯಗಳಿಗೆ ನೇಮಕಾತಿ ಮಾಡಿಕೊಳ್ಳುವಾಗಲೂ ಸಹ ಅವರು ದಾನಿಗಳಿಂದ ಎಷ್ಟು ಹಣವನ್ನು ಸಂಗ್ರಹಿಸಬಲ್ಲರು ಎಂಬ ಅವರ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಮಾತ್ರವಲ್ಲ, ಇತ್ತೀಚಿನವರೆಗೂ ವಿದ್ವಾಂಸರು (academics) ಬೇರೆ ಬೇರೆ ವಿಚಾರಗಳನ್ನು ಮತ್ತು ನಂಬಿಕೆಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಹೊಂದಿದ್ದ ಅಕೆಡೆಮಿಕ್ ವಲಯದಲ್ಲೂ ಇದೇ ರೀತಿಯ ರಾಜಕೀಯ ನಿರ್ಬಂಧಗಳು ಈಗ ಕಾರ್ಯಪ್ರವೃತ್ತವಾಗಿವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಜ್ಞಾನದ ಸರಕೀಕರಣವು ಅದರ ಅಗತ್ಯ ಪರಿಣಾಮವಾಗಿ, ವಿಜ್ಞಾನಿಗಳು ಚಾಲ್ತಿಯಲ್ಲಿರುವ ರಾಜಕೀಯ ನಿಲುವನ್ನು ಅನುಸರಿಸುವಂತೆ ಮಾಡುತ್ತದೆ ಮತ್ತು ವಿಜ್ಞಾನಿಗಳಲ್ಲಿ ಸಾಮಾಜಿಕ ಬೇಜವಾಬ್ದಾರಿತನವನ್ನು ಹುಟ್ಟಿ ಹಾಕುತ್ತದೆ. ವೈಜ್ಞಾನಿಕ ಅನ್ವೇಷಣೆಗಳ ಮೂಲಕ ಮಾನವ ವಿಮೋಚನೆಗೆ ಕೊಡುಗೆ ನೀಡುವುದಕ್ಕಾಗಿ ಬಂಡವಾಳಶಾಹಿಯನ್ನು ಮೀರುವ ನೈತಿಕ ಅಗತ್ಯವನ್ನು ತಮ್ಮ ವಿಚಾರಗಳ ಕೆಲಸದ ಭಾಗವಾಗಿಸುವುದು ನವ-ಉದಾರವಾದದ ಯುಗದಲ್ಲಿ ವಿಜ್ಞಾನಿಗಳಿಗೆ ನಿರಾಕರಿಸಲಾಗಿದೆ ಮತ್ತು ಅದು ಒಂದು ಹೊಂದಲಾಗದ ;ಲಕ್ಸುರಿ’ ಆಗಿಬಿಟ್ಟಿದೆ. ಹಾಗಾಗಿ, , ವಿಜ್ಞಾನದ ಆವಿಷ್ಕಾರಗಳನ್ನು ಅವು ಉಂಟುಮಾಡುವ ಪರಿಣಾಮಗಳ ಬಗ್ಗೆ ಯಾವ ಚರ್ಚೆಯನ್ನೂ ಮಾಡದೆ ಅವುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂಬುದನ್ನು. ಈ ವಿದ್ಯಮಾನವು ಸೂಚಿಸುತ್ತದೆ.
ನಮ್ಮ ಮುಂದೆ ಇಂದು ಸಂಭವಿಸುತ್ತಿರುವ ವೈಜ್ಞಾನಿಕ ಆವಿಷ್ಕಾರಗಳ ವಿಚಾರಶೂನ್ಯ ಅಳವಡಿಕೆಯ ಸಂಬಂಧವಾಗಿ ಎದ್ದು ಕಾಣುವ ಉದಾಹರಣೆಯು ಕೃತಕ ಬುದ್ಧಿಮತ್ತೆಗೆ (artificial intelligence) ಸಂಬಂಧಿಸಿದೆ. ಈ ಕೃತಕ ಬುದ್ಧಿಮತ್ತೆಯು ಹೊಂದಿರುವ ಹಲವಾರು ಸಾಧ್ಯತೆಗಳನ್ನು ಅಥವಾ ಪರಿಣಾಮಗಳನ್ನು ನಾನು ಇಲ್ಲಿ ಚರ್ಚಿಸುತ್ತಿಲ್ಲ. ಕೃತಕ ಬುದ್ಧಿಮತ್ತೆಯು ಸೃಷ್ಟಿಸುವ ಬೃಹತ್ ನಿರುದ್ಯೋಗದ ಸಮಸ್ಯೆಗೆ ಮಾತ್ರ ನನ್ನ ಕಾಳಜಿ ಸೀಮಿತಗೊಂಡಿದೆ. ಹಾಲಿವುಡ್ ಸಿನೆಮಾಗಳ ಚಿತ್ರ-ಕತೆ ಬರೆಯುವವರು (script writers) ಇತ್ತೀಚೆಗೆ ಕೈಗೊಂಡ ತಮ್ಮ ಮುಷ್ಕರದ ಮೂಲಕ ಕೃತಕ ಬುದ್ಧಿಮತ್ತೆಯು ತಮ್ಮ ವೃತ್ತಿಯನ್ನು ಕೊನೆಗಾಣಿಸಲಿರುವ ಅಂಶದ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಹಾಗೆ ನೋಡಿದರೆ ಮಾನವ ಶ್ರಮವನ್ನು ಬದಲಿಸುವ ಯಾವುದೇ ಯಾಂತ್ರಿಕ ಸಾಧನವು ಶ್ರಮ ಜೀವಿಗಳ ವಿಮೋಚನೆಯನ್ನು ಸಾಕಾರಗೊಳಿಸುವ ಸಾಧ್ಯತೆಯನ್ನು ಹೊಂದಿರುತ್ತದೆ: ಅದು ಕತ್ತೆ ಚಾಕರಿಯನ್ನು ಇಳಿಕೆ ಮಾಡುತ್ತದೆ ಅಥವಾ ಪರ್ಯಾಯವಾಗಿ ಮೊದಲಿನಷ್ಟೇ ಸಂಖ್ಯೆಯ ಕಾರ್ಮಿಕರ ನಿಯೋಜನೆಯೊಂದಿಗೆ ಉತ್ಪಾದನೆಯ ಪ್ರಮಾಣವನ್ನು ಅಗಾಧವಾಗಿ ಹೆಚ್ಚಿಸುತ್ತದೆ ಮತ್ತು ಆ ಮೂಲಕ ಜನರಿಗೆ ಸರಕು ಮತ್ತು ಸೇವೆಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಆದರೆ, ಬಂಡವಾಳಶಾಹಿಯ ಅಡಿಯಲ್ಲಿ, ಯಾಂತ್ರಿಕ ಸಾಧನದಿಂದ ಮಾನವ ಶ್ರಮವನ್ನು ಇಳಿಕೆ ಮಾಡುವ ಪ್ರತಿಯೊಂದು ಪರ್ಯಾಯ ಸಾಧನವೂ ಕೆಲಸಗಾರರ ದುಃಖವನ್ನು ಹೆಚ್ಚಿಸುತ್ತದೆ.
ಈ ಉದಾಹರಣೆಯನ್ನು ಗಮನಿಸಿ. ಒಂದು ತಾಂತ್ರಿಕ ನಾವೀನ್ಯತೆಯು ಕಾರ್ಮಿಕ ಉತ್ಪಾದಕತೆಯನ್ನು ದ್ವಿಗುಣಗೊಳಿಸುತ್ತದೆ ಎಂದು ಭಾವಿಸೋಣ. ಈ ನಾವೀನ್ಯತೆಯ ಅಳವಡಿಕೆಯ ಸಂದರ್ಭದಲ್ಲಿ, ಒಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಈ ತಾಂತ್ರಿಕ ನಾವೀನ್ಯತೆಯನ್ನು (ನವೀನ ಅವಿಷ್ಕಾರವನ್ನು) ಪ್ರತಿಯೊಬ್ಬ ಬಂಡವಾಳಗಾರನೂ ಈ ಹಿಂದೆ ಉದ್ಯೋಗದಲ್ಲಿದ್ದ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಬಳಸುತ್ತಾನೆ. ಈ ಒಂದು ಕ್ರಮವೇ ಕಾರ್ಮಿಕ ಮೀಸಲು ಪಡೆಯ ಗಾತ್ರವನ್ನು ಹೆಚ್ಚಿಸುತ್ತದೆ. ನಿರುದ್ಯೋಗದ ಈ ಹೆಚ್ಚಳದ ಕಾರಣದಿಂದಾಗಿ ಉದ್ಯೋಗದಲ್ಲಿ ಮುಂದುವರಿಯುತ್ತಿರುವವರಿಗೆ ಅವರ ನಿಜ ವೇತನದಲ್ಲಿ ಯಾವುದೇ ಹೆಚ್ಚಳ ದೊರೆಯುವುದಿಲ್ಲ. ಆದ್ದರಿಂದ, ಮೊದಲಿನ ಮಟ್ಟದ ಉತ್ಪತ್ತಿಯೇ ಒಂದು ವೇಳೆ ಉತ್ಪಾದನೆಯಾಗುತ್ತಿದ್ದ ಪರಿಸ್ಥಿತಿಯಲ್ಲಿ, ವೇತನ-ವೆಚ್ಚವು ಅರ್ಧದಷ್ಟು ಕಡಿಮೆಯಾಗಿರುತ್ತದೆ ಮತ್ತು ಮಿಗುತಾಯದ ಪ್ರಮಾಣವು ಏರಿಕೆಯಾಗಿರುತ್ತದೆ. ಆದರೆ, ವೇತನ-ವೆಚ್ಚದ ಅರ್ಧದಷ್ಟು ಪಾಲು ಮಿಗುತಾಯದೆಡೆಗೆ ವರ್ಗಾವಣೆಯಾಗುವುದರಿಂದ, ಒಟ್ಟಾರೆ ಬೇಡಿಕೆಯಲ್ಲಿ ಕುಸಿತ ಉದ್ಭವವಾಗುತ್ತದೆ (ಏಕೆಂದರೆ, ವೇತನವು ಬಹುತೇಕವಾಗಿ ಬಳಸಲ್ಪಡುತ್ತದೆ). ಪರಿಣಾಮವಾಗಿ, ಉತ್ಪಾದನೆಯನ್ನು ತಗ್ಗಿಸಲಾಗುತ್ತದೆ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗದ ಮಟ್ಟ ಏರುತ್ತದೆ. ಅಂದರೆ, ನಿರುದ್ಯೋಗವು ಈ ಸಲ ಏರಿಕೆಯಾಗುವಲ್ಲಿ, ದ್ವಿಗುಣಗೊಂಡ ಕಾರ್ಮಿಕರ ಉತ್ಪಾದಕತೆಯ ಮತ್ತು ಬೇಡಿಕೆಯ ಇಳಿಕೆಯ ಅಂಶಗಳು ಕಾರಣವಾಗಿರುತ್ತವೆ.
ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೊ, ಬೇಡಿಕೆಯಲ್ಲಿ ಕೊರತೆ ಉಂಟಾದ ಕಾರಣದಿಂದಾಗಿಯೇ ಅಧಿಕಗೊಳ್ಳುವ ನಿರುದ್ಯೋಗದ ಅಂಶವನ್ನು ಗ್ರಹಿಸಿರಲಿಲ್ಲ. ರಿಕಾರ್ಡೊ, ವೇತನವು ಪೂರ್ಣವಾಗಿ ಬಳಸಲ್ಪಡುತ್ತದೆ ಮಾತ್ರವಲ್ಲ, ಉಪಭೋಗಕ್ಕಾಗಿ ಬಳಸುವ ಭಾಗವನ್ನು ಹೊರತುಪಡಿಸಿ ಉಳಿದ ಮಿಗುತಾಯವು ಹೂಡಿಕೆಯಾಗುತ್ತದೆ ಎಂಬುದಾಗಿ ಜೀನ್-ಬ್ಯಾಪ್ಟಿಸ್ಟ್ ಸೇ ಪ್ರತಿಪಾದಿಸಿದ ನಿಯಮವನ್ನು ನಂಬಿದ್ದರು. ಹಾಗಾಗಿ, ರಿಕಾರ್ಡೊ, ವೇತನದ ಭಾಗದಿಂದ ಮಿಗುತಾಯದ ಭಾಗಕ್ಕೆ ಆಗುವ ವರ್ಗಾವಣೆಯು ಒಟ್ಟು ಬಳಕೆಯನ್ನು ಕಡಿಮೆ ಮಾಡುತ್ತದೆಯಾದರೂ ಒಟ್ಟಾರೆ ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರಂಭದಲ್ಲಿ ಮೊದಲಿನ ಉತ್ಪಾದನೆಯು ಬದಲಾಗದಂತೆ ನೋಡಿಕೊಳ್ಳುತ್ತದೆ; ಹೂಡಿಕೆಯು ಹೆಚ್ಚುವುದರಿಂದ ಉತ್ಪಾದನೆಯ ಬೆಳವಣಿಗೆಯ ದರ ಹೆಚ್ಚುತ್ತದೆ ಮತ್ತು ಅದು ಉದ್ಯೋಗ ಬೆಳವಣಿಗೆಯ ದರವನ್ನು ಹೆಚ್ಚಿಸುತ್ತದೆ; ಅಂದರೆ, ಯಂತ್ರೋಪಕರಣಗಳ ಬಳಕೆಯು ತಕ್ಷಣವೇ ಉದ್ಯೋಗಾವಕಾಶಗಳನ್ನು ಇಳಿಕೆ ಮಾಡಬಹುದಾದರೂ ಬೆಳವಣಿಗೆಯ ದರವನ್ನು ಏರಿಕೆ ಮಾಡುವುದರಿಂದಾಗಿ, ಸ್ವಲ್ಪ ಸಮಯದ ಬಳಿಕ ಉದ್ಯೋಗಗಳ ಸಂಖ್ಯೆಯು ಯಂತ್ರೋಪಕರಣಗಳ ಬಳಕೆ-ಪೂರ್ವದಲ್ಲಿ ಇದ್ದುದಕ್ಕಿಂತಲೂ ವೃದ್ಧಿಸುತ್ತದೆ ಎಂಬ ಅಭಿಪ್ರಾಯವನ್ನು ಹೊಂದಿದ್ದರು.
ಹಾಗೆ ನೋಡಿದರೆ ಸೇ ನಿಯಮವು ಯಾವುದೇ ಸಿಂಧುತ್ವವನ್ನು ಹೊಂದಿಲ್ಲ. ಬಂಡವಾಳಶಾಹಿಯ ಅಡಿಯಲ್ಲಿ, ಹೂಡಿಕೆಯು ಮಾರುಕಟ್ಟೆಯ ನಿರೀಕ್ಷಿತ ಬೆಳವಣಿಗೆಯಿಂದ ನಿರ್ಧರಿಸಲ್ಪಡುತ್ತದೆ. ಮಿಗುತಾಯದ ಪ್ರಮಾಣದಿಂದ ಅಲ್ಲ. (ಹೊರ ಜಗತ್ತಿಗೆ ಇನ್ನೂ ತೆರೆದುಕೊಳ್ಳದ ವಸಾಹತುಗಳ ಮಾರುಕಟ್ಟೆಗಳಿಗೆ ಪ್ರವೇಶಿಸಲು ಅವಕಾಶವಿದ್ದಾಗ ಅಥವಾ ಒಟ್ಟಾರೆ ಬೇಡಿಕೆಯ ಕೊರತೆಯನ್ನು ನೀಗಿಸಲು ಪ್ರಭುತ್ವವು ಮಧ್ಯಪ್ರವೇಶಿಸಲು ಸಿದ್ಧವಿದ್ದಾಗ ಮಾತ್ರ ಹೂಡಿಕೆಯು ಮಹತ್ವ ಪಡೆಯುತ್ತದೆ). ಯಂತ್ರಗಳ ಬಳಕೆಯ ನಂತರವೂ ಮೆಟ್ರೊಪಾಲಿಟನ್ ದೇಶಗಳಲ್ಲಿ ಬೃಹತ್ ಪ್ರಮಾಣದ ನಿರುದ್ಯೋಗವು ಐತಿಹಾಸಿಕವಾಗಿ ಉಂಟಾಗದಿರುವ ಕಾರಣದಲ್ಲಿ ಎರಡು ಭಾಗಗಳಿವೆ: ಮೊದಲನೆಯದು, ವಸಾಹತು ಮಾರುಕಟ್ಟೆಗಳು ಸುಲಭವಾಗಿ ಒದಗುತ್ತಿದ್ದುದರಿಂದಾಗಿ, ತಾಂತ್ರಿಕ ಬದಲಾವಣೆಗಳ ಪರಿಣಾಮವಾಗಿ ಉಂಟಾದ ನಿರುದ್ಯೋಗವನ್ನು ವಸಾಹತುಗಳಿಗೆ ವರ್ಗಾಯಿಸಲಾಯಿತು (ಅಪ-ಕೈಗಾರಿಕೀಕರಣದ ರೂಪದಲ್ಲಿ). ಅಂದರೆ, ಮೆಟ್ರೊಪಾಲಿಟನ್ ದೇಶಗಳು ನಿರುದ್ಯೋಗವನ್ನು ವಸಾಹತುಗಳಿಗೆ ರಫ್ತು ಮಾಡಿದವು. ಎರಡನೆಯದು, ತಾಂತ್ರಿಕ ಬದಲಾವಣೆಗಳ ಪರಿಣಾಮವಾಗಿ ಉಂಟಾದ ನಿರುದ್ಯೋಗವು ಸ್ಥಳೀಯವಾಗಿ ಹೆಚ್ಚು ಕಾಲ ಕಾಡಿಸಲಿಲ್ಲ. ಏಕೆಂದರೆ, ಉದ್ಯೋಗ ಕಳೆದುಕೊಂಡವರು ಅಥವಾ ಉದ್ಯೋಗ ಹುಡುಕುವವರು ವಿದೇಶಗಳಿಗೆ ವಲಸೆ ಹೋದರು. “ದೀರ್ಘ ಹತ್ತೊಂಬತ್ತನೇ ಶತಮಾನ”ದ ಉದ್ದಕ್ಕೂ (1789-1919, ಅಂದರೆ, ಫ್ರೆಂಚ್ ಕ್ರಾಂತಿಯಿಂದ ಹಿಡಿದು ಮೊದಲ ವಿಶ್ವ ಯುದ್ಧದವರೆಗೆ) ಸುಮಾರು 5 ಕೋಟಿ ಯುರೋಪಿಯನ್ನರು ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಂತಹ ಬಿಳಿಯ ವಸಾಹತುಗಳ ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋದರು.
ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ವಸಾಹತುಶಾಹಿಯು ಇನ್ನೂ ಅಸ್ತಿತ್ವದಲ್ಲಿದೆ. ಆದರೆ ಮೂರನೇ ಜಗತ್ತಿನ ದೇಶಗಳ ಮಾರುಕಟ್ಟೆಗಳು ಮೆಟ್ರೊಪಾಲಿಟನ್ ದೇಶಗಳ ಒಟ್ಟಾರೆ ಬೇಡಿಕೆಯಲ್ಲಿ ಉದ್ಭವವಾಗುವ ಯಾವುದೇ ಕೊರತೆಯನ್ನು ಕಡಮೆ ಮಾಡುವಲ್ಲಿ ಅಸಮರ್ಪಕವಾಗಿವೆ. ಅಂತೆಯೇ, ಪ್ರಭುತ್ವವು ದೇಶದ ಒಟ್ಟಾರೆ ಬೇಡಿಕೆಯ ಕೊರತೆಯನ್ನು ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅದು ತನ್ನ ಏರುತ್ತಿರುವ ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳಲು ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಕ್ರಮವು FRBM ಕಾಯ್ದೆಯ ಮಿತಿಗೆ ಒಳಪಟ್ಟಿದೆ; ಪರ್ಯಾಯವಾಗಿ, ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿದರೆ, ಹಣ ಕಾಸು ಬಂಢವಾಳದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ (ದುಡಿಯುವವರ ಮೇಲೆ ಹೆಚ್ಚು ತೆರಿಗೆ ಹೇರಿದರೆ, ಒಟ್ಟಾರೆ ಬೇಡಿಕೆಯಲ್ಲಿ ಹೆಚ್ಚಳವಾಗುವುದಿಲ್ಲ). ಆದ್ದರಿಂದ, ಈ ಎಲ್ಲ ವಿವರಗಳಿಂದ ವ್ಯಕ್ತವಾಗುವುದು ಏನೆಂದರೆ, ಒಂದು ಬಂಡವಾಳಶಾಹಿ ವ್ಯವಸ್ಥೆಯ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆಯ ಬಳಕೆಯೂ ಸೇರಿದಂತೆ, ಯಾಂತ್ರೀಕರಣವು ಅನಿವಾರ್ಯವಾಗಿ ಬೃಹತ್ ನಿರುದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದು.
ಇದೇ ಪರಿಸ್ಥಿತಿ ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗುವ ಪರಿಸ್ಥಿತಿಯೊಂದಿಗೆ ಹೋಲಿಕೆ ಮಾಡಿ ನೋಡೋಣ. ಸಮಾಜವಾದಿ ವ್ಯವಸ್ಥೆಯಲ್ಲಿ, ಕೃತಕ ಬುದ್ಧಿಮತ್ತೆಯ ಬಳಕೆಯೂ ಸೇರಿದಂತೆ ಯಾವುದೇ ಯಾಂತ್ರೀಕರಣವು ಉದ್ಯೋಗಗಳನ್ನು ಕಡಿತಗೊಳಿಸುವುದಿಲ್ಲ; ಉತ್ಪಾದನೆಯನ್ನು ಕಡಿತಗೊಳಿಸುವುದಿಲ್ಲ ಮತ್ತು ಕಾರ್ಮಿಕರ ವೇತನವನ್ನೂ ಕಡಿತಗೊಳಿಸುವುದಿಲ್ಲ. ಅದು ಕಾರ್ಮಿಕರ ಕತ್ತೆ ಚಾಕರಿಯನ್ನು ಮಾತ್ರ ಕಡಿಮೆ ಮಾಡುತ್ತದೆ. ಈ ಎಲ್ಲ ವಿಷಯಗಳೂ ಕೇಂದ್ರೀಯವಾಗಿ ನಿರ್ಧರಿಸಲ್ಪಡುತ್ತವೆ. ಎರಡು ರೀತಿಯ ಅರ್ಥವ್ಯವಸ್ಥೆಗಳ ನಡುವಿನ ಈ ಮೂಲಭೂತ ವ್ಯತ್ಯಾಸವು ಕೃತಕ ಬುದ್ಧಿಮತ್ತೆಯ ಹಾನಿಕರವಲ್ಲದ ಬಳಕೆಯು ಬಂಡವಾಳಶಾಹಿಯನ್ನು ಮೀರಿದ ಬಳಿಕ ಮಾತ್ರ ಏಕೆ ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸುತ್ತದೆ.